

* 20 ಲಕ್ಷ ರೂ.ಗೆ ಹೆಚ್ಚಿಸುವುದಾಗಿ ಸಿಎಂ ಪ್ರಕಟ
*ಬೆಳೆ ನಷ್ಟ ತುಂಬಿಕೊಡಲು ರೈತರ ಮನವಿ
ಗಂಗಾಧರ್ ಬೈರಾಪಟ್ಟಣ ರಾಮನಗರ
ವನ್ಯ ಜೀವಿ ಮತ್ತು ಮಾನವ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಾಡು ಪ್ರಾಣಿಗಳ ದಾಳಿಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ನೀಡುವ ಪರಿಹಾರ ಮೊತ್ತವನ್ನು ಹೆಚ್ಚಳ ಮಾಡುವ ಘೋಷಣೆಯನ್ನು ಸರ್ಕಾರ ಮಾಡಿದೆ. ವನ್ಯ ಜೀವಗಳ ಉಪಟಳಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎನ್ನುವ ಬೇಡಿಕೆ ಇನ್ನೂ ಜೀವಂತವಾಗಿಯೇ ಉಳಿದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ವನ್ಯಪ್ರಾಣಿಗಳ ದಾಳಿಯಿಂದ ಮಾನವ ಪ್ರಾಣ ಹಾನಿ ಉಂಟಾದರೆ, ಅವರ ಕುಟುಂಬಸ್ಥರಿಗೆ ನೀಡುವ ದಯಾತ್ಮಕ ಧನವನ್ನು 15 ಲಕ್ಷ ರೂ.ಗಳಿಂದ 20 ಲಕ್ಷ ರೂ. ಗಳಿಗೆ ಹೆಚ್ಚಿಸಲಾಗುವುದು ಎಂದು ಪ್ರಕಟಿಸಿದ್ದಾರೆ. ಜಿಲ್ಲೆಯಲ್ಲಿ ಮಾನವ ಪ್ರಾಣ ಹಾನಿ ಪರಿಹಾರ ಮೊತ್ತ ಹೆಚ್ಚಳ ಸೇರಿ ಬೆಳೆಗಳ ನಷ್ಟಕ್ಕೂ ವೈಜ್ಞಾನಿಕ ಪರಿಹಾರ ನೀಡಬೇಕು ಎನ್ನುವ ಬೇಡಿಕೆ ನಿರಂತರವಾಗಿಯೇ ಸರ್ಕಾರದ ಮುಂದೆ ಸಲ್ಲಿಕೆ ಆಗುತ್ತಲೇ ಇದೆ. ಆದರೆ, ಈಗ ಸಿದ್ದರಾಮಯ್ಯ ಅವರು ದಯಾತ್ಮಕ ಧನ ಹೆಚ್ಚಳ ಘೋಷಣೆ ಮಾಡಿರುವುದು ಕೊಂಚ ಸಮಾಧಾನ ತಂದಿದೆ.
ಮಾನವ ಹಾನಿ ಸಂಭವಿಸಿದ ವೇಳೆ ಪರಿಹಾರ ಮೊತ್ತವನ್ನು ಹೆಚ್ಚಳ ಮಾಡಬೇಕೆನ್ನುವ ಬೇಡಿಕೆಯನ್ನು ಇಡಲಾಗಿತ್ತು. ಮಧ್ಯಪ್ರದೇಶ ರಾಜ್ಯದಲ್ಲಿ ವನ್ಯಜೀವಿ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಮಾದರಿಯಲ್ಲಿ ಕರ್ನಾಟಕದಲ್ಲೂ ಪರಿಹಾರ ನೀಡಬೇಕೆನ್ನುವ ಬೇಡಿಕೆ ಜತೆಗೆ, ಬೆಳೆ ನಷ್ಟದ ಪರಿಹಾರವನ್ನು ಹೆಚ್ಚಳ ಮಾಡುವಂತೆ ಮನವಿ ಮಾಡಲಾಗಿತ್ತು. ಜಿಲ್ಲೆಯಲ್ಲಿ ಪ್ರಾದೇಶಿಕ ಅರಣ್ಯದ ಜತೆಗೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಕಾವೇರಿ ವನ್ಯ ಜೀವಿಧಾಮಗಳು ಇವೆ. ಇಲ್ಲಿಂದ ಜನ ವಸತಿ ಪ್ರದೇಶಕ್ಕೂ ಆನೆ, ಚಿರತೆ, ಕರಡಿಗಳು ಆಹಾರ ಹುಡುಕುತ್ತಾ ಬರುವ ಪರಿಪಾಠವನ್ನು ಬೆಳೆಸಿಕೊಂಡಿವೆ. ಕಳೆದ ವರ್ಷ ಆನೆ ದಾಳಿಗೆ ತುತ್ತಾಗಿ ನಾಲ್ವರು ರೈತರು ಪ್ರಾಣ ಕಳೆದುಕೊಂಡಿದ್ದರು.
ಬೇಸಿಗೆಯಲ್ಲಿ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಳವಾಗುವ ಸಾಧ್ಯತೆಗಳಿವೆ. ಕಾಡಿನೊಳಗೆ ಆಹಾರ, ನೀರಿನ ಕೊರತೆಯಾಗದಂತೆ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸುತ್ತದೆಯಾದರೂ ಬೇಸಿಗೆಯ ರಣಭೀಕರತೆಯಿಂದ ಅಭಾವ ಹೆಚ್ಚಾದರೆ ವನ್ಯಜೀವಿಗಳು ಕಾಡಿನಿಂದ ನಾಡಿಗೆ ಲಗ್ಗೆ ಇಡುತ್ತವೆೆ. ಇಂತಹ ಸಂದರ್ಭದಲ್ಲಿ ಮಾನವ-ಪ್ರಾಣಿ ಸಂಘರ್ಷ ಏರ್ಪಡಬಹುದು. ಈಗಾಗಲೇ ರಾಮನಗರ ಜಿಲ್ಲೆಯಲ್ಲಿ ರೈಲ್ವೆ ಬ್ಯಾರಿಕೇಡ್‌ಗಳನ್ನು ಹಾಕುವ ಕಾರ್ಯ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಪ್ರಾದೇಶಿಕ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿರುವ ಆನೆಗಳನ್ನು ಕಾವೇರಿ ವನ್ಯ ಜೀವಿಧಾಮಕ್ಕೆ ಅಟ್ಟುವ ಕಾರ್ಯದಲ್ಲೂ ಆರಂಭಿಕ ಯಶಸ್ಸು ದೊರೆತಿದೆ. ಇದರ ಹೊರತಾಗಿಯೂ ಆನೆ ಬರುವುದೇ ಇಲ್ಲ ಎಂದು ಹೇಳುವ ದೈರ್ಯ ಅರಣ್ಯ ಇಲಾಖೆಗೂ ಇಲ್ಲ.
ವನ್ಯಜೀವಿಗಳಲ್ಲಿ ಕಾಡುಹಂದಿಯೂ ಒಂದಾಗಿದೆ. ಆದರೆ, ಕಾಡು ಹಂದಿ ಹಾವಳಿಯಿಂದ ಉಂಟಾಗುವ ನಷ್ಟಕ್ಕೆ ಮಾತ್ರ ಪರಿಹಾರ ದೊರೆಯುವುದಿಲ್ಲ. ಜಿಲ್ಲೆಯ ಅರಣ್ಯ ಪ್ರದೇಶಗಳ ಅಂಚಿನಲ್ಲಿರುವ ಜಮೀನುಗಳಲ್ಲಿ ಕಾಡುಹಂದಿ ಕಾಟ ಮಿತಿ ಮೀರಿದೆ. ಬೆಳೆಗಳನ್ನು ತಿಂದು ಹಾಕುವ ಕಾಡುಹಂದಿಗಳು ಕೆಲವೊಮ್ಮೆ ರೈತರ ಮೇಲೂ ದಾಳಿ ನಡೆಸುತ್ತವೆ. ಇಂತಹ ವೇಳೆ ರೈತರಿಗೆ ಪರಿಹಾರ ಸಿಗುವುದಿಲ್ಲ.
ಸರ್ಕಾರ ರೈತರಿಗೆ ಭಿಕ್ಷೆ ನೀಡುವುದಿಲ್ಲ. ತನ್ನದೇ ತಪ್ಪಿಗೆ ಪರಿಹಾರವನ್ನು ನೀಡುತ್ತದೆ. ಕಾಡು ಪ್ರಾಣಿಗಳನ್ನು ನಿಯಂತ್ರಣದಲ್ಲಿ ಇಡಬೇಕಾದ ಕೆಲಸ ಸರ್ಕಾರದ್ದು. ಆದರೆ, ಇದನ್ನು ಮಾಡುವಲ್ಲಿ ವಿಫಲವಾಗಿ ನಂತರ ವನ್ಯ ಜೀವಿಗಳ ದಾಳಿಗೆ ಮೃತಪಟ್ಟರೆ, ಇದಕ್ಕೆ ನೀಡುವ ಪರಿಹಾರಕ್ಕೆ ದಯಾತ್ಮಕ ಎನ್ನುವ ಪದದ ಮೂಲಕವೇ ನೀಡುತ್ತಿದೆ. ಇದಕ್ಕೆ ಅಂತ್ಯಹಾಡುವಂತೆ ಹಲವಾರು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲೆಯ ರೈತರು ಮನವಿ ಮಾಡಿದ್ದಾರೆ. ಆದರೆ ಈ ಬಾರಿಯ ಬಜೆಟ್‌ನಲ್ಲಿಯೂ ಇದೇ ಪದ ಬಳಕೆ ಮಾಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಾಣಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ಆದರೆ, ವನ್ಯ ಜೀವಿಗಳ ದಾಳಿಯಲ್ಲಿ ಮೃತಪಟ್ಟ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ನೀಡುವ ಘೋಷಣೆ ಸ್ವಾಗತಾರ್ಹವಾದರೂ, ಬೆಳೆ ನಷ್ಟದ ಪರಿಹಾರ ವೈಜ್ಞಾನಿಕವಾಗಿ ನೀಡುವ ಬಗ್ಗೆ ಚಕಾರ ಎತ್ತದಿರುವುದು ಬೇಸರ ತಂದಿದೆ. ದಯಾತ್ಮಕ ಪದ ತೆಗೆಯುವಂತೆ ಹಿಂದಿನಿಂದಲೂ ಕೋರುತ್ತಿದ್ದೇವೆ. ಇದನ್ನು ಸರ್ಕಾರ ತೆಗೆಯಲೇ ಬೇಕು. ಸಿ.ಪುಟ್ಟಸ್ವಾಮಿ, ರೈತ ಮುಖಂಡರು.