

ಬೆಂಗಳೂರು: ರಾಜ್ಯದಲ್ಲೂ ಆಗಾಗ ಬೆಳಕಿಗೆ ಬರುವ ಮತಾಂತರ ಹಾಗೂ ಲವ್ ಜಿಹಾದ್ನಂಥವುಗಳನ್ನು ಬುಡಸಮೇತ ನಿರ್ಮೂಲನೆ ಮಾಡುವ ಉದ್ದೇಶದಿಂದ ಹೊಸ ಕಾನೂನು ರೂಪಿಸುವ ಬಗ್ಗೆ ಸರ್ಕಾರ ಒಲವು ತೋರಿಸಿದೆ. ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ನೀಡಿರುವ ತೀರ್ಪಿನ ಆಧಾರದಲ್ಲಿ ಮತಾಂತರ ತಡೆ ಕಾನೂನು ತರಲು ನಿರ್ಧರಿಸಲಾಗಿದೆ. ಈ ಮೂಲಕ ಲವ್ ಜಿಹಾದನ್ನೂ ನಿಯಂತ್ರಣ ಮಾಡಬಹುದು ಎಂಬುದು ಸರ್ಕಾರದ ಲೆಕ್ಕಾಚಾರ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಲವ್ ಜಿಹಾದ್ ತಡೆಗೆ ಸುಗ್ರೀವಾಜ್ಞೆ ರೂಪಿಸುವಂತೆ ಎರಡು ತಿಂಗಳ ಹಿಂದೆಯೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅಲ್ಲಿನ ಕಾನೂನು ಆಯೋಗ ನೇಪಾಳ, ಮ್ಯಾನ್ಮಾರ್, ಭೂತಾನ್, ಶ್ರೀಲಂಕಾ, ಪಾಕಿಸ್ತಾನಗಳಲ್ಲಿನ ಕಾನೂನು ಅಧ್ಯಯನ ಮಾಡಿ ವರದಿ ಸಲ್ಲಿಸಿದೆ. ಅದರ ಆಧಾರದಲ್ಲಿ ಉತ್ತರ ಪ್ರದೇಶ ಸರ್ಕಾರ ಸುಗ್ರೀವಾಜ್ಞೆ ರೂಪಿಸಲಿದೆ. ಕಾನ್ಪುರದಲ್ಲಿ ನಡೆದಿರುವ 11 ಲವ್ ಜಿಹಾದ್ ಪ್ರಕರಣಗಳನ್ನು ಸರ್ಕಾರ ವಿಶೇಷ ತನಿಖಾ ದಳದ ತನಿಖೆಗೆ ಒಪ್ಪಿಸಿದೆ.
ರಾಜ್ಯದಲ್ಲಿ 2009ರಲ್ಲಿಯೇ ಲವ್ ಜಿಹಾದ್ ಸದ್ದುಮಾಡಿತ್ತು. ಕರ್ನಾಟಕ ಹಾಗೂ ಕೇರಳದಲ್ಲಿ ಸಾವಿರಾರು ಲವ್ ಜಿಹಾದ್ ಪ್ರಕರಣಗಳು ನಡೆದಿವೆ. ಈ ಮೂಲಕ ಭಯೋತ್ಪಾದನೆ ಚಟುವಟಿಕೆಗಳಿಗೂ ಕುಮ್ಮಕ್ಕು ನೀಡಲಾಗಿದೆ ಎಂಬ ದೂರುಗಳಿವೆ.
ಯಾವಾಗ ಜಾರಿ: ಈಗಾಗಲೇ ಅಧಿಕಾರಿಗಳ ಮಟ್ಟದಲ್ಲಿ ಒಂದು ಸುತ್ತಿನ ಚರ್ಚೆ ನಡೆದಿದೆ. ಉತ್ತರ ಪ್ರದೇಶದ ಸುಗ್ರೀವಾಜ್ಞೆ ಬಂದ ಕೂಡಲೇ ಅಧ್ಯಯನ ಮಾಡಿ ರಾಜ್ಯದಲ್ಲಿಯೂ ಅದೇ ಮಾದರಿ ಸುಗ್ರೀವಾಜ್ಞೆ ತರುವುದು, ಮುಂದಿನ ಅಧಿವೇಶನದಲ್ಲಿ ಕಾನೂನು ರೂಪಿಸುವುದು ಸರ್ಕಾರದ ಉದ್ದೇಶವೆನ್ನಲಾಗಿದೆ.
9 ರಾಜ್ಯಗಳಲ್ಲಿ ಈಗಾಗಲೇ ಇದೆ ಕಾಯ್ದೆ: ಅರುಣಾಚಲ ಪ್ರದೇಶ, ಒಡಿಶಾ, ಮಧ್ಯಪ್ರದೇಶ, ಛತ್ತೀಸ್ಗಢ, ಹಿಮಾಚಲಪ್ರದೇಶ, ಜಾರ್ಖಂಡ್, ಉತ್ತರಾಖಂಡ, ಗುಜರಾತ್ ಹಾಗೂ ಉತ್ತರ ಪ್ರದೇಶಗಳಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಉಳಿದ ರಾಜ್ಯಗಳಲ್ಲಿ ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿಲ್ಲ.
ಕಾಯ್ದೆಗಳಲ್ಲಿ ಏನಿದೆ?: ಮತಾಂತರಕ್ಕೆ ಬಲವಂತ ಮಾಡುವವರಿಗೆ 5 ರಿಂದ 50 ಸಾವಿರ ರೂ. ದಂಡ ಹಾಗೂ 1 ರಿಂದ 3 ವರ್ಷಗಳ ಜೈಲು ಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ. ದೂರು ಬಂದಾಗ ಜಿಲ್ಲಾಧಿಕಾರಿಗಳು ಇದರ ತನಿಖೆ ನಡೆಸಿ, ಮತಾಂತರ ಸ್ವಯಂಪ್ರೇರಣೆಯೋ ಅಥವಾ ಬಲವಂತವೋ ಎಂಬುದರ ಬಗ್ಗೆ ವಾರದೊಳಗೆ ವರದಿ ಸಲ್ಲಿಸಬೇಕಾಗುತ್ತದೆ.
ಅಧ್ಯಯನ: ಉತ್ತರಪ್ರದೇಶ, ಹರಿಯಾಣ, ಮಧ್ಯಪ್ರದೇಶ ರಾಜ್ಯಗಳು ತರಲಿರುವ ಲವ್ ಜಿಹಾದ್ ನಿಷೇಧ ಕಾನೂನಿನ ಅಂಶಗಳನ್ನು ಅಧ್ಯಯನ ಮಾಡಿದ ನಂತರ ರಾಜ್ಯದಲ್ಲಿ ನಿರ್ಧಾರ ಮಾಡಲಾಗುತ್ತದೆ ಎಂದು ಸರ್ಕಾರದ ಮೂಲಗಳು ಹೇಳುತ್ತವೆ. ಆಕರ್ಷಣೆ, ಬಲವಂತದ ಮತಾಂತರಕ್ಕೆ ಅವಕಾಶ ನೀಡಲಾಗದು. ಪರಸ್ಪರ ಪ್ರೀತಿಸಿ ಮದುವೆಯಾದರೆ ಅದಕ್ಕೆ ಅಡ್ಡಿ ಇಲ್ಲ. ಬೇರೆ ರಾಜ್ಯಗಳ ಸುಗ್ರೀವಾಜ್ಞೆಗಳನ್ನು ಗಮನಿಸಿದ ನಂತರ ಹಿಂದು ವಿವಾಹ ಕಾಯ್ದೆ ಹಾಗೂ ರಾಜ್ಯದಲ್ಲಿರುವ ಇತರೆ ಕಾನೂನುಗಳಲ್ಲಿ ಬದಲಾವಣೆಗೆ ಸಾಧ್ಯತೆ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಸಮಾಜದಲ್ಲಿ ಲವ್ ಜಿಹಾದ್ ಸಂಪೂರ್ಣ ತೊಲಗಿಸಲು ಅಗತ್ಯ ಕಾನೂನು ತರಲು ಸರ್ಕಾರ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಿದೆ. | ಡಾ.ಸಿ.ಎನ್.ಅಶ್ವತ್ಥನಾರಾಯಣ ಉಪ ಮುಖ್ಯಮಂತ್ರಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ ಸರ್ಕಾರಗಳು ತರಲಿರುವ ಸುಗ್ರೀವಾಜ್ಞೆಗಳು ಯಾವ ಅಂಶಗಳನ್ನು ಒಳಗೊಂಡಿರುತ್ತವೆ ಎಂಬುದನ್ನು ಗಮನಿಸುತ್ತೇವೆ. ಮತಾಂತರ ಹಾಗೂ ಲವ್ ಜಿಹಾದ್ಗೆ ಇರುವ ಬೇರೆ ಬೇರೆ ಆಯಾಮಗಳನ್ನು ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. | ಬಸವರಾಜ ಬೊಮ್ಮಾಯಿ ಗೃಹ ಸಚಿವ
ಪ್ರಮುಖ ಅಂಶಗಳು
ಅಲಹಾಬಾದ್ ಹೈಕೋರ್ಟ್ ತೀರ್ಪಿನ ಆಧಾರದಲ್ಲಿ ಕರ್ನಾಟಕ ಸರ್ಕಾರ ಮದುವೆ ಉದ್ದೇಶಕ್ಕೇ ಮತಾಂತರ ಮಾಡುವುದನ್ನು ನಿಷೇಧಿಸಲು ಕಾನೂನು ತರಲಿದೆ. ಜಿಹಾದಿಗಳಿಂದ ನಮ್ಮ ಸಹೋದರಿಯರ ಗೌರವ ಕಾಪಾಡುವ ವಿಚಾರದಲ್ಲಿ ಮೌನವಾಗಿರಲು ಸಾಧ್ಯವಿಲ್ಲ. ಬಲವಂತದ ಮತಾಂತರದಲ್ಲಿ ಯಾರೇ ತೊಡಗಿದ್ದರೂ ಶಿಕ್ಷೆಗೆ ಒಳಪಡಿಸಲಾಗುತ್ತದೆ. | ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಚಿವ
ಸರ್ಕಾರದ ಮೇಲೆ ಒತ್ತಡ
ರಾಜ್ಯದಲ್ಲಿ ಹಿಂದುಪರ ಸಂಘಟನೆಗಳು ಮತಾಂತರ ನಿಷೇಧ ಕಾಯ್ದೆ ಜಾರಿಗೆ ಸರ್ಕಾರದ ಮೇಲೆ ಒತ್ತಡ ತರುತ್ತಲೇ ಇವೆ. ಆದರೆ ಯಾವುದೇ ಸರ್ಕಾರ ಆ ನಿಟ್ಟಿನಲ್ಲಿ ಪ್ರಯತ್ನ ಮಾಡಿಲ್ಲ.
ಪಕ್ಷದಿಂದ ಸೂಚನೆ
ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕಡ್ಡಾಯವಾಗಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವಂತೆ ಪಕ್ಷದ ವರಿಷ್ಠರಿಂದ ಸೂಚನೆ ಇದೆ. ಅದರ ಭಾಗವಾಗಿಯೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಚಿವ ಸಿ.ಟಿ. ರವಿ ಹೊಸ ಕಾನೂನು ತರುವ ಬಗ್ಗೆ ಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ.
ಮಂಗಳೂರಿನಲ್ಲಿ ಚರ್ಚೆ
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಮಂಗಳೂರಿನಲ್ಲಿ ನ. 5ರಂದು ನಡೆಯಲಿದೆ. ಆ ಸಭೆಯಲ್ಲಿ ರಾಜ್ಯದಲ್ಲಿ ಲವ್ ಜಿಹಾದ್ ತಡೆ ಹಾಗೂ ಮತಾಂತರ ನಿಷೇಧ ಕಾಯ್ದೆ ತರುವ ಬಗ್ಗೆ ಸರ್ಕಾರಕ್ಕೆ ಸೂಚನೆ ನೀಡಲಾಗುತ್ತದೆ ಎಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ. ಕಾರ್ಯಕಾರಿಣಿಯ ವಿಷಯಸೂಚಿಯಲ್ಲಿ ಈ ವಿಷಯವಿಲ್ಲ. ಆದರೂ ಈ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಪಕ್ಷದ ರಾಷ್ಟ್ರೀಯ ಮುಖಂಡರೊಬ್ಬರು ಸ್ಪಷ್ಟಪಡಿಸಿದರು.