

ಹಾಲು ಉತ್ಪಾದನಾ ವೆಚ್ಚ ಹೆಚ್ಚಳದಿಂದಾಗಿ ವಿಮುಖರಾಗುತ್ತಿರುವ ರೈತರು
ಉತ್ಪಾದಕರಿಗೆ ಸಂದಾಯವಾಗಬೇಕಿದೆ 100 ಕೋಟಿ ರೂ.
ಗಂಗಾಧರ್ ಬೈರಾಪಟ್ಟಣ ರಾಮನಗರ
ಒಂದೆಡೆ ನಂದಿನಿ ಉಳಿಸಿ ಅಭಿಯಾನ ನಡೆಯುತ್ತಿದೆ, ಆದರೆ, ಮತ್ತೊಂದೆಡೆ ಹೈನುಗಾರರು ಸರ್ಕಾರದ ಪ್ರೋತ್ಸಾಹ ಧನಕ್ಕಾಗಿ 5 ತಿಂಗಳಿಂದಲೂ ಕಾದು ಕುಳಿತಿದ್ದಾರೆ.
ಮನೆಯಲ್ಲಿ ಎರಡು ಹಸು ಕಟ್ಟಿಕೊಂಡರೆ ಸಾಕು, ನೆಮ್ಮದಿಯಾಗಿ ಜೀವನ ಮಾಡಬಹುದು ಎಂಬ ಮಾತು ಈಗ ಸುಳ್ಳಾಗುವುದೇನೋ ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಒಂದೆಡೆ ಹಾಲು ಉತ್ಪಾದನಾ ವೆಚ್ಚ ಹೆಚ್ಚಳ, ಮತ್ತೊಂದೆಡೆ ನೀಡಿದ್ದ ವಾಗ್ದಾನವನ್ನು ಸರಿಯಾದ ಸಮಯಕ್ಕೆ ಈಡೇರಿಸಲು ಸರ್ಕಾರ ಪದೇ ಪದೆ ವಿಲವಾಗುತ್ತಿರುವ ಕಾರಣ ರೈತರು ಕಂಗಾಲಾಗಿದ್ದಾರೆ. ಇದರಿಂದಾಗಿ ಹೈನುಗಾರಿಕೆಯಿಂದ ವಿಮುಖರಾಗುವ ಸನ್ನಿವೇಶ ಹತ್ತಿರವಾಗುವ ಲಕ್ಷಣ ಕಂಡುಬರುತ್ತಿದೆ.
ಹೈನುಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ರಾಜ್ಯ ಸರ್ಕಾರ ಪ್ರತಿ ಲೀಟರ್ ಹಾಲಿಗೆ ಪ್ರಸ್ತುತ 5 ರೂ. ಪ್ರೋತ್ಸಾಹ ಧನ ನೀಡುತ್ತಿದೆ. ಈ ಹಣ ರೈತರ ಖಾತೆಗೆ ನೇರವಾಗಿ ಜಮೆ ಆಗುತ್ತದೆ. ಆದರೆ, 5 ತಿಂಗಳಿನಿಂದಲೂ ಈ ಹಣ ರೈತರ ಖಾತೆಗೆ ಸೇರಿಲ್ಲ. ಬೆಂಗಳೂರು ನಗರ ಮತ್ತು ರಾಮನಗರ ಜಿಲ್ಲೆಗಳನ್ನು ಒಳಗೊಂಡ ಬಮುಲ್ ವ್ಯಾಪ್ತಿಯಲ್ಲಿ ಪ್ರಸ್ತುತ 17 ಲಕ್ಷ ಲೀಟರ್ ಹಾಲು ಪ್ರತಿ ದಿನ ಉತ್ಪಾದನೆ ಆಗುತ್ತಿದೆ.
ಸುಮಾರು 100 ಕೋಟಿ ರೂ. ಪ್ರೋತ್ಸಾಹ ಧನವನ್ನು ಸರ್ಕಾರ ಬಿಡುಗಡೆ ಮಾಡಬೇಕಾಗಿದೆ. ಪ್ರಸ್ತುತ ಬಮುಲ್ ಹಾಲಿನ ಫ್ಯಾಟ್ಗೆ ಅನುಗುಣವಾಗಿ ಖರೀದಿ ದರ ನೀಡುತ್ತಿದೆ. ಆದರೂ, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ರೈತರ ಕೈ ಸುಡುವಂತೆ ಮಾಡಿದೆ.
ರಾಜ್ಯದಲ್ಲಿ ಹಾಲಿನ ಉತ್ಪಾದನಾ ಪ್ರಮಾಣ ಕಡಿಮೆ ಆಗುತ್ತಿದೆ. ಬಮುಲ್ಗೆ ಜಾಗತಿಕ ಮನ್ನಣೆ ಕೊಡಿಸುವ ನಿಟ್ಟಿನಲ್ಲಿ ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೊಸ ಪ್ರಯೋಗ ಮತ್ತು ಆವಿಷ್ಕಾರ ನಡೆಸುತ್ತಲೇ ಇದ್ದಾರೆ.
ಮತ್ತೊಂದೆಡೆ ವಾಸ್ತವದಲ್ಲಿ ವಾತಾವರಣ ವೈಪರೀತ್ಯ, ಪಶುಆಹಾರ, ಹಸಿರು ಮೇವಿನ ಬೆಲೆ ಹೆಚ್ಚಳ ಕಾರಣಕ್ಕೆ ರೈತರು ಹೈನೋದ್ಯಮದಿಂದ ವಿಮುಖರಾಗುತ್ತಿದ್ದಾರೆ. ರಾಮನಗರ ಜಿಲ್ಲೆ ಒಂದರಲ್ಲಿಯೇ 800ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಗಳಿದ್ದು, 55 ಸಾವಿರಕ್ಕೂ ಹೆಚ್ಚು ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನ ಜನ ಮತ್ತೊಬ್ಬರಿಂದ ಮೇವು ಖರೀದಿ ಮಾಡಿಯೇ ಹೈನುಗಾರಿಕೆ ಮಾಡುತ್ತಿದ್ದಾರೆ.
ಪ್ರತಿ ಎಕರೆ ಹಸಿರು ಮೇವಿನ ಬೆಲೆ 50 ಸಾವಿರ ರೂ. ತಲುಪಿದ್ದರೆ, 50 ಕೆಜಿ ನಂದಿನಿ ಗೋಲ್ಡ್ ಪಶುಆಹಾರ 1280 ರೂ. ಆಗಿದೆ. ಇನ್ನು ಖಾಸಗಿ ಆಗಿ ಖರೀದಿ ಮಾಡುವ ಬೂಸಾ, ಹಿಂಡಿಯ ಬೆಲೆಯೂ ಹೆಚ್ಚಳಗೊಂಡಿರುವುದು ರೈತರಿಗೆ ಹೊರೆ ಹೆಚ್ಚಿಸಿದೆ.
ಆರಂಭದ ದಿನಗಳಿಂದಲೂ ಸಾಮಾನ್ಯವಾಗಿ 3&4 ತಿಂಗಳಿಗೊಮ್ಮೆ ಪ್ರೋತ್ಸಾಹ ಧನವನ್ನು ಸರ್ಕಾರ ನೀಡುತ್ತಿದೆ. ಒಕ್ಕೂಟಗಳು ಹಾಲಿನ ಸಂಗ್ರಹದ ಆಧಾರದ ಮೇಲೆ ಪ್ರೋತ್ಸಾಹಧನಕ್ಕೆ ಮಾಹಿತಿ ನೀಡುತ್ತವೆ. ನೇರವಾಗಿ ಆರ್ಥಿಕ ಇಲಾಖೆ ಪ್ರೋತ್ಸಾಹ ಧನ ಬಿಡುಗಡೆ ಮಾಡುತ್ತದೆ. ಪಿ.ನಾಗರಾಜು, ಬಮುಲ್ ನಿರ್ದೇಶಕ, ರಾಮನಗರ
==
ಕಳೆದ 5 ತಿಂಗಳಿಂದಲೂ ನಮಗೆ ಪ್ರೋತ್ಸಾಹ ಧನ ಬಂದಿಲ್ಲ. ಈಗ ಉತ್ಪಾದನಾ ವೆಚ್ಚ ದಿನೇ ದಿನೇ ಹೆಚ್ಚಳವಾಗುತ್ತಿದೆ. ಸರ್ಕಾರ ನಿಗದಿತ ಸಮಯದಲ್ಲಿ ಪ್ರೋತ್ಸಾಹ ಧನ ನೀಡಬೇಕು. ಜತೆಗೆ ಮಳೆಗಾಲವಾಗಿರುವ ಈ ಸಂದರ್ಭದಲ್ಲಿ ಹಸಿರು ಮೇವೂ ದೊರೆಯದಂತಹ ಪರಿಸ್ಥಿತಿ ನಿರ್ಮಾಣವಾಗಿ ರೈತರಿಗೆ ಕಷ್ಟವಾಗಿದೆ. > ಎಲ್.ಎಸ್.ಸ್ವಾಮಿ, ಲಕ್ಕೋಜನಹಳ್ಳಿ, ಹೈನುಗಾರ
ಬಮುಲ್ ಅಧ್ಯಕ್ಷರಾಗಿ ಆಯ್ಕೆಗೊಂಡ ಡಿ.ಕೆ.ಸುರೇಶ್ ನಂದಿನಿ ಉತ್ಪನ್ನಗಳಿಗೆ ಜಾಗತಿಕ ರೂಪ ಕೊಡಲು ಮತ್ತು ಮಾರುಕಟ್ಟೆ ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಸರ್ವ ಪ್ರಯತ್ನ ಮಾಡುತ್ತಿದ್ದಾರೆ. ಇದರ ಜತೆಗೆ, ಪರಿಸರ ಸ್ನೇಹಿ, ಗ್ರಾಹಕ ಸ್ನೇಹಿಯಾಗಿಯೂ ನಂದಿನಿಯನ್ನು ಪರಿವರ್ತಿಸುವ ನಿಟ್ಟಿನಲ್ಲಿ ಹೊಸ ಹೊಸ ಆವಿಷ್ಕಾರ ಮಾಡಿಸುತ್ತಿದ್ದಾರೆ. ಇದೇ ರೀತಿ ಪ್ರೋತ್ಸಾಹ ಧನವನ್ನು ಕನಿಷ್ಠ ಪ್ರತಿ 2 ತಿಂಗಳಿಗೆ ಒಮ್ಮೆಯಾದರೂ ದೊರೆಯುವಂತೆ ಮಾಡಿಸಬೇಕು ಎನ್ನುವುದು ಹೈನುಗಾರರ ಆಗ್ರಹವಾಗಿದೆ.