

ಸೋಮವಾರಪೇಟೆ: ತಾಲೂಕು ಹೋಂಸ್ಟೇ ಮತ್ತು ಪ್ರವಾಸೋದ್ಯಮ ಸಂಘ ಮತ್ತು ಹರದೂರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗರಗಂದೂರು ಬಿ ಗ್ರಾಮದ ಹೊಸತೋಟದಲ್ಲಿ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣವನ್ನು ಶಾಸಕ ಡಾ.ಮಂತರ್‌ಗೌಡ ಮಂಗಳವಾರ ಉದ್ಘಾಟಿಸಿದರು.
ಸರ್ಕಾರ ಮಾಡಬೇಕಾದ ಕೆಲಸವನ್ನು ಹೋಂಸ್ಟೇ ಮತ್ತು ಪ್ರವಾಸೋದ್ಯಮ ಸಂಘ ಮಾಡುತ್ತಿದೆ. ಸುಸಜ್ಜಿತ ತಂಗುದಾಣವನ್ನು ನಿರ್ಮಿಸಿ ಜನರಿಗೆ ಅನುಕೂಲ ಮಾಡುತ್ತಿದೆ. ಪ್ರವಾಸಿ ಜಿಲ್ಲೆ ಕೊಡಗಿಗೆ ಸಾಕಷ್ಟು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜಿಲ್ಲೆಯಲ್ಲಿ ವ್ಯಾಪಾರೋದ್ಯಮ ಬೆಳೆಯಲು ಹೋಂಸ್ಟೇ ಮಾಲಿಕರ ಕೊಡುಗೆ ಇದೆ. ಹೋಂಸ್ಟೇಗಳು ಕೇವಲ ಲಾಭದ ದೃಷ್ಟಿಯಿಂದ ಮಾತ್ರ ಯೋಚಿಸದೆ, ಗುಣಮಟ್ಟದ ಆಹಾರವನ್ನು ಒದಗಿಸಬೇಕು. ಸ್ವಚ್ಛತೆ ಮತ್ತು ಭದ್ರತೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಕಿವಿ ಮಾತು ಹೇಳಿದರು.
ಇದೇ ಸಂದರ್ಭ ಗರಗಂದೂರು ಕಾಫಿ ತೋಟದ ಮಾಲಿಕ ಡಿ.ಸುರೇಶ್ ದಾಸಪ್ಪ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ತಾಲೂಕು ಹೋಂಸ್ಟೇ ಮತ್ತು ಪ್ರವಾಸೋದ್ಯಮ ಸಂಘದ ಅಧ್ಯಕ್ಷ ಸಿ.ಕೆ. ರೋಹಿತ್, ಗರಗಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎ.ಎ. ಬೋಜಮ್ಮ, ಸದಸ್ಯ ಸಲೀಂ, ಸಂಘದ ಉಪಾಧ್ಯಕ್ಷ ಯೋಗೇಶ್ ಪಟೇಲ್, ಕಾರ್ಯದರ್ಶಿ ಎಸ್.ಎಲ್. ಅಭಿನಂದ್ ಹಾಗೂ ಖಜಾಂಚಿ ಡಿ.ಪಿ.ಪ್ರೀತಮ್ ಇದ್ದರು.