

ವಿಜಯವಾಣಿ ಸುದ್ದಿಜಾಲ, ಪುತ್ತೂರು ಗ್ರಾಮಾಂತರ
ಕಲಿತ ಸರ್ಕಾರಿ ಶಾಲೆಗೆ ಸಹಾಯ ಮಾಡುವ ಜತೆಗೆ, ವಿದ್ಯಾರ್ಥಿಗಳ ಶಿಕ್ಷಣ ಪ್ರೋತ್ಸಾಹಿಸುತ್ತಿರುವ ಹರ್ಷಕುಮಾರ್ ರೈ ಅವರ ಕಾರ್ಯ ಮಾದರಿ. ವಿದ್ಯಾರ್ಥಿಗಳು ಪುಸ್ತಕಗಳನ್ನು ಸದ್ಬಳಕೆ ಮಾಡಿ ಶೈಕ್ಷಣಿಕ ಸಾಧನೆ ಮಾಡಬೇಕು ಎಂದು ಕೆಯ್ಯೂರು ಗ್ರಾ.ಪಂ ಅಧ್ಯಕ್ಷ ಶರತ್ಕುಮಾರ್ ಮಾಡಾವು ಹೇಳಿದರು.
ಕೆಯ್ಯೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್(ಕೆಪಿಎಸ್) ಪ್ರಾಥಮಿಕ ವಿಭಾಗದಲ್ಲಿ ಪುತ್ತೂರಿನ ಜನ್ಮ ಫೌಂಡೇಷನ್ ಟ್ರಸ್ಟ್ ವತಿಯಿಂದ ಕುರಿಯ ಮಾಡಾವು ಏಳ್ನಾಡುಗುತ್ತು ಅಮ್ಮಕ್ಕ-ತ್ಯಾಂಪಣ್ಣ ರೈ ಸ್ಮರಣಾರ್ಥ ನಡೆದ 12ನೇ ವರ್ಷದ ಪುಸ್ತಕ ವಿತರಣೆ ಹಾಗೂ ವಿದ್ಯಾಸಿರಿ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್, ಕೆಪಿಎಸ್ ಪ್ರಾಂಶುಪಾಲ ಇಸ್ಮಾಯಿಲ್ ಪಿ. ಮಾತನಾಡಿದರು. ಜನ್ಮ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷ ಹರ್ಷ ಕುಮಾರ್ ರೈ ಮಾಡಾವು ಸ್ವಾಗತಿಸಿದರು. ಕೆಪಿಎಸ್ ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಬಾಬು ವಂದಿಸಿದರು. ಸಹ ಶಿಕ್ಷಕ ರವಿ ಪಿ.ಎಂ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕರಾದ ನವೀನ್ ರೈ, ವಸಂತಿ, ಸಂಧ್ಯಾ, ಆದಿತ್ಯ ಮತ್ತಿತರರು ಇದ್ದರು. ಕಸಾಪ ಪುತ್ತೂರು ತಾಲೂಕು ಘಟಕ ಮತ್ತು ಕೆಪಿಎಸ್ ಪ್ರಾಥಮಿಕ ವಿಭಾಗದ ಸಹಕಾರದಲ್ಲಿ ಕಾರ್ಯಕ್ರಮ ನಡೆಯಿತು.
ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ನ ಪ್ರಾಥಮಿಕ ವಿಭಾಗದ ಎಲ್ಕೆಜಿಯಿಂದ 8ನೇ ತರಗತಿವರೆಗಿನ ಒಟ್ಟು 430 ವಿದ್ಯಾರ್ಥಿಗಳಿಗೆ ತಲಾ 4 ಬರೆಯುವ ಪುಸ್ತಕಗಳಂತೆ ಒಟ್ಟು 1700 ಪುಸ್ತಕಗಳನ್ನು ವಿತರಿಸಲಾಯಿತು. ಅತ್ಯುತ್ತಮ ವಿದ್ಯಾರ್ಥಿಯಾಗಿ ಗುರುತಿಸಿದ ಮಿನಾಜ್ರನ್ನು ಸನ್ಮಾನಿಸಿ, ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಅಲ್ಲದೆ ತರಗತಿವಾರು ಉತ್ತಮ ಅಂಕ ಗಳಿಸಿದ 16 ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಪುರಸ್ಕಾರ ನೀಡಲಾಯಿತು.