

ಬಂಟ್ವಾಳ: ಪಾಲಕರ ಒಡನಾಟ, ಕುಟುಂಬ ಪ್ರೀತಿ, ಬಾಂಧವ್ಯ ಇದ್ದರೆ ಶಾಲೆಗಳು ಯಾವ ರೀತಿ ಅಭಿವೃದ್ಧಿ ಹೊಂದುತ್ತವೆ ಎಂಬುದಕ್ಕೆ ಏಮಾಜೆ ಶಾಲೆ ಮಾದರಿ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ ಹೇಳಿದರು.
ಬಂಟ್ವಾಳ ತಾಲೂಕು ನೆಟ್ಲ ಮೂಡ್ನೂರು ಗ್ರಾಮದ ಏಮಾಜೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಪೂರ್ವ ಪ್ರಾಥಮಿಕ ತರಗತಿ ಉದ್ಘಾಟಿಸಿ ಮಾತನಾಡಿದರು.
ಶಾಲಾ ಮಂತ್ರಿಮಂಡಲಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮಾಣವಚನ ಬೋಧಿಸಿದರು. ದಾನಿಗಳು ನೀಡಿದ ಬರೆಯುವ ಪುಸ್ತಕ, ಶಾಲಾ ಸಮವಸ್ತ್ರ, ಬೆಲ್ಟ್, ಟೈ, ಗುರುತಿನ ಕಾರ್ಡ್ ವಿತರಿಸಲಾಯಿತು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ತಾಲೂಕು ಯೋಜನಾಧಿಕಾರಿ ರಮೇಶ್ ವಿಶ್ವ ಪರಿಸರ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಎಸ್‌ಡಿಎಂಸಿ ಅಧ್ಯಕ್ಷೆ ಮಲ್ಲಿಕಾ, ಉಪಾಧ್ಯಕ್ಷ ಪ್ರಸಾದ್ ಆಚಾರ್ಯ, ಗ್ರಾಪಂ ಅಧ್ಯಕ್ಷೆ ಸಮಿತ ಡಿ.ಪೂಜಾರಿ, ಸದಸ್ಯ ಧನಂಜಯ ಗೌಡ, ಶಾಲಾ ಗೌರವಾಧ್ಯಕ್ಷ ಜಯರಾಮ್ ರೈ, ನಿವೃತ್ತ ಪ್ರಾಂಶುಪಾಲೆ ಪ್ರೇಮಲತಾ ರೈ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುರಳೀಧರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ತ್ರಿವೇಣಿ ರಮೇಶ್ ಸ್ವಾಗತಿಸಿದರು. ಸಹ ಶಿಕ್ಷಕ ಉದಯ ಚಂದ್ರ ವಂದಿಸಿದರು. ಗೌರವ ಶಿಕ್ಷಕಿ ಅಕ್ಷತಾ ಕೆ. ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ದೀಕ್ಷಾ ಸಹಕರಿಸಿದರು.