

ವಿರಾಜಪೇಟೆ: ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ನೌಕರರ ವೇತನ ಹೆಚ್ಚಳಗೊಳಿಸಬೇಕು ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತ ಒತ್ತಾಯಿಸಿದರು.
ಕಳೆದ 24 ವರ್ಷದಿಂದ ಬಿಸಿ ಊಟ ಯೋಜನೆ ಕಾರ್ಯಕರ್ತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೇತನ ಹೆಚ್ಚಿಸುವ ಕಾರ್ಯಕ್ಕೆ ಮುಂದಾಗಿಲ್ಲ. ಈ ಬಾರಿ ಅನೇಕ ಬಾರಿ ಮನವಿ ನೀಡಿದರೂ ಸರ್ಕಾರ ಕ್ರಮ ವಹಿಸಿಲ್ಲ. ಹಾಗಾಗಿ ಮಾ. 3 ಮತ್ತು 4 ರಂದು ರಾಜ್ಯಾದ್ಯಂತ ಬಿಸಿ ಊಟ ಸ್ಥಗಿತಗೊಳಿಸಿ ಬಂದ್‌ಗೆ ಕರೆನೀಡಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಅಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ಜಿಲ್ಲೆಯ ನೌಕರರೂ ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಹೋರಾಟಕ್ಕೆ ಬೆಂಬಲ ಸೂಚಿಸುವಂತೆ ಅವರು ಮನವಿ ಮಾಡಿದರು.
ಪ್ರಸ್ತುತ ವೇತನವನ್ನು (3,650 ರೂ.) ಪರಿಷ್ಕರಣಗೊಳಿಸಿ 6,000 ರೂ.ಗೆ ಗಳಿಗೆ ಹೆಚ್ಚಳಗೊಳಿಸಬೇಕು. ಶಾಲೆಗಳಲ್ಲಿ ಹೆಚ್ಚಿನ ಕೆಲಸ ನಿರ್ವಹಿಸಲು ಒತ್ತಡ ಹೇರಬಾರದು. ನಮ್ಮನ್ನು ಡಿ ಗ್ರೂಪ್ ನೌಕರರೆಂದು ಪರಿಗಣಿಸಬೇಕು ಸೇರಿದಂತೆ ಒಟ್ಟು 21 ಬೇಡಿಕೆಗಳನ್ನು ರಾಜ್ಯ ಸರ್ಕಾರದ ಮುಂದಿಡಲಾಗುವುದು ಎಂದು ಹೇಳಿದರು.
ಸಂಘಟನೆಯ ರಾಜ್ಯಘಟಕದ ಖಜಾಂಚಿ ಮಹಾದೇವಮ್ಮ ಮಾತನಾಡಿ, ಬಿಸಿ ಊಟ ನೌಕರರಿಗೆ ಯಾವುದೇ ವೈದ್ಯಕೀಯ ಸೌಲಭ್ಯ ಇಲ್ಲ. ಕರ್ತವ್ಯ ನಿರ್ವಹಿಸುವ ವೇಳೆ ಮರಣಹೊಂದಿದಲ್ಲಿ ಯಾವುದೇ ವಿಮಾ ಸೌಲಭ್ಯ ಇಲ್ಲವಾಗಿದೆ. ಉತ್ತರಪ್ರದೇಶ ಮತ್ತು ಪಂಜಾಬ್ ಹೈಕೊರ್ಟ್ ತೀರ್ಮಾನಿಸಿದಂತೆ ವರ್ಷದ 12 ತಿಂಗಳು ಕೆಲಸ ಮತು ಕನಿಷ್ಠ ಕೂಲಿಯನ್ನು ಕರ್ನಾಟಕ ಸರ್ಕಾರವೂ ಜಾರಿಗೆ ತರಬೇಕು . ರಾಜ್ಯದಲ್ಲಿ ದುಡಿಯುತ್ತಿರುವ 1 ಲಕ್ಷದ 18 ಸಾವಿರ ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸುವಂತಾಗಬೇಕು ಎಂದವರು ಆಗ್ರಹಿಸಿದರು. ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎ.ಸಿ. ಸಾಬು, ಕುಸುಮಾ, ತಾಲೂಕು. ಅಧ್ಯಕ್ಷರಾದ ಜಯಂತಿ ಸದಸ್ಯರಾದ ರೂಪಾ ಇತರರು ಇದ್ದರು.