ಆದಾಯ ಹೆಚ್ಚಿಸಿದ ಮಿಶ್ರ ಕೃಷಿ

17-bidadi-2
Published on

> ಬಾಳೆ, ಪಪ್ಪಾಯ, ಬಟರ್​ ಫ್ರೂಟ್ಸ್​ ಬೆಳೆದು ಲಾಭ ಕಾಣುತ್ತಿರುವ ಯುವ ರೈತ ಪ್ರಕಾಶ್​

*ಚೇತನ್​ ಚಕ್ಕೆರೆ, ಬಿಡದಿ ಜಮೀನಿನಲ್ಲಿ ಉತ್ತಮ ಬೆಳೆ ಬೆಳೆದರೂ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ಲಾಸ್​ ಆಯ್ತು, ಕೈ ಸುಟ್ಟುಕೊಂಡೆ ಎಂದು ಹೇಳುವವರೇ ಹೆಚ್ಚಾಗಿರುವ ಕಾಲಟ್ಟದಲ್ಲಿ ಇಲ್ಲೊಬ್ಬ ಯುವ ರೈತ ಇರುವ ಕಡಿಮೆ ಜಮೀನಿನಲ್ಲೇ ಮಿಶ್ರ ಬೆಳೆ ಬೆಳೆದು ಉತ್ತಮ ಆದಾಯ ಕಂಡುಕೊಂಡಿದ್ದಾರೆ. ಹೌದು....! ಕುರಬರ ಕರೇನಹಳ್ಳಿ ಯುವ ರೈತ ಪ್ರಕಾಶ್​ ಎರಡು ಎಕರೆ ಭೂಮಿಯಲ್ಲಿ ಬಾಳೆ, ಪಪ್ಪಾಯ, ಬಟರ್​ ಫ್ರೂಟ್​ ಸೇರಿ ಸಾಂಬಾರು ಪದಾರ್ಥಗಳ ಬೆಳೆಗಳನ್ನೂ ಬೆಳೆದು ಸೈ ಎನಿಸಿಕೊಂಡಿದ್ದಾರೆ.

ಕಡಿಮೆ ಖರ್ಚು, ಆದಾಯ ಹೆಚ್ಚು

ನರ್ಸರಿಯಿಂದ ಪಪ್ಪಾಯ ಸಸಿಗಳನ್ನು ತಂದು ಒಂದು ಎಕರೆಯಲ್ಲಿ ಪ್ರಕಾಶ್​ ನಾಟಿ ಮಾಡಿದ್ದು, ಇದೀಗ ಉತ್ತಮ ಸಲು ಸಹ ಇದೆ. ಬೆಂಗಳೂರು ಹಾಗೂ ಬಿಡದಿಯ ಮಾರುಕಟ್ಟೆಗೆ ನೇರವಾಗಿ ತಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾರೆ. ಪಪ್ಪಾಯ ಬೆಳೆಗೆ ಯಾವುದೇ ರಾಸಾಯನಿಕ ಬಳಸದೆ ಕೊಟ್ಟಿಗೆ ಗೊಬ್ಬರ ಬಳಸುತ್ತಿರುವುದು ವಿಶೇಷ. ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯವನ್ನು ಪಪ್ಪಾಯ ತಂಡುಕೊಡುತ್ತಿದೆ ಎಂದು ಪ್ರಕಾಶ್​ ತಿಳಿಸಿದರು.

ಹೂವು ಕಚ್ಚಿರುವ ಬಾಳೆ

ಪ್ರಕಾಶ್​ ಅವರು ಮುಕ್ಕಾಲು ಎಕರೆ ಭೂಮಿಯಲ್ಲಿ ವಾಣಿಜ್ಯ ಬೆಳೆಯಾಗಿ ಏಲಕ್ಕಿ ಬಾಳೆ ನೆಟ್ಟಿದ್ದು, ಬಾಳೆ ಗಿಡಗಳು ಹೂವು ಬಿಟ್ಟು ಕಾಯಿ ಕಚ್ಚುವ ಹಂತದಲ್ಲಿವೆ. ಮೊದಲು ಜಮೀನಿನಲ್ಲಿ ಗುಂಡಿ ಅಗೆದು ವೈಾನಿಕವಾಗಿ ಗಿಡಗಳನ್ನು ನೆಟ್ಟು ಪೋಷಣೆ ಮಾಡಿಕೊಂಡು ಬಂದಿದ್ದಾರೆ. ಬಾಳೆಗೆ ರೋಗದ ಲಣ ಹೆಚ್ಚಾಗಿ ಕಾಣಿಸಿಕೊಳ್ಳುವುದು ಹಾಗೂ ಅದರ ಬೆಳವಣಿಗೆಗೆ ಕೆಲ ರಾಸಾಯನಿಕಗಳ ಅವಶ್ಯಕವಾಗಿರುವ ಕಾರಣ ಬಾಳೆಗಷ್ಟೇ ಕೆಲ ರಾಸಾಯನಿಕ ಬಳಸಲಾಗುತ್ತಿದೆ.

ನರೇಗಾ ವರದಾನ

ನರೇಗಾ ಉದ್ಯೋಗ ಖಾತ್ರಿ ಯೋಜನೆಯನ್ನು ಪ್ರಕಾಶ್​ ಸಕಲ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡಿದ್ದು, ಜಮೀನಿನಲ್ಲಿ ಬೆಳೆದಿರುವ ಬಾಳೆ ಹಾಗೂ ಪಪ್ಪಾಯ ಬೆಳೆಗೆ ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆಯಿಂದ ಸಹಾಯ ಧನ ಪಡೆದುಕೊಂಡಿದ್ದಾರೆ.

ಹನಿ ನೀರಾವರಿಗೆ ಒತ್ತು

ಎರಡು ಎಕರೆ ಭೂಮಿಯಲ್ಲಿ ಒಂದು ಬೋರ್​ವೆಲ್​ ಕೊರೆಸಿದ್ದು, ಪ್ರತಿನಿತ್ಯ ನೀರು ಹಾಯಿಸುವ ಕೆಲಸಕ್ಕೆ ಹೋಗದೆ ಹನಿ ನೀರಾವರಿ ಮೊರೆ ಹೋಗಿದ್ದಾರೆ. 2018ರಲ್ಲೇ ಜಮೀನಿನಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಕೆ ಮಾಡಿಕೊಂಡು ನೀರಿನ ಉಳಿತಾಯ ಹಾಗೂ ಶ್ರಮವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿದ್ಯುತ್​ ಸಮಸ್ಯೆ ಅಧಿಕವಾಗಿದ್ದು, ಬೋರ್​ವೆಲ್​ನಿಂದ ಬರುವ ನೀರನ್ನು ಕೃಷಿಗೆ ಹಾಯಿಸಲು ಯಾರಾದರೊಬ್ಬರು ಕೂಲಿ ಇರಲೇಬೇಕು. ಆದ್ದರಿಂದ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿರುವುದಾಗಿ ಪ್ರಕಾಶ್​ ತಿಳಿಸಿದರು.

ರಜಾದಿನಗಳಲ್ಲಿ ಬೇಸಾಯ!

ಪ್ರಕಾಶ್​ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಹಗಲು ಹಾಗೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಬೇಕಿದೆ. ಇಷ್ಟಿದ್ದರೂ ವ್ಯವಸಾಯದ ಕಡೆಗೆ ಹೆಚ್ಚು ಆಸಕ್ತಿ ಹೊಂದಿರುವ ಇವರು, ಶನಿವಾರ, ಭಾನುವಾರ ಹಾಗೂ ಇತರ ರಜಾದಿನಗಳಲ್ಲಿ ವ್ಯವಸಾಯದ ಕಡೆಗೆ ಹೆಚ್ಚು ಗಮನಹರಿಸಿ, ರಜಾದಿನಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಜಮೀನಿನಲ್ಲೇ ವ್ಯವಸಾಯ ಮಾಡುವ ಮೂಲಕ ಯಶಸ್ಸು ಕಂಡುಕೊಂಡಿದ್ದಾರೆ.

ಎರೆಹುಳು ಗೊಬ್ಬರ ಬಳಕೆ ಹೆಚ್ಚು

ಪ್ರಕಾಶ್​ ಬೆಳೆದಿರುವ ಎಲ್ಲ ಬೆಳೆಗಳಿಗೆ ಎರೆಹುಳು ಗೊಬ್ಬರವನ್ನು ಹೆಚ್ಚಾಗಿ ಬಳಸುತ್ತಾರೆ. ಅದಕ್ಕಾಗಿ ಎರೆಹುಳು ತೊಟ್ಟಿಗಳನ್ನೂ ನಿರ್ಮಾಣ ಮಾಡಿದ್ದಾರೆ. ಮೊದಲು ಎರೆಹುಳು ಸಾಕಾಣಿಕೆ ಮಾಡುತ್ತಿದ್ದವರು ಕಾಲಕ್ರಮೇಣ ಬಿಟ್ಟಿದ್ದು ಬೇರೆಕಡೆಯಿಂದ ಹಣ ಪಾವತಿಸಿ ಗೊಬ್ಬರ ತಂದು ಬೆಳೆಗಳಿಗೆ ಹಾಕುತ್ತಾರೆ. ಬಾಳೆ, ಪಪ್ಪಾಯ ಜತೆಗೆ ಅಡಕೆ, ಬಟರ್​ ್ರೂಟ್​, ಏಲಕ್ಕಿ, ಸೇಬು ಸೇರಿ ಹಲವು ಗಿಡಗಳನ್ನು ಬೆಳೆದಿದ್ದಾರೆ.

ನಾನು ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರೂ ವ್ಯವಸಾಯದತ್ತ ಒಲವು ಹೆಚ್ಚಿದೆ. ಹಾಗಾಗಿ ನಮ್ಮ ಜಮೀನಿನಲ್ಲಿ ಏನಾದರೂ ಹೊಸ ಪ್ರಯೋಗ ಮಾಡಿ ವಿವಿಧ ಬೆಳೆ ಬೆಳೆಯಲು ಆರಂಭಿಸಿದೆ. ವೈಾನಿಕವಾಗಿ ಬೆಳೆ ಬೆಳೆಯುವ ಕಡೆಗೆ ಹೆಚ್ಚು ಒತ್ತು ನೀಡಿದೆ. ಸಾಕಷ್ಟು ಹಣ್ಣಿನ ಗಿಡ ಬೆಳೆಯಲಾಗಿತ್ತು. ಸೇಬಿನ ಗಿಡಗಳನ್ನು ಬೇರೆಡೆಯಿಂದ ತರಿಸಿ ನೆಡಲಾಗಿತ್ತು. ಆದರೆ ಅಂದುಕೊಂಡಂತೆ ಗಿಡಗಳು ಬೆಳೆಯಲಿಲ್ಲ. ಈಗ ಪಪ್ಪಾಯ ಹಾಗೂ ಬಾಳೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.> ಪ್ರಕಾಶ್​, ರೈತ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net