

ಬೆಂಗಳೂರು: ನೈಋತ್ಯ ರೈಲ್ವೆ ಸರಕು ಸಾಗಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಕ್ಟೋಬರ್ ತಿಂಗಳಲ್ಲೇ 32.2 ಲಕ್ಷ ಟನ್ ವಿವಿಧ ರೀತಿಯ ಸರಕುಗಳನ್ನು ಸಾಗಿಸಿದೆ. ಲಾಕ್ಡೌನ್ ಅವಧಿಯಲ್ಲಿ ನೈಋತ್ಯ ರೈಲ್ವೆ ವೈದ್ಯಕಿಯ ಮತ್ತು ಅಗತ್ಯ ವಸ್ತುಗಳ ಸಾಗಣೆ ಕಾರ್ಯ ಸಮರ್ಪಕವಾಗಿ ಮಾಡಿತ್ತು.
ಲಾಕ್ಡೌನ್ ಸಡಿಲಿಕೆ ನಂತರವೂ ಪ್ರಯಾಣಿಕ ಸೇವೆಗಿಂತ ಸರಕು ಸಾಗಣೆ ಸೇವೆಯಲ್ಲಿ ಹೆಚ್ಚಳವಾಗಿದೆ. ಪ್ರಸಕ್ತ ಆಥಿರ್ಕ ವರ್ಷದಲ್ಲಿ ಅಕ್ಟೋಬರ್ ಅಂತ್ಯದವರೆಗೆ ಒಟ್ಟು 1.95 ಕೋಟಿ ಟನ್ ಸರಕು ಸಾಗಿಸಲಾಗಿದೆ. ಅದರಲ್ಲಿ ಅಕ್ಟೋಬರ್ ತಿಂಗಳಲ್ಲಿಯೇ 32.2 ಲಕ್ಷ ಟನ್ ಸರಕು ಸಾಗಣೆ ಮಾಡಲಾಗಿದ್ದು, ಇದು ಒಂದು ತಿಂಗಳಲ್ಲಿ ಮಾಡಲಾದ ಸರಕು ಸಾಗಣೆಯಲ್ಲಿಯೇ ಅತಿಹೆಚ್ಚಿನ ಪ್ರಮಾಣವಾಗಿದೆ.
ಮಾಸಿಕ 30 ಲಕ್ಷ ಟನ್: ಕಳೆದ ಆಗಸ್ಟ್ನಿಂದೀಚೆಗಿನ ಮೂರು ತಿಂಗಳಲ್ಲಿ ಮಾಸಿಕ ತಲಾ 30 ಲಕ್ಷ ಟನ್ ಸರಕುಗಳನ್ನು ಸಾಗಿಸಲಾಗುತ್ತಿದೆ. ಪ್ರಮುಖವಾಗಿ ವಾಹನಗಳು, ಉಕ್ಕು, ಆಹಾರ ಸಾಮಗ್ರಿಗಳು ಸೇರಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಸೆಪ್ಟೆಂಬರ್ನಲ್ಲಿ ಶೇ. 4.48 ಹಾಗೂ ಅಕ್ಟೋಬರ್ನಲ್ಲಿ ಶೇ. 8.61 ಹೆಚ್ಚಿನ ಸರಕು ಸಾಗಣೆ ಮಾಡಲಾಗಿದೆ.