ಕಿಲ್ಲೂರಿನಲ್ಲಿ ನಾರಾಯಣ ಗುರುಗಳ ಮೂರ್ತಿ ಪ್ರತಿಷ್ಠ್ಠಾಪನೆ

New Project
Published on

ಬೆಳ್ತಂಗಡಿ:ಮಹಾನ್ ದಾರ್ಶನಿಕ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಪ್ರತಿಷ್ಠಾಪನೆ ಕಿಲ್ಲೂರು ಪ್ರದೇಶದಲ್ಲಿ ನಡೆಯಲಿದೆ. 1989ರಲ್ಲಿ ಶಿಕ್ಷಣ ಮತ್ತು ಸಂಘಟನೆಯ ಉದ್ದೇಶದಿಂದ ಎನ್.ಕೆ ನಾರಾಯಣ ಪೂಜಾರಿ ನಡುಬೈಲು, ರಾಮಪ್ಪ ಪೂಜಾರಿ ಅಡ್ಕದಕರೆ, ಲಕ್ಷ್ಮಣ ಪೂಜಾರಿ ಕಿಲ್ಲೂರು, ಅಣ್ಣು ಪೂಜಾರಿ ಬರೆಮೇಲು ಮುಂದಾಳತ್ವದಲ್ಲಿ ಮಿತ್ತಬಾಗಿಲು-ಮಲವಂತಿಗೆ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಉದಯವಾಯಿತು. 2016ರಲ್ಲಿ ಯುವ ಬಿಲ್ಲವ ವೇದಿಕೆಯನ್ನು ಪ್ರಾರಂಭಿಸಿ, 2022ರಲ್ಲಿ ಯುವವಾಹಿನಿ ಸಂಚಲನಾ ಸಮಿತಿಯನ್ನು ಪ್ರಾರಂಭಿಸಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದಾರೆ. ಗುರುಭವನದ ನಿರ್ಮಾಣದಲ್ಲಿ ಹೆಚ್ಚಿನ ಕೆಲಸ ಕಾರ್ಯಗಳು 7 ಲಕ್ಷ ರೂ. ಮೊತ್ತದಷ್ಟು ಶ್ರಮದಾನದ ಮೂಲಕ ಮಾಡಲಾಗಿದೆ.

ಸಂಘಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿಯನ್ನು ಬಿಲ್ಲವರ ಅಸೋಸಿಯೇಷನ್ ಮುಂಬೈ ಇದರ ಗೌರವಾಧ್ಯಕ್ಷ ಎಲ್.ವಿ ಅಮೀನ್ ಕೊಡುಗೆಯಾಗಿ ನೀಡಿದ್ದಾರೆ. ಈಗಾಗಲೇ ಬಜ್ಪೆ ಸಂಘದಿಂದ ಗುರುಗಳ ಮೂರ್ತಿಯನ್ನು ಕುದ್ರೋಳಿ ಶ್ರೀ ಕ್ಷೇತ್ರದಲ್ಲಿ ತಂದು ಪೂಜೆ ಸಲ್ಲಿಸಿ, ಅಲ್ಲಿಂದ ಮೆರವಣಿಗೆಯ ಮೂಲಕ ಪ್ರತಿಷ್ಠಾಪನೆಗೊಳ್ಳಲಿರುವ ಕ್ಷೇತ್ರಕ್ಕೆ ತರಲಾಗಿದೆ. ಇದರ ಉದ್ಘಾಟನೆಯನ್ನು ಮಾಜಿ ಕೇಂದ್ರ ಸಚಿವ, ಕುದ್ರೋಳಿ ಕ್ಷೇತ್ರದ ನಿರ್ಮಾತೃ ಜನಾರ್ದನ ಪೂಜಾರಿ ಮಾಡಲಿದ್ದಾರೆ.

52 ಸೆಂಟ್ಸ್ ಜಾಗ ಮಂಜೂರು

ಕೆ.ವಸಂತ ಬಂಗೇರ 1989ರಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಸಂದರ್ಭ ಮಿತ್ತಬಾಗಿಲು-ಮಲವಂತಿಗೆ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘಕ್ಕೆ 52 ಸೆಂಟ್ಸ್ ಜಾಗ ಮಂಜೂರುಗೊಳಿಸಿದ್ದರು. ನಂತರ ಆ ಜಾಗವನ್ನು ಸಂಘದ ಹಿತಿಯರು, ಯುವಕರು ಸೇರಿ ಸಮತಟ್ಟುಗೊಳಿಸಿ ಇಂದು ಸುಂದರವಾದ ನಾರಾಯಣ ಗುರುಗಳ ಗುರುಮಂದಿರ ನಿರ್ಮಾಣಗೊಂಡಿದೆ.

ಗುರು ಮಂದಿರ, ಗುರುಭವನ

ಮಲವಂತಿಗೆ-ಮಿತ್ತಬಾಗಿಲು ಸಂಘಕ್ಕೆ ಬಿಲ್ಲವ ಸಮಾಜದ 186 ಮನೆಗಳು ಒಳಪಡುತ್ತವೆ. ಸಂಘದ ಅಧ್ಯಕ್ಷ ಶೇಖರ ಪೂಜಾರಿ ಕಂಬಳದಡ್ಡು, ಕಲಶೋತ್ಸವ ಸಮಿತಿ ಅಧ್ಯಕ್ಷ ಮುಕುಂದ ಸುವರ್ಣ ಬಂಗಾಡಿ, ಕಾರ್ಯದರ್ಶಿ ಸುರೇಂದ್ರ ಬನದಬಾಗಿಲು, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಗುರುರಾಜ್ ಕಿಲ್ಲೂರು, ಯುವವಾಹಿನಿ ಅಧ್ಯಕ್ಷ ನಿತೇಶ್ ಪೂಜಾರಿ ಅಡ್ಕದಕರೆ ಹಾಗೂ ಸಂಘದ ಪದಾಧಿಕಾರಿಗಳು, ಊರವರ ಸಹಕಾರದೊಂದಿಗೆ 15 ಲಕ್ಷ ರೂ.ವೆಚ್ಚದಲ್ಲಿ ಸುಂದರವಾದ ಗುರುಭವನ ಹಾಗೂ ಗುರುಮಂದಿರ ನಿರ್ಮಾಣಗೊಂಡಿದೆ.

11, 12ರಂದು ಕಾರ್ಯಕ್ರಮ

ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಲಶಾಭಿಷೇಕ, ಬ್ರಹ್ಮಶ್ರೀ ಗುರುಭವನ ಉದ್ಘಾಟನೆ ಜ.11 ಮತ್ತು 12ರಂದು ನಡೆಯಲಿದೆ. 11ರಂದು 3.30ಕ್ಕೆ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಆವರಣದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಮೆರವಣಿಗೆ ಹಾಗೂ ತಂತ್ರಿವರ್ಯರ ಆಗಮನ, ಹೊರೆಕಾಣಿಕೆ ಮೆರವಣಿಗೆ, ಉಗ್ರಾಣ ಮುಹೂರ್ತ, ಸಂಜೆ 6.30ರಿಂದ ವೈದಿಕ ವಿಧಿವಿಧಾನಗಳು, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ 9.30ರಿಂದ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ, ಸುಂಕದಕಟ್ಟೆ ಯಕ್ಷಗಾನ ಪ್ರದರ್ಶನ ಬಪ್ಪನಾಡು ಕ್ಷೇತ್ರ ಮಹಾತ್ಮೆ ನಡೆಯಲಿದೆ.

12ರಂದು ಗಣಹೋಮ, ಬ್ರಹ್ಮಶ್ರೀ ನಾರಾಯಣ ಗುರುಮೂರ್ತಿ ಪ್ರತಿಷ್ಠಾಪನೆ, ಕಲಶಾಭಿಷೇಕ, ಮಧ್ಯಾಹ್ನ 12ಕ್ಕೆ ಗುರುಪೂಜೆ ನಡೆಯಲಿದೆ. ಶಾಸಕ ಹರೀಶ್ ಪೂಂಜ, ಚಿತ್ತರಂಜನ್ ಕಂಕನಾಡಿ, ಪದ್ಮರಾಜ್ ಆರ್.ಪೂಜಾರಿ, ಮಾಜಿ ಶಾಸಕ ಪ್ರಭಾಕರ ಬಂಗೇರ, ಹರೀಶ್ ಸಾಲ್ಯಾನ್ ಮೋರ್ತಾಜೆ, ಎಂಎಲ್‌ಸಿ ಬಿ.ಕೆ ಹರಿಪ್ರಸಾದ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ರಕ್ಷಿತ್ ಶಿವರಾಂ, ಶಾಸಕ ಉಮಾನಾಥ್ ಕೋಟ್ಯಾನ್, ಸತ್ಯಜಿತ್ ಸುರತ್ಕಲ್, ಹರೀಶ್ ಕುಮಾರ್, ಸಂಪತ್ ಬಿ.ಸುವರ್ಣ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net