ನಿಸ್ವಾರ್ಥ ಸೇವಾ ಮನೋಭಾವದ ಹೃದಯ ಶ್ರೀಮಂತರು : ಅಧ್ಯಕ್ಷ ಪೂರನ್‌ವರ್ಮ ಬಣ್ಣನೆ

rotary
ಉಜಿರೆಯಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪೂರನ್‌ವರ್ಮ ಮಾತನಾಡಿದರು. ರೋಟರಿ ಜಿಲ್ಲಾ ರಾಜ್ಯಪಾಲ ಪಿ.ಕೆ.ರಾಮಕೃಷ್ಣ, ಜಿಲ್ಲಾ ಉಪರಾಜ್ಯಪಾಲ ಮೊಹಮ್ಮದ್ ವೊಳವೂರು ಮೊದಲಾದವರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ರೋಟರಿ ಕ್ಲಬ್‌ನ ಸದಸ್ಯರೆಲ್ಲ ಹೃದಯ ಶ್ರೀಮಂತಿಕೆ ಹೊಂದಿದವರು. ನಿಸ್ವಾರ್ಥ ಸೇವೆಯ ಮೂಲಕ ಸಮಸ್ಯೆ ಪರಿಹರಿಸಿ ಬದುಕಿನಲ್ಲಿ ಪರಿವರ್ತನೆ ಮಾಡುವುದೇ ರೋಟರಿ ಕ್ಲಬ್‌ನ ಉದ್ದೇಶ ಎಂದು ಬೆಳ್ತಂಗಡಿ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷ ಪೂರನ್‌ವರ್ಮ ಹೇಳಿದರು.

ಉಜಿರೆಯಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.ಸೇವಾಕಾರ್ಯಗಳಿಗೆ ತಾಯಿ ಸೋನಿಯಾವರ್ಮ ಮತ್ತು ತಮ್ಮ ಕೆಯೂರ್‌ವರ್ಮ ಅವರ ಬೆಂಬಲವೂ ಇದೆ. ಎಲ್ಲ ಸದಸ್ಯರೂ ಪರಸ್ಪರ ಪ್ರೀತಿ-ವಿಶ್ವಾಸದಿಂದ ತಮ್ಮ ಕುಟುಂಬದ ಕಾರ್ಯಕ್ರಮದಂತೆ ಸೇವಾಕಾರ್ಯಗಳನ್ನು ಮಾಡೋಣ ಎಂದರು.

ರೋಟರಿ ಜಿಲ್ಲಾ ರಾಜ್ಯಪಾಲ ಪಿ.ಕೆ.ರಾಮಕೃಷ್ಣ ಮಾತನಾಡಿ, ನಮ್ಮಲ್ಲಿ ಮೊದಲು ಪರಿವರ್ತನೆ ಮಾಡಿಕೊಂಡು ನಂತರ ಸಮಾಜದಲ್ಲಿಯೂ ಧನಾತ್ಮಕ ಸುಧಾರಣೆ ಮಾಡಬೇಕು. ರೋಟರಿ ಜಾಗತಿಕ ಅನುದಾನದ ಮೂಲಕ ಇನ್ನೂ ಹೆಚ್ಚಿನ ಸೇವೆ ಮಾಡಬೇಕು ಎಂದರು.

ರೋಟರಿ ಜಿಲ್ಲಾ ಉಪರಾಜ್ಯಪಾಲ ಮೊಹಮ್ಮದ್ ವೊಳವೂರು ರೋಟರ್ ಸಂಚಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ವಿದ್ಯಾಕುಮಾರ್ ಕಾಂಚೋಡು ವರದಿ ವಾಚಿಸಿದರು.

ಅನಂತ ಭಟ್ ಮಚ್ಚಿಮಲೆ ಸ್ವಾಗತಿಸಿದರು. ಸಂದೇಶ್ ರಾವ್ ವಂದಿಸಿದರು. ಡಾ.ಎ.ಜಯಕುಮಾರ ಶೆಟ್ಟಿ, ವಕೀಲ ಬಿ.ಕೆ.ಧನಂಜಯ ರಾವ್ ಕಾರ್ಯಕ್ರಮ ನಿರೂಪಿಸಿದರು.

ಹೊಸ ಸೇವಾ ಕಾರ್ಯಗಳು

ಸೌರಶಕ್ತಿ ಬಳಕೆ, ಕನ್ನಡ ಶಾಲೆಗಳಿಗೆ ಕಾಯಕಲ್ಪ, ರಸ್ತೆ ಸುರಕ್ಷತೆ, ಹಿರಿಯ ನಾಗರಿಕರ ಆರೋಗ್ಯ ರಕ್ಷಣೆ, ಹೃದಯ ರೋಗಿಗಳ ಚಿಕಿತ್ಸೆಗೆ ನೆರವು ಮೊದಲಾದ ಸೇವಾಕಾರ್ಯಗಳನ್ನು ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಾಡುವುದಾಗಿ ಅಧ್ಯಕ್ಷ ಪೂರನ್‌ವರ್ಮ ಪ್ರಕಟಿಸಿದರು. ಸೋನಿಯಾವರ್ಮ, ಪ್ರವೀಣ್ ಗೋರೆ, ಸುವೀರ್ ಜೈನ್, ಪ್ರಶಾಂತ್ ಜೈನ್ ಮತ್ತು ಆದರ್ಶ ಕಾರಂತ ಅವರನ್ನು ರೋಟರಿ ಕ್ಲಬ್‌ನ ನೂತನ ಸದಸ್ಯರಾಗಿ ಸೇರ್ಪಡೆಗೊಳಿಸಲಾಯಿತು.

ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷನಾಗಿ ತಾನು ಆಯ್ಕೆಯಾಗಿರುವುದು ದೇವರು ಸಮಾಜಸೇವೆ ಮಾಡಲು ಕೊಟ್ಟ ವಿಶೇಷ ಅವಕಾಶ. ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ಶಿಸ್ತಿನ ಚೌಕಟ್ಟಿನೊಳಗೆ ಎಲ್ಲ ಸೇವಾಕಾರ್ಯಗಳನ್ನು ಯಶಸ್ವಿಯಾಗಿ ಮಾಡುತ್ತೇನೆ. - ಪೂರನ್‌ವರ್ಮ ಬೆಳ್ತಂಗಡಿ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net