

ಗುರುಪುರ: ಗ್ರಾಪಂ ಊರಿನ ಹೃದಯವಿದ್ದಂತೆ. ಇಲ್ಲಿಂದಲೇ ಗ್ರಾಮರಾಜ್ಯದ ಕನಸುಗಳು ಸಾಕಾರಗೊಳ್ಳುತ್ತವೆ. ಜನಪ್ರತಿನಿಧಿಗಳು ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಗ್ರಾಮಗಳಲ್ಲಿ ಸಾಮರಸ್ಯ ಮರುಸೃಷ್ಟಿಯಾಗಬೇಕು. ಎಲ್ಲ ವರ್ಗದ ಮಕ್ಕಳು ಕೈ-ಕೈ ಹಿಡಿದುಕೊಂಡು ರಸ್ತೆಯಲ್ಲಿ ನಡೆದಾಡುವ ಕಾಲ ಬರಬೇಕು. ಗ್ರಾಮಗಳ ಅಭಿವೃದ್ಧಿಗೆ ಅಂತಹ ಪೂರಕ ಸ್ಥಿತಿ ನಿರ್ಮಾಣವಾಗಬೇಕು. ಹೀಗಾದರೆ ಮಾತ್ರ ಗ್ರಾಮದಿಂದ ರಾಜ್ಯ, ದೇಶದಲ್ಲಿ ಸಾಮರಸ್ಯ ಕಾಣಲು ಸಾಧ್ಯವಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ದ.ಕ.ಜಿ.ಪ ಮಂಗಳೂರು, ತಾಪಂ ಮಂಗಳೂರು, ನೀರುಮಾರ್ಗ ಗ್ರಾಪಂ ಮತ್ತು ಸರ್ಕಾರೇತರ ಸಂಸ್ಥೆಯಾದ ಹಸಿರು ದಳ ಮಂಗಳೂರು ಜಂಟಿಯಾಗಿ ನೀರುಮಾರ್ಗ ಗ್ರಾಪಂ ವ್ಯಾಪ್ತಿಯಲ್ಲಿ ಶನಿವಾರ ವಿವಿಧ ಕಾಮಗಾರಿಗಳ ಉದ್ಘಾಟನಾ ಹಾಗೂ ಶಂಕುಸ್ಥಾಪನಾ ಸಮಾರಂಭದಲ್ಲಿ ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ, ಟೀಕೆಗಳು ಸಾಮಾನ್ಯ. ಅವುಗಳನ್ನು ಸ್ವೀಕರಿಸಿ, ಸೌಹಾರ್ದಯುತವಾಗಿ ಚರ್ಚಿಸಿ ಎಲ್ಲರೂ ಒಗ್ಗೂಡಿ ಮುನ್ನಡೆಯುವುದೇ ಸಾಮರಸ್ಯ. ಗ್ರಾಮಮಟ್ಟದಿಂದ ಭವ್ಯ ಭಾರತ ನಿರ್ಮಾಣ ಸಾಧ್ಯ. ಹಾಗಾಗಿ ನಾವು ಭವಿಷ್ಯದ ಮಕ್ಕಳಿಗೆ ಒಂದು ಸುಂದರ ವಾತಾವರಣ ಸೃಷ್ಟಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ನೀರುಮಾರ್ಗ ಪಂಚಾಯಿತಿ ಅಧ್ಯಕ್ಷ ಶ್ರೀಧರ್ ಚಿಕ್ಕಬೆಟ್ಟು ಸ್ವಾಗತಿಸಿ, ಪ್ರಸ್ತಾವನೆಗೈದರು. ಉಪಾಧ್ಯಕ್ಷೆ ಮೋಲಿ ಶಾಂತಿ ಸಲ್ಡಾನ, ತಾಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ, ಪಿಡಿಒ ಅಬೂಬಕ್ಕರ್, ದ.ಕ.ಜಿಲ್ಲಾ ಕೆಡಿಪಿ ಸದಸ್ಯ ಮೆಲ್ವಿನ್ ಡಿಸೋಜ, ಕಾಂಗ್ರೆಸ್ ಮುಖಂಡ ಪದ್ಮನಾಭ ಕೋಟ್ಯಾನ್(ಬಿಎಲ್‌ಪಿ), ನೀರುಮಾರ್ಗ ಸೇವಾ ಸಹಕಾರಿ ಸಂಘದ ಅಧ್ಯಕ್ಷೆ ಸೆಲಿನ್ ಸಿಲ್ವಿಯಾ ಡಿ’ಮೆಲ್ಲೊ, ಹಸಿರು ದಳದ ಅಧಿಕಾರಿಗಳಾದ ಧ್ರುವ, ಶ್ರಾವ್ಯಾ ಹಾಗೂ ನಾಗರಾಜ್, ಮನಪಾ ನಿಕಟಪೂರ್ವ ಕಾರ್ಪೊರೇಟರ್ ಭಾಸ್ಕರ್ ಕುಡುಪು, ತಾಪಂ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು, ಅರ್ಚಕ ರಾಜೇಶ್ ಭಟ್ ಮಾಣೂರು, ವೆಂಕಟರಮಣ ಭಟ್ ಭಟ್ರಕೋಡಿ, ಕೆಲರೈ ಚರ್ಚ್ ಧರ್ಮಗುರು ಫಾ.ಸಿಲ್ವೆಸ್ಟರ್ ಡಿ’ಕಾಸ್ತ, ಬಿತ್ತ್‌ಪಾದೆ ಮಸೀದಿ ಧರ್ಮಗುರು ಸೈಯ್ಯದ್ ಶಿಯಾಬ್ ತಂಙಳ್, ಮಸೀದಿ ಅಧ್ಯಕ್ಷ ಎ.ಎಂ.ಶೇಖ್ ಹೈದರ್, ಪಂಚಾಯಿತಿ ಕಾರ್ಯದರ್ಶಿ ಶಾಲಿನಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಉಮಾನಾಥ, ಸಿಬ್ಬಂದಿ ವರ್ಗ, ನೀರುಮಾರ್ಗ ಹಾಗೂ ಬೊಂಡಂತಿಲ ಗ್ರಾಮಸ್ಥರು ಇದ್ದರು. ಪತ್ರಕರ್ತ ವಿಜಯ್ ಕೋಟ್ಯಾನ್ ಪಡು ನಿರೂಪಿಸಿ, ಪಿಡಿಒ ಅಬೂಬಕ್ಕರ್ ವಂದಿಸಿದರು.
ಗ್ರಾಮಗಳ ಅಭಿವೃದ್ಧಿ ದೆಸೆಯಲ್ಲಿ ದೊಡ್ಡ ಮಟ್ಟದ ಯೋಜನೆ ರೂಪಿಸಿದಾಗ ತನ್ನಿಂತಾನೆ ಅಭಿವೃದ್ಧಿ, ಉದ್ಯೋಗ ಸೃಷ್ಟಿಯಾಗುತ್ತದೆ. ನೀರುಮಾರ್ಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಈ ರೀತಿಯ ಯೋಜನೆ ಅವಶ್ಯ. ಇಲ್ಲಿ ನಿರ್ಮಿಸಲುದ್ದೇಶಿಸಿರುವ ನೂತನ ವಾಣಿಜ್ಯ ಸಂರ್ಕೀಣಕ್ಕೆ ಸರ್ಕಾರದಿಂದ 1 ಕೋಟಿ ರೂ. ಅನುದಾನ ದೊರಕಿಸಿ ಕೊಡಲು ಪ್ರಯತ್ನಿಸುವೆ. ಯು.ಟಿ.ಖಾದರ್, ಸ್ಪೀಕರ್
57 ನಿವೇಶನಗಳ ನೀಲಿ ನಕಾಶೆ ಬಿಡುಗಡೆ
ಬೊಂಡಂತಿಲ ಗ್ರಾಮದ ಕಟಿಂಜದಲ್ಲಿ 60 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ ನೂತನ ತ್ಯಾಜ್ಯ ವಿಲೇವಾರಿ ಘಟಕ(ಸ್ವಚ್ಛ ಸಂಕೀರ್ಣ) ಹಾಗೂ ಕೊಂಬೆಲ್‌ಲಚ್ಚಿಲ್‌ನಲ್ಲಿ 12 ಲಕ್ಷ ರೂ.ವೆಚ್ಚದ ಎಸ್‌ಸಿ/ಎಸ್‌ಸಿ ಸಮುದಾಯ ಭವನ ಉದ್ಘಾಟಿಸಲಾಯಿತು. ನೀರುಮಾರ್ಗ ಜಂಕ್ಷನ್‌ನಲ್ಲಿ 5 ಕೋಟಿ ರೂ.ವೆಚ್ಚದ ಗ್ರಾಪಂ ವಾಣಿಜ್ಯ ಸಂಕೀರ್ಣ ಹಾಗೂ ಬೊಂಡಂತಿಲ ಗ್ರಾಮದ ತಾರಿಗುಡ್ಡೆಯಲ್ಲಿ ಜಿಮ್ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು. ಜತೆಗೆ ನೀರುಮಾರ್ಗ ಪಂಚಾಯಿತಿ ವ್ಯಾಪ್ತಿಯ 57 ನಿವೇಶನಗಳ ನೀಲಿ ನಕಾಶೆ ಬಿಡುಗಡೆಗೊಳಿಸಲಾಯಿತು.
ಸಾಧಕರಿಗೆ ಗೌರವಾರ್ಪಣೆ
ಪಂಚಾಯಿತಿ ವ್ಯಾಪ್ತಿಯ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ, ಅಂಗವಿಕಲರಿಗೆ ನೆರವಿನ ಚೆಕ್ ವಿತರಣೆ, ಕ್ರೀಡಾ ಸಾಧಕರಿಗೆ ಗೌರವಾರ್ಪಣೆ ಹಾಗೂ ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆಗೈದ ಮಹೇಶ್ ಕುಮಾರ್ ಹೊಳ್ಳ, ಮಹಮ್ಮದ್ ಬಾಷಾ, ಪದ್ಮನಾಭ ಕೋಟ್ಯಾನ್, ವಿಜಯ್ ಕೋಟ್ಯಾನ್, ಮೋಲಿ, ರೋಹಿಣಿ ಅವರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.