

ಬೆಂಗಳೂರು: ಸಂವಿಧಾನ ಹಾಗೂ ವಚನ ಸಾಹಿತ್ಯದ ಮೂಲ ಉದ್ದೇಶ ಸಮಾನವಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಮುಖ್ಯಸ್ಥ ನ್ಯಾ.ಬಿ. ಸುಭಾಷ್ ಅಡಿ ತಿಳಿಸಿದ್ದಾರೆ.
ಶ್ರೀಶೈಲ ಮಲ್ಲಿಕಾರ್ಜುನ ಸಮಾಜೋತ್ಥಾನ ಫೌಂಡೇಶನ್ ಮಂಗಳವಾರ ವಿಜಯನಗರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಇಷ್ಟಲಿಂಗ ಪೂಜೆ ಹಾಗೂ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ನ್ಯಾಯ, ಆರ್ಥಿಕ ಸ್ವಾತಂತ್ರ್ಯ, ರಾಜಕೀಯ ಸ್ವಾತಂತ್ರ್ಯ, ಸಮಾನತೆ, ಬಾಂಧವ್ಯ, ಸಮಾನ ಅವಕಾಶ ಇತ್ಯಾದಿ ತತ್ವಗಳು ಸಂವಿಧಾನ ಹಾಗೂ ವಚನ ಸಾಹಿತ್ಯದ ಪರಿಕಲ್ಪನೆಯಾಗಿದೆ. ಸಂವಿಧಾನದ ಮೂಲಕ ಜಾತಿಯಿಲ್ಲದ ಸಮಾಜ ಕಟ್ಟಲು ಇಂದಿಗೂ ಪ್ರಯತ್ನಗಳಾಗುತ್ತಿವೆ. ಆದರೆ 12ನೇ ಶತಮಾನದಲ್ಲಿ ಬಸವಣ್ಣ ಮಹತ್ತರ ಕ್ರಾಂತಿಯ ಮೂಲಕ ಜಾತಿಯಿಲ್ಲದ ಸಮಾಜ ಕಟ್ಟಿದರು.
ಜಾತಿ ಇಲ್ಲದ ಸಮಾಜ ಕಟ್ಟಿಕೊಟ್ಟ ದಾರ್ಶನಿಕರ ಬಗ್ಗೆ ಗೌರವ ಇರಬೇಕು. ಆದರೆ, ಇಂದು ಜಾತಿಗಳಿಂದ ಹಲವು ಸಮಸ್ಯೆಗಳು ಉಂಟಾಗುತ್ತಿದ್ದು, ಜಾತಿಯಿಲ್ಲದ ಸಮಾಜದ ಮೂಲ ಆಶಯಕ್ಕೆ ಧಕ್ಕೆಯಾಗುತ್ತಿದೆ. ದುರುದ್ಧೇಶದಿಂದ ಸಮಾಜ ಒಡೆಯುವ ಕೆಲಸ ಆಗದೆ, ಒಗ್ಗಟ್ಟಿನಿಂದ ಎಲ್ಲರೂ ಸಮಾಜಕ್ಕಾಗಿ ದುಡಿಯುವಂತಾಗಬೇಕು ಎಂದರು.
ಶಾಸಕ ಎಂ.ಕೃಷ್ಣಪ್ಪ ಮಾತನಾಡಿ, ತಾನಾಯಿತು ತನ್ನ ಕೆಲಸವಾಯಿತು ಎಂಬ ತತ್ವದಲ್ಲಿ ಜೀವನ ನಡೆಸುವುದೇ ಮನುಷ್ಯ ಧರ್ಮ. ಇದನ್ನು ಎಲ್ಲರೂ ಪಾಲನೆ ಮಾಡಬೇಕು ಎಂದು ತಿಳಿಸಿದರು.
ಬಾಳೆಹೊನ್ನೂರು ಖಾಸಾ ಶಾಖಾ ಮಠದ ರೇಣುಕ ಶಿವಾಚಾರ್ಯ ಸ್ವಾಮೀಜಿ, ಮುಡುಕತೊರೆ ತೋಪಿನ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಲಕ್ಷ್ಮೀಪುರ ಶ್ರೀಗಿರಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ವಿಜಯಪುರ ಗುರು ಗಂಗಾಧರೇಶ್ವರ ಹಿರೇಮಠದ ಶಿವಕುಮಾರ ಸ್ವಾಮೀಜಿ, ಕೆವಿವಿ ಸಂಸ್ಥೆ ಅಧ್ಯಕ್ಷ ಬಿ.ಎಸ್.ಪರವಶಿವಯ್ಯ ಇನ್ನಿತರರಿದ್ದರು.
ಆತ್ಮದ ಆದಿ-ಅಂತ್ಯದ ಅರಿವು ಮಾಡಿಕೊಡುವ ಮೂಲಕ ವ್ಯಕ್ತಿಯನ್ನು ಮೋಕ್ಷದ ಹಾದಿಗೆ ಮುನ್ನಡೆಸುವವನು ನಿಜವಾದ ಗುರು. -ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಪೀಠ
ಗುರುಪೂರ್ಣಿಮೆ ಪ್ರಯುಕ್ತ ಜು.21ರಂದು ರಾಜಾಜಿನಗರದ ಪ್ರವೇಶ ದ್ವಾರದಲ್ಲಿ ನೂತನವಾಗಿ ಲೋಕಾರ್ಪಣೆಗೊಂಡಿರುವ ಶ್ರೀ ರೇಣುಕಾಚಾರ್ಯರ ಕಂಚಿನ ಪ್ರತಿಮೆಗೆ ಹಾಗೂ ಡಾ.ಶಿವಕುಮಾರ ಸ್ವಾಮೀಜಿ ಅವರ ಪ್ರತಿಮೆಗೆ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪುಷ್ಪಾರ್ಚನೆ ಮಾಡಲಿದ್ದಾರೆ. ಸಂಜೆ ಗುರುಪೂರ್ಣಿಮೆ ಕಾರ್ಯಕ್ರಮ ನಡೆಯಲಿದ್ದು, 'ವೇದಭಾಸ್ಕರ' ಹಾಗೂ 'ನಾದಭಾಸ್ಕರ' ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಜು.21ರ ವರೆಗೆ ಬೆಳಗ್ಗೆ 7ಗಂಟೆಯಿಂದ ಇಷ್ಟಲಿಂಗ ಮಹಾಪೂಜೆ ಹಾಗೂ ಪಾದಪೂಜೆ ಜರುಗಲಿದೆ.