More

    ನಿಯೋಜಿತ ಶಿಷ್ಯ ನಾಗರಾಜ ಭಟ್ ಪುರಪ್ರವೇಶ

    ಶಿರಸಿ: ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರ ನಿಯೋಜಿತ ಶಿಷ್ಯ ಶ್ರೀ ನಾಗರಾಜ ಭಟ್ ಅವರ ಪುರಪ್ರವೇಶ ಮಂಗಳವಾರ ನಡೆಯಿತು. ಅಪರೂಪದ ಈ ಕಾರ್ಯಕ್ರಮವನ್ನು ಎರಡು ಸಾವಿರಕ್ಕೂ ಅಧಿಕ ಭಕ್ತರು ಕಣ್ತುಂಬಿಕೊಂಡರು.

    ನಾಗರಾಜ ಭಟ್ ಅವರ ಮನೆಯಾದ ಯಲ್ಲಾಪುರ ತಾಲೂಕು ಈರಾಪರ ಗಂಗೆಮನೆಯಲ್ಲಿ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ನಡೆದು, ಯಲ್ಲಾಪುರ ಮಾರ್ಗವಾಗಿ ಸಂಜೆ 5 ಗಂಟೆಯ ವೇಳೆ ನಾಗರಾಜ ಭಟ್ ಆಗಮಿಸಿದರು. ಅವರನ್ನು ಬರಮಾಡಿಕೊಂಡ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಸಂಸ್ಥಾನದ ಆವರಣದಲ್ಲಿರುವ ರಾಜರಾಜೇಶ್ವರಿ ದೇವಿ, ಲಕ್ಷ್ಮೀ ನೃಸಿಂಹ ದೇವರ ಪೂಜೆ ನೆರವೇರಿಸಿದರು. ಬಳಿಕ ಗುರುಮೂರ್ತಿ ಮಂದಿರದ ದರ್ಶನ ನಡೆಸಿದರು.

    ಬಳಿಕ ನಡೆದ ಕಾರ್ಯಕ್ರಮದಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಈ ಸೃಷ್ಟಿಯಲ್ಲಿ ಜನಿಸಿದವರಲ್ಲಿ ಯೋಗ ನಿರತ ಸನ್ಯಾಸಿ ಮತ್ತು ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧ ಮಾತ್ರ ಜೀವನದ ನಂತರ ಸೂರ್ಯಮಂಡಲ ದಾಟಿ ಹೋಗಲು ಸಾಧ್ಯ. ಸ್ವತಃ ಸಾಧನೆ, ಧರ್ಮಬೋಧನೆ ಗುರುಪೀಠ ಉದ್ದೇಶ. ಈ ಎರಡೂ ಅಂಶಗಳನ್ನು ಧರ್ಮಪೀಠ ಕಾಯ್ದುಕೊಂಡು ಹೋಗಬೇಕಾಗುತ್ತದೆ. ಸನ್ಯಾಸ ಸ್ವೀಕರಿಸಿ, ಗುರು ಪರಂಪರೆ ಹೊಂದಿದ ಪೀಠ ಮುನ್ನಡೆಸುವ ಯೋಗ ಬಹುಜನ್ಮದ ಪುಣ್ಯದಿಂದ ಬರುತ್ತದೆ. ಸ್ವರ್ಣವಲ್ಲೀ ಸಂಸ್ಥಾನಕ್ಕೆ ನೂತನ ಶಿಷ್ಯ ಸ್ವೀಕಾರ ಮಾಡಬೇಕು ಎಂಬ ಉದ್ದೇಶದಿಂದ ಹಲವು ವರ್ಷಗಳಿಂದ ಹುಡುಕಾಟ

    ನಡೆದಿತ್ತು. ನಮ್ಮ ಮಠದಲ್ಲಿಯೇ ವ್ಯಾಸಂಗ ಮಾಡಿರುವ ಯೋಗ್ಯರು ನಮಗೆ ಇಂದು ಸಿಕ್ಕಿದ್ದು, ನಾನು ಹುಟ್ಟಿದ ಮೇಲೆ ಅತ್ಯಂತ ಸಂತೋಷದ ದಿನ ಇದಾಗಿದೆ ಎಂದರು.

    ತಂದೆ-ತಾಯಿಗಳಿಗೆ ಮಗನನ್ನು ಬಿಟ್ಟುಕೊಡುವಾಗ ಆಗುವ ಸಂಕಟವನ್ನು ಹಿಂದೆ ಕೂಡ ನೋಡಿದ್ದೇನೆ. ಆದರೆ, ಪೀಠಕ್ಕೆ ಶಿಷ್ಯ ಸ್ವೀಕಾರದಿಂದ ಕುಟುಂಬದ ಹಿಂದಿನ ತಲೆಮಾರಿನವರಿಗೂ ಪುಣ್ಯ ಪ್ರಾಪ್ತವಾಗುತ್ತದೆ. ತಂದೆ-ತಾಯಿಗಳ ದುಃಖಕ್ಕೆ ಮುಂದೆ ಶೇಯಸ್ಸಿದೆ ಎಂದರು.

    ಮಠದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ ಮಾತನಾಡಿ, ಸ್ವರ್ಣವಲ್ಲೀ ಸಂಸ್ಥಾನದಲ್ಲಿ ಇಂದು ಅಪರೂಪದ ಕ್ಷಣ. ಶ್ರೀಗಳ ಆಶಯದಂತೆ ಶಿಷ್ಯ ಸ್ವೀಕಾರಕ್ಕೆ ಯೋಗ್ಯರನ್ನು ಹಲವು ವರ್ಷಗಳಿಂದ ಹುಡುಕಲಾಗಿತ್ತು. ಭಗವಂತನ ಅನುಗ್ರಹದಿಂದ ಸುಲಭವಾಗಿ ಸಾಧ್ಯವಾಗಿದೆ. ಜ. 25ರಂದು ಮಠದ ಆಡಳಿತ ಮಂಡಳಿ ಸದಸ್ಯರೆಲ್ಲ ಅವರ ಮನೆಗೆ ತೆರಳಿ ಕೇಳಿಕೊಂಡಿದ್ದೆವು ಎಂದರು.

    ಗಂಗೆಮನೆಯಿಂದ ಭಕ್ತಿಪೂರ್ವಕ ಬೀಳ್ಕೊಡುಗೆ

    ಯಲ್ಲಾಪುರ: ಸ್ವರ್ಣವಲ್ಲೀ ಮಠದ ನಿಯೋಜಿತ ಉತ್ತರಾಧಿಕಾರಿ ವಿದ್ವಾನ್ ನಾಗರಾಜ ಭಟ್ಟ ಅವರನ್ನು ತಾಲೂಕಿನ ಈರಾಪುರದ ಗಂಗೆಮನೆಯ ಅವರ ನಿವಾಸದಿಂದ ಸನ್ಯಾಸತ್ವ ಸ್ವೀಕಾರಕ್ಕಾಗಿ ಬುಧವಾರ ಸ್ವರ್ಣವಲ್ಲೀ ಮಠಕ್ಕೆ ಭಕ್ತಿಪೂರ್ವಕವಾಗಿ ಬೀಳ್ಕೊಡಲಾಯಿತು.

    ಬೆಳಗ್ಗೆಯಿಂದ ಶತರುದ್ರಾಭಿಷೇಕ, ವೇದ ಪಾರಾಯಣ, ಮಾತೃಭೋಜನ ಮುಂತಾದ ಧಾರ್ವಿುಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ನಡೆದ ವೈದಿಕ ಮಂತ್ರಾಕ್ಷತೆ ಸಂದರ್ಭದಲ್ಲಿ ತಾಲೂಕು ಹವ್ಯಕ ಸಂಘದ ಅಧ್ಯಕ್ಷ ಡಿ. ಶಂಕರ ಭಟ್ಟ, ಪುರೋಹಿತ ಗಿರೀಶ ಭಟ್ಟ ಗಿಡಗಾರಿ ಇತರರು ಮಾತನಾಡಿ, ನಾಗರಾಜ ಭಟ್ಟರ ಚಿನ್ನಾಪುರ ಸೀಮೆಯಿಂದ ಶ್ರೀಮಠಕ್ಕೆ ಯತಿಗಳಾಗಿ ಹೋಗುತ್ತಿರುವುದು ಧನ್ಯತೆಯ ಕ್ಷಣ ಎಂದರು. ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

    ಮಧ್ಯಾಹ್ನ ಶ್ರೀಮಠದ ಪ್ರತಿನಿಧಿಗಳೊಂದಿಗೆ ಸಭೆಯಲ್ಲಿ ಪಾಲ್ಗೊಂಡ ವಿದ್ವಾನ್ ನಾಗರಾಜ ಭಟ್ಟ ಅವರು, ನಂತರ ತಂದೆ-ತಾಯಿ, ಕುಟುಂಬದ ಹಿರಿಯರು, ಪುರೋಹಿತರು, ವಿದ್ವಾಂಸರ ಆಶೀರ್ವಾದ ಪಡೆದರು. 3.20ರ ಮುಹೂರ್ತದಲ್ಲಿ ಮನೆ ದೇವರ ಮೂರ್ತಿಯನ್ನು ಹಿಡಿದು ಮನೆಯಿಂದ ಸ್ವರ್ಣವಲ್ಲೀ ಮಠದತ್ತ ಪ್ರಯಾಣ ಬೆಳೆಸಿದರು. ಅವರನ್ನು ತಂದೆ-ತಾಯಿ, ಕುಟುಂಬದವರು, ಸಂಬಂಧಿಕರು ಭಾವುಕರಾಗಿ ಬೀಳ್ಕೊಟ್ಟರು. ನಾಗರಾಜ ಭಟ್ಟರನ್ನು ಸೇರಿದ್ದ ಸಾವಿರಾರು ಭಕ್ತರು ಭಕ್ತಿಪೂರ್ವಕವಾಗಿ ಬೀಳ್ಕೊಟ್ಟರು. ಮಾರ್ಗದುದ್ದಕ್ಕೂ ಅಲ್ಲಲ್ಲಿ ಭಕ್ತರು ನಿಂತು, ಭಾವಿ ಯತಿಗಳ ದರ್ಶನ ಪಡೆದರು. ನೂರಾರು ವಾಹನಗಳಲ್ಲಿ ಶ್ರೀ ಮಠದವರೆಗೂ ಹೋಗಿ ನಾಗರಾಜ ಭಟ್ಟರನ್ನು ಬೀಳ್ಕೊಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts