

ಆಲೂರು: ತಾಲೂಕಿನ ಬೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೊಪ್ಪಿನಹಳ್ಳಿ, ಮಣಿಪುರ ಗ್ರಾಮಸ್ಥರ ಸಹಯೋಗದಲ್ಲಿ ರಾಷ್ಟ್ರೀಯ ಹೆದ್ದಾರಿ 7 ರ ಪಕ್ಕದ ದೇವರಕೆರೆಯಲ್ಲಿ 18 ಅಡಿ ಎತ್ತರದ ಶ್ರೀ ವಿಜಯ ಆಂಜನೇಯಸ್ವಾಮಿ ಮೂರ್ತಿಯನ್ನು ಭಾನುವಾರ ಉದ್ಘಾಟಿಸಲಾಯಿತು.
ಶಾಸಕ ಸಿಮೆಂಟ್ ಮಂಜುನಾಥ್ ಮಾತನಾಡಿ, ಇದು ಇಡೀ ಕ್ಷೇತ್ರದ ಅಪರೂಪದ ಮೂರ್ತಿಯಾಗಿದ್ದು, ಇದರ ಮಹಿಮೆ ಎಲ್ಲೆಡೆ ಹರಡಲಿದೆ. ಇಂತಹ ಅದ್ಭುತ ಕಾರ್ಯವನ್ನು ಸೊಪ್ಪಿನಹಳ್ಳಿ ಹಾಗೂ ಮಣಿಪುರದ ಗ್ರಾಮಸ್ಥರು ಮತ್ತು ಹನುಮಂತ ಭಕ್ತರು ಮಾಡಿದ್ದಾರೆ. ಕ್ಷೇತ್ರಕ್ಕೆ ಮತ್ತು ಭಕ್ತರಿಗೆ ಶುಭವಾಗಲಿ ಎಂದು ಆಶಿಸಿದರು.
ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ದೇವರ ಕಟ್ಟೆಯಲ್ಲಿ ಆಂಜನೇಯ ಮೂರ್ತಿ ಪ್ರತಿಷ್ಠಾಪನೆಗೊಂಡಿರುವುದು ಇತಿಹಾಸವಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು.
ವೈಕುಂಠ ಗೌರವರಾದಾಸ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಪರಿಸರವಾದಿ ಎಚ್.ಪಿ ಮೋಹನ್, ಜಿಪಂ ಮಾಜಿ ಸದಸ್ಯೆ ಚಂಚಲಾ ಕುಮಾರಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಸ್.ಮಂಜೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷೆ ಉಮಾ ರವಿಪ್ರಕಾಶ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಸ್.ಶಿವಮೂರ್ತಿ, ಗ್ರಾಪಂ ಅಧ್ಯಕ್ಷೆ ಹೇಮಾ ಮಂಜೇಗೌಡ, ಹಾಸನ ಹಾಲು ಒಕ್ಕೂಟ ನಿರ್ದೇಶಕ, ಪಿ.ಎಲ್.ಲಿಂಗರಾಜು ಇತರರಿದ್ದರು.