

ಗುಣಾತ್ಮಕ ಶಿಕ್ಷಣ ವೃದ್ಧಿಗೆ ಸಂಕಲ್ಪ ಡಾ.ಗುರುರಾಜ ಕರಜಗಿ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಗುಣಾತ್ಮಕ ಶಿಕ್ಷಣ ವೃದ್ಧಿಗೆ ಸಂಕಲ್ಪ ಮಾಡಲಾಗಿದೆ ಎಂದು ವೇದಿಕ್ ಇನ್ಸ್ಟಿಟ್ಯೂಟ್ ಆಫ್ ಎಕ್ಸ್ಲೆನ್ಸ್ ಸಂಸ್ಥೆಯ ಗೌರವ ಅಧ್ಯಕ್ಷರೂ ಆದ ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಹೇಳಿದರು.
ನಗರ ಹೊರವಲಯದ ನಾಗನಹಳ್ಳಿ ಸಮೀಪದ ಜಿಡಿಎ ಲೇಔಟ್‌ನಲ್ಲಿರುವ ವೇದಿಕ್ ಇನ್ಸ್ಟಿಟ್ಯೂಟ್ ಆಫ್ ಎಕ್ಸ್ಲೆನ್ಸ್ ಸಂಸ್ಥೆಯಲ್ಲಿ ಭಾನುವಾರ ಶಿಕ್ಷಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಗಮನದಲ್ಲಿಟ್ಟುಕೊಂಡು ಶಿಕ್ಷಕರು ಬೋಧನೆಗೆ ಕೇಂದ್ರೀಕರಿಸಬೇಕು. ಆದರೆ ಅಂಕ ಸಂಪಾದಿಸುವುದೇ ವಿದ್ಯಾರ್ಥಿಗಳ ಜೀವನದ ಗುರಿ ಆಗಬಾರದು. ಸ್ಪಷ್ಟ ಗುರಿಯೊಂದಿಗೆ ಜೀವನದಲ್ಲಿ ಉನ್ನತಿ, ಯಶಸ್ಸು ಸಾಧಿಸಬೇಕಾದರೆ ಸಾಮಾಜಿಕ ಕಳಕಳಿ, ಮಾನವೀಯ ಮೌಲ್ಯ, ನೈತಿಕ ಶಿಕ್ಷಣದ ಅಗತ್ಯವಿದೆ ಎಂದು ಹೇಳಿದರು.
ಪಾಲಕರು ಮಕ್ಕಳ ಆಸಕ್ತಿಗೆ ಅನುಗುಣವಾಗಿ ಓದು-ಬರಹದತ್ತ ಆದ್ಯತೆ ನೀಡಬೇಕು. ಈ ದಿಸೆಯಲ್ಲಿ ಶಿಕ್ಷಕರೂ ಸೃಜನಶೀಲತೆ ಮೈಗೂಡಿಸಿಕೊಂಡು ವಿದ್ಯಾರ್ಥಿಗಳಲ್ಲಿ ಸತತ ಪರಿಶ್ರಮ, ಅಧ್ಯಯನಶೀಲತೆಗೆ ಹೆಚ್ಚಿನ ಒತ್ತುಕೊಟ್ಟು ಬೋಧಿಸಬೇಕು ಎಂದು ಕಿವಿಮಾತು ಹೇಳಿದರು.
ಕಲಬುರಗಿ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ್. ಎಸ್ ಮಾತನಾಡಿ, ನಾಗರಿಕ ಸಮಾಜದ ಸ್ವಾಸ್ಥö್ಯ ಕಾಪಾಡುವಂತಹ ಶಿಕ್ಷಣ ಸಿಗಬೇಕು. ವಿದ್ಯಾರ್ಥಿಗಳು ದೂರದೃಷ್ಟಿ, ಸ್ಪಷ್ಟ ಗುರಿಯೊಂದಿಗೆ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ವೇದಿಕ್ ಸಂಸ್ಥೆ ಅಧ್ಯಕ್ಷೆ ಮಮತಾ ಸಂತೋಷ ಪಾಟೀಲ್, ನಿರ್ದೇಶಕಿ ಮಂಜುಳಾ ರೆಡ್ಡಿ ಪಾಟೀಲ್ ಇತರರು ಇದ್ದರು. ರಾಜ್ಯ ಸಂಪನ್ಮೂಲ ವ್ಯಕ್ತಿ ಝಡ್.ಎನ್.ಜಾಹಗೀರ್‌ದಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಅಶ್ವಿನಿ ನಿರೂಪಿಸಿದರು. ಅಶ್ವಿನಿ ಶೇರಿಕಾರ್ ವಂದಿಸಿದರು. ಪ್ರಮುಖರಾದ ಮಲ್ಲಿಕಾರ್ಜುನ ರಡ್ಡಿ ಪಾಟೀಲ್, ಸಂತೋಷ ಪಾಟೀಲ್, ಎನ್.ಎಂ. ಪಾಟೀಲ್ ಸೇರಿ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.