

ಹಾಸನ: ಅ.2ರಂದು ನಡೆಯಲಿರುವ ಅರಕಲಗೂಡು ದಸರಾ ಉತ್ಸವವನ್ನು ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತೆ ದೀಪಾ ಭಾಸ್ತಿ ಅವರು ಉದ್ಘಾಟಿಸಲಿದ್ದಾರೆ ಎಂದು ಶಾಸಕ ಹಾಗೂ ದಸರಾ ಉದ್ಘಾಟನಾ ಸಮಿತಿ ಗೌರವಾಧ್ಯಕ್ಷ ಎ.ಮಂಜು ಹೇಳಿದರು.
ಅಂದು ಸಂಜೆ 4 ಗಂಟೆಗೆ ಶ್ರೀ ದೊಡ್ಡಮ್ಮ ದೇವಸ್ಥಾನ ಆವರಣದಿಂದ ಬನ್ನಿಮಂಟಪದವರೆಗೆ ದಸರಾ ಮೆರವಣಿಗೆ ನಡೆಯಲಿದೆ. ರಾತ್ರಿ 8 ಗಂಟೆಗೆ ಸಭಾ ಕಾರ್ಯಕ್ರಮ ಸಂತೆ ಮರೂರು ರಸ್ತೆಯ ಬನ್ನಿ ಮಂಟಪದಲ್ಲಿ ನಡೆಯಲಿದೆ. ಮೈಸೂರು ದಸರಾ ಉದ್ಘಾಟನೆಗೆ ದೀಪಾ ಭಾಸ್ತಿ ಅವರಿಗೆ ಸರ್ಕಾರ ಆಹ್ವಾನ ನೀಡಿಲ್ಲ. ಹಾಗಾಗಿ ಅರಕಲಗೂಡು ದಸರಾ ಉದ್ಘಾಟನೆಗೆ ಅವರಿಗೆ ಆಹ್ವಾನ ನೀಡಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸರ್ಕಾರ ದೀಪಾ ಭಾಸ್ತಿ-ಬಾನು ಮುಷ್ತಾಕ್ ಇಬ್ಬರನ್ನೂ ಸಮನಾಗಿ ಕಾಣಬೇಕಿತ್ತು. ದೀಪಾ ಭಾಸ್ತಿ ಅವರು ಕೃತಿ ಅನುವಾದ ಮಾಡಿದ್ದಕ್ಕೆ ಬಾನು ಮುಷ್ತಾಕ್ ಅವರಿಗೆ ಬುಕರ್ ಪ್ರಶಸ್ತಿ ಬಂದಿದೆ. ಅದಕ್ಕಾಗಿ ಅರಕಲಗೂಡು ದಸರಾ ಉದ್ಘಾಟನೆಗೆ ದೀಪಾ ಭಾಸ್ತಿ ಅವರಿಗೆ ಆಹ್ವಾನ ನೀಡಲಾಗಿದೆ ಎಂದರು.
ಅರಕಲಗೂಡು ದಸರಾ ಉತ್ಸವಕ್ಕೆ ಇತಿಹಾಸ ಪ್ರಸಿದ್ಧ ಹಿನ್ನೆಲೆ ಇದೆ. ಈ ಬಾರಿ ವಿಶೇಷ ಆಕರ್ಷಣೆಯೊಂದಿಗೆ ಈ ಸಲ ದಸರಾ ಆರಂಭಗೊಳ್ಳಲಿದೆ. ಪ್ರತಿ ವರ್ಷ ವಿಭಿನ್ನತೆಯಿಂದ ಉತ್ಸವ ಆಯೋಜಿಸುವ ಪರಂಪರೆಯನ್ನು ಮುಂದುವರಿಸುತ್ತಿದ್ದೇವೆ. ಈ ಬಾರಿ ಧಾರ್ಮಿಕ-ಸಾಂಸ್ಕೃತಿಕ ವೈವಿಧ್ಯತೆಯೊಂದಿಗೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ವಿವರಿಸಿದರು.