

ಯಲ್ಲಾಪುರ: ಅಪೂರ್ಣ ಕಾಮಗಾರಿಯ ಹಿನ್ನೆಲೆಯಲ್ಲಿ ತೋಳಗೋಡ,ಹರಿಗದ್ದೆ,ಹಿತ್ಲಳ್ಳಿ ಕಂದೂರು,ಯಡಳ್ಳಿ,ಇಳೆಹಳ್ಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು,ಸಾರ್ವಜನಿಕ ಓಡಾಟಕ್ಕೆ ತೊಂದರೆಯಾಗುತ್ತಿದೆ. ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಬುಧವಾರ ಮಂಚಿಕೇರಿಯ ಮಾಗೋಡ ಕ್ರಾಸ್ ಹಾಗೂ ಉಮ್ಮಚಗಿಯ ಹಿತ್ಲಳ್ಳಿ ಕ್ರಾಸ್ ಬಳಿ ಶಿರಸಿ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.
ರಸ್ತೆ ಅಭಿವೃದ್ಧಿ ಮಾಡದ ಅಧಿಕಾರಿಗಳ ವಿರುದ್ಧ ರಸ್ತೆಯಲ್ಲಿ ಕುಳಿತು, ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಹಾಸಣಗಿ ಗ್ರಾ.ಪಂ ಸದಸ್ಯ ಎಂ.ಕೆ.ಭಟ್ಟ ಯಡಳ್ಳಿ ಮಾತನಾಡಿ, ಒಟ್ಟು 12 ಕಿಮೀ ರಸ್ತೆ ಇದಾಗಿದ್ದು, ರಸ್ತೆಗೆ 4 ಕೋಟಿ ರೂ ಅನುದಾನ ಮಂಜೂರಿಯಾಗಿತ್ತು. ಕೇವಲ 1 ಕಿಮೀ ಮಾತ್ರ ಕಾಮಗಾರಿ ನಡೆದಿದೆ. ಗುತ್ತಿಗೆದಾರರು ಮತ್ತು ಅಧಿಕಾರಿಗಳ ನಡುವಿನ ಗೊಂದಲದಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದರಿಂದ ಜನರು ಪರಿತಪಿಸುತ್ತಿದ್ದಾರೆ ಎಂದು ವಿವರಿಸಿದರು.
ಈ ಕುರಿತು ಹಿಂದೆ ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಕಾಮಗಾರಿ ಪೂರ್ಣಗೊಳಿಸಲು ಆಗ್ರಹಿಸಲಾಗಿತ್ತು. ಅದಕ್ಕೆ ಸ್ಪಂದಿಸಿ, ಅಧಿಕಾರಿಗಳು, ಗುತ್ತಿಗೆದಾರರು ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಜನರ ಸಮಸ್ಯೆ ಬಗೆಹರಿಸುವುದಕ್ಕಿಂತ ಹೆಚ್ಚು ತಮ್ಮ ಸಮಸ್ಯೆಗಳನ್ನೇ ಜನರೆದುರು ಹೇಳಿಕೊಂಡಿದ್ದರು. ಆದಾಗ್ಯೂ ಕಾಮಗಾರಿ ಮುಂದುವರಿಯುವ ನಿರೀಕ್ಷೆಯಿಂದ ಕಾಲಾವಕಾಶ ನೀಡಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದರು ದೂರಿದರು.
ತಹಸೀಲ್ದಾರ ಎಂ.ಗುರುರಾಜ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿದರು. ಫೆ.25 ರ ಒಳಗೆ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು. 25 ರ ಒಳಗೆ ಕೆಲಸ ಪ್ರಾರಂಭವಾಗದೇ ಇದ್ದಲ್ಲಿ ಮತ್ತೆ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು. ಹಿತ್ಲಳ್ಳಿ ಗ್ರಾ ಪಂ ಉಪಾಧ್ಯಕ್ಷ ಗೋಪಾಲ ವಿ ಶಾಸ್ತ್ರೀ, ಪ್ರಮುಖರಾದ ನಾಗೇಂದ್ರ ಪತ್ರೇಕರ್, ಮಹಾಬಲೇಶ್ವರ ಭಟ್, ಪ್ರಸನ್ನ ಹೆಗಡೆ, ವಿ ಎಂ ಹೆಗಡೆ, ಮಂಜುನಾಥ ಶೇಟ್ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
ಇದನ್ನೂ ಓದಿ: ನಿಯೋಜಿತ ಶಿಷ್ಯ ನಾಗರಾಜ ಭಟ್ಟ ಪುರ ಪ್ರವೇಶ