

ಉಪ್ಪಿನಂಗಡಿ: ನಮ್ಮ ಬದುಕಿನಲ್ಲಿ ವಿಶೇಷತೆ ಮೂಡಿಸಲು ಕಲೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ಅಸಾಧ್ಯವಾಗುವುದನ್ನು ಸಾಧ್ಯವಾಗಿಸುವ ನಮ್ಮ ಮನಸ್ಸಿಗೆ ಎಲ್ಲವನ್ನೂ ದಾಟುವ ಶಕ್ತಿಯಿದ್ದು, ಮಾಡುವ ಕೆಲಸದಲ್ಲಿ ಕಷ್ಟಗಳು ಎದುರಾದರೂ ಜಗ್ಗದೆ, ಬಗ್ಗದೆ ಮುಂದುವರಿದಾಗ ಜೀವನದಲ್ಲಿ ಯಶಸ್ಸು ನಮ್ಮದಾಗಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ವತಿಯಿಂದ ಉಪ್ಪಿನಂಗಡಿಯ ವೇದಶಂಕರ ನಗರದ ಶ್ರೀ ರಾಮ ಶಾಲೆಯಲ್ಲಿ ಯಕ್ಷಧ್ರುವ-ಯಕ್ಷ ಶಿಕ್ಷಣ 2024-25ನೇ ಸಾಲಿನ ಯಕ್ಷಗಾನ ತರಬೇತಿ ತರಗತಿ ಉದ್ಘಾಟಿಸಿ ಮಾತನಾಡಿದರು.
ನಮ್ಮ ಹಿರಿಯರು ಅನಕ್ಷರಸ್ಥರಾಗಿದ್ದರೂ, ಮಹಾಭಾರತ, ರಾಮಾಯಣ ಮುಂತಾದ ಗ್ರಂಥಗಳನ್ನು ಓದದಿದ್ದರೂ, ಅವರಿಗೆ ಅವುಗಳ ಬಗ್ಗೆ ಅರಿವಿದೆ. ಇದಕ್ಕೆ ಕಾರಣ ಯಕ್ಷಗಾನ. ಯಕ್ಷಗಾನ ನಮ್ಮ ಸಂಸ್ಕೃತಿ ಪ್ರಸರಿಸುವ ಮಾಧ್ಯಮವಾಗಿದೆ ಎಂದರು.
ಯಕ್ಷಧ್ರುವ ಪಟ್ಲ ಫೌಂಡೇಷನ್‌ನ ಉಪ್ಪಿನಂಗಡಿ ಘಟಕ ಅಧ್ಯಕ್ಷ ಕೆ.ಜಗದೀಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ, ಯಕ್ಷಗಾನ ಅರ್ಥಧಾರಿ ಗೋಪಾಲಕೃಷ್ಣ ಶೆಟ್ಟಿ ಕಳೆಂಜ, ಇಂದ್ರಪ್ರಸ್ಥ ಸಮೂಹ ವಿದ್ಯಾಸಂಸ್ಥೆ ಅಧ್ಯಕ್ಷ ಕರುಣಾಕರ ಸುವರ್ಣ, ಶ್ರೀ ರಾಮ ಶಾಲೆ ಅಧ್ಯಕ್ಷ ಸುನೀಲ್ ಅನಾವು, ಸಂಚಾಲಕ ಯು.ಜಿ.ರಾಧಾ, ಪೋಷಕ ವೃಂದ ಅಧ್ಯಕ್ಷ ಮೋಹನ್ ಭಟ್, ಯಕ್ಷಗುರು ಸತೀಶ ಆಚಾರ್ಯ, ಪ್ರಮುಖರಾದ ಎನ್.ಉಮೇಶ್ ಶೆಣೈ, ಕಂಗ್ವೆ ವಿಶ್ವನಾಥ ಶೆಟ್ಟಿ, ಜಯಂತ ಪೊರೋಳಿ, ಗಣೇಶ್ ವಳಾಲು, ರವೀಶ್ ಎಚ್.ಟಿ., ಶ್ಯಾಮ ಸುದರ್ಶನ್, ಗುಣಕರ ಅಗ್ನಾಡಿ, ಶರತ್ ಕೋಟೆ, ಚಂದ್ರಶೇಖರ ಶೆಟ್ಟಿ, ರಾಧಾಕೃಷ್ಣ ಭಟ್ ಬೊಳ್ಳಾವು, ಚಂದ್ರಶೇಖರ ಮಡಿವಾಳ, ಲೊಕೇಶ ಆಚಾರ್ಯ, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಗಣೇಶ್ ಆಚಾರ್ಯ, ಯತೀಶ್ ಶೆಟ್ಟಿ, ಶಶಿಧರ ಶೆಟ್ಟಿ, ಅಚಲ್ ಉಬರಡ್ಕ, ಸುಧಾಕರ ಶೆಟ್ಟಿ ಗಾಂಧಿಪಾರ್ಕ್, ಉದಯ ಅತ್ರಮಜಲು ಉಪಸ್ಥಿತರಿದ್ದರು.
ಶ್ರೀ ರಾಮ ಶಾಲೆ ಪ್ರೌಢ ವಿಭಾಗ ಮುಖ್ಯಶಿಕ್ಷಕ ರಘುರಾಮ ಭಟ್ ಸಿ.ಸ್ವಾಗತಿಸಿ, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ವಿಮಲಾ ತೇಜಾಕ್ಷಿ ವಂದಿಸಿ, ಶಿಕ್ಷಕರಾದ ಪವಿತ್ರಾ ಕೆ., ವಿಜಿತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.