

ಕಡಬ: ಖಾಸಗಿ ಶಾಲೆಯ ಭರಾಟೆ ನಡುವೆ ಸರ್ಕಾರಿ ಶಾಲೆ ಮೆಚ್ಚಿಕೊಂಡು ವಿದ್ಯಾಭ್ಯಾಸ ಮಾಡುವ ಮಕ್ಕಳಿಂದ ಮತ್ತು ಅವರ ಪಾಲಕರಿಂದ ಇಂದಿಗೂ ಸರ್ಕಾರಿ ಶಾಲೆ ಉಳಿದಿದೆ. ವಿದ್ಯಾಭ್ಯಾಸಕ್ಕೆ ಯಾವೂದೇ ಕೊರತೆಯಾಗಬಾರದು ಎಂದು ಸರ್ಕಾರಿ ಶಾಲೆಗಳ ಮೂಲಸೌಕರ್ಯಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಶೈಕ್ಷಣಿಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಅನ್ಯ ವಿಚಾರಕ್ಕೆ ಮಾರು ಹೋಗದೆ ಉತ್ತಮ ಶಿಕ್ಷಣದೊಂದಿಗೆ ಭವಿಷ್ಯದಲ್ಲಿ ಸುಸಂಸ್ಕೃತ ಜೀವನ ನಡೆಸಬೇಕು ಎಂದು ಶಾಸಕಿ ಭಾಗೀರಥಿ ಮುರಳ್ಯ ಹೇಳಿದರು.
ಕಡಬ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿವೇಕ ಯೋಜನೆಯಡಿ 25 ಲಕ್ಷ ರೂ.ವೆಚ್ಚದಲ್ಲಿ ರಚಿಸಲಾದ ನೂತನ ಕೊಠಡಿ ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಕಾರ್ಯಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯರಾದ ಸಯ್ಯದ್ ಮೀರಾ ಸಾಹೇಬ್, ಪಿ.ಪಿ.ವರ್ಗಿಸ್, ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ದಯಾನಂದ ಉಂಡಿಲ, ಯುವಜನ ಒಕ್ಕೂಟ ಕಡಬ ತಾಲೂಕು ಅಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ, ಪ್ರೌಢಶಾಲಾ ವಿಭಾಗ ಉಪಪ್ರಾಂಶುಪಾಲೆ ಡಾ.ವೇದಾವತಿ ಉಪಸ್ಥಿತರಿದ್ದರು. ಕಾಲೇಜಿನ ವಿವಿಧ ವಿದ್ಯಾರ್ಥಿ ಸಂಘ ಪದಾಧಿಕಾರಿಗಳಿಗೆ ಪದಕ ಪ್ರದಾನ, ಪ್ರಮಾಣವಚನ ನಡೆಯಿತು. ಕೊಠಡಿ ನಿರ್ಮಿಸಿದ ಗುತ್ತಿಗೆದಾರ ಮಹಮ್ಮದ್ ನವಾಜ್ ಅವರನ್ನು ಸನ್ಮಾನಿಸಲಾಯಿತು.
ಪ್ರಾಂಶುಪಾಲ ವಾಸುದೇವ ಗೌಡ ಕೊಲ್ಪೆ ಪ್ರಸ್ತಾವಿಸಿ, ಸ್ವಾಗತಿಸಿದರು. ಉಪನ್ಯಾಸಕಿ ಭಾರತಿ ವಂದಿಸಿ. ಸಲಿನ್ ಕೆ.ಪಿ.ನಿರೂಪಿಸಿದರು.