ವಿವಿಧ ಕಾಯಿಲೆಗಳಿಂದ ಅಂಗವಿಕಲತೆ ಹೊಂದಿದವರ ಆರೈಕೆದಾರರಿಗೆ ಪ್ರೋತ್ಸಾಹ ಧನ

Caregivers
Published on

ಬೆಂಗಳೂರು: ರಾಜ್ಯದಲ್ಲಿ ಸೆರೆಬ್ರಲ್ ಪಾಲ್ಸಿ, ಮಸ್ಕಲರ್ ಡಿಸ್ಟ್ರಾಪಿ, ಪಾರ್ಕಿನ್ಸನ್, ಮಲ್ಟಿಪಲ್ ಸ್ಲೆರಾಸಿಸ್ ಕಾಯಿಲೆಗಳಿಂದಾಗಿ ಅಂಗವಿಕಲತೆ ಹೊಂದಿರುವ ವ್ಯಕ್ತಿಗಳ ಆರೈಕೆದಾರರಿಗೆ ಪ್ರತಿ ತಿಂಗಳು 1 ಸಾವಿರ ರೂ. ಪ್ರೋತ್ಸಾಹಧನ ನೀಡಲು ತಕ್ಷಣ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ಸರ್ಕಾರ ಆದೇಶ ಮಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಬಜೆಟ್‌ನಲ್ಲಿ ಬಾಲ್ಯದಲ್ಲಿ ಕಂಡುಬರುವ ಚಲನೆಯ ಅಸ್ವಸ್ಥತೆ (ಸೆರೆಬ್ರಲ್ ಪಾಲ್ಸಿ), ಮಸ್ಕಲರ್ ಡಿಸ್ಟ್ರಾಪಿ (ಅನುವಂಶಿಕ ಸ್ನಾಯು ದೌರ್ಬಲ್ಯ), ಮಲ್ಟಿಪಲ್ ಸ್ಲೆರಾಸಿಸ್ ಹಾಗೂ ಪಾರ್ಕಿನ್‌ಸನ್ ಕಾಯಿಲೆಯಿಂದ ಬಳಲುತ್ತಿರುವವರ ಆರೈಕೆದಾರರಿಗೆ ಪ್ರತಿ ತಿಂಗಳು 1 ಸಾವಿರ ರು. ಪ್ರೋತ್ಸಾಹ ಧನ ಘೋಷಿಸಿದ್ದರು. ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಈ ಆದೇಶ ಹೊರಡಿಸಿದೆ.

ಹೊಸ ಯೋಜನೆಯಲ್ಲಿ ಬೆನ್ನು ಹುರಿ ಅಪಘಾತದ ಅಂಗವಿಕಲರು, ಬುದ್ಧಿ ಮಾಂದ್ಯತೆ ಎರಡು ಬಗೆಯ್ನೂ ಸೇರಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಬೆನ್ನುಹುರಿ ಅಪಘಾತ ಅಂಗವಿಕಲರು ಹಾಗೂ ಬುದ್ಧಿ ಮಾಂದ್ಯತೆ ಕುರಿತ ಪ್ರಸ್ತಾವನೆಗೆ ತಾತ್ಕಾಲಿಕ ತಡೆ ನೀಡಲಾಗಿದೆ. ಉಳಿದಂತೆ ಸೆರೆಬ್ರಲ್ ಪಾಲ್ಸಿ, ಮಸ್ಕಲರ್ ಡಿಸ್ಟ್ರಾಪಿ, ಮಲ್ಟಿಪಲ್ ಸ್ಲೆರಾಸಿಸ್ ಹಾಗೂ ಪಾರ್ಕಿನ್‌ಸನ್ ಪೀಡಿತರ ಆರೈಕೆದಾರರಿಗೆ ಪ್ರತಿ ತಿಂಗಳು 1 ಸಾವಿರ ರು. ನೀಡಲು 4 ಕೋಟಿ ರು. ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ.

ಆಯ್ಕೆಗೆ ಸಮಿತಿ ರಚನೆ: ಸೌಲಭ್ಯ ಕಲ್ಪಿಸಲು ಅರ್ಹ ಫಲಾನುಭವಿಗಳ ಆಯ್ಕೆಗೆ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಬೇಕು. ಕಾಯಿಲೆ ಪೀಡಿತರ ವಿಶಿಷ್ಟ ಗುರುತಿನ ಚೀಟಿ, ಅಂಗವಿಕಲತೆಯ ಪ್ರಮಾಣ ಶೇ.75 ಮತ್ತು ಅದಕ್ಕಿಂತ ಹೆಚ್ಚಿರುವ ಪ್ರಮಾಣಪತ್ರ ನೀಡಬೇಕು. ವಯಸ್ಸಿನ ಮಿತಿ ಹಾಗೂ ಆದಾಯ ಮಿತಿ ವಿಧಿಸಬಾರದು ಎಂದು ಸ್ಪಷ್ಟಪಡಿಸಲಾಗಿದೆ. ಜಿಲ್ಲಾ ಮಟ್ಟದ ಸಮಿತಿಯಲ್ಲಿ ಯೋಜನೆಯ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು.

ಇದಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಅಧ್ಯಕ್ಷರಾಗಿರಬೇಕು. ಜಿಲ್ಲಾ ಆರೋಗ್ಯ ಅಧಿಕಾರಿ, ಜಿಲ್ಲೆಯಲ್ಲಿ ವಿಕಲಚೇತನರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಒಂದು ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿ ಸದಸ್ಯರಾಗಿ, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದೆ.

ಆಯ್ಕೆಯಾದ ಫಲಾನುಭವಿಯ ಆರೈಕೆದಾರರ ಬ್ಯಾಂಕ್, ಅಂಚೆ ಕಚೇರಿ ಉಳಿತಾಯ ಖಾತೆಗೆ ಪ್ರೋತ್ಸಾಹಧನ ಜಮೆ ಮಾಡಬೇಕು.ಆಯ್ಕೆಯಾದ ವಿಕಲಚೇತನ ಫಲಾನುಭವಿಯ ಆರೈಕೆದಾರರು ಮರಣ ಹೊಂದಿದರೆ ಅಥವಾ ವಿಕಲಚೇತನ ಫಲಾನುಭವಿಯ ಲಿಖಿತ ಮನವಿಯ ಮೇರೆಗೆ ಬೇರೆ ಆರೈಕೆದಾರರನ್ನು ಜಿಲ್ಲಾ ಸಮಿತಿಯಲ್ಲಿ ಆಯ್ಕೆ ಮಾಡಬೇಕು. ವಿಕಲಚೇತನ ಫಲಾನುಭವಿ ಮರಣ ಹೊಂದಿದರೆ ಪ್ರೋತ್ಸಾಹಧನ ಮಂಜೂರಾತಿ ತಂತಾನೇ ರದ್ದಾಗಬೇಕು ಎಂದು ಆದೇಶದಲ್ಲಿ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net