8ರಂದು ಮುಗೇರಡ್ಕ ಶಾಲೆ ಟ್ರಸ್ಟ್ ಉದ್ಘಾಟನೆ

Published on

ಬೆಳ್ತಂಗಡಿ: ಮೊಗ್ರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿಗಾಗಿ ನೂತನವಾಗಿ ರಚನೆಗೊಂಡ ಮುಗೇರಡ್ಕ ಮೊಗ್ರು ಸರ್ಕಾರಿ ಶಾಲಾ ಸೇವಾ ಟ್ರಸ್ಟ್ ಉದ್ಘಾಟನೆ ಹಾಗೂ ಸರ್ಕಾರಿ ಸೌಲಭ್ಯಗಳ ಮಾಹಿತಿ ಕಾರ್ಯಾಗಾರ ಸೆ.8ರಂದು ನಡೆಯಲಿದೆ ಎಂದು ನೂತನ ಟ್ರಸ್ಟ್ ಅಧ್ಯಕ್ಷ ಯೋಗಗುರು ಕುಶಾಲಪ್ಪ ಗೌಡ ನೆಕ್ಕರಜೆ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ಶೈಕ್ಷಣಿಕ ವರ್ಷದಿಂದ ಈ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಪ್ರಾರಂಭಿಸಲು 16 ಸದಸ್ಯರನ್ನು ಒಳಗೊಂಡ ನೂತನ ಟ್ರಸ್ಟ್ ರಚನೆ ಮಾಡಲಾಗಿದೆ. ಇದರ ಉದ್ಘಾಟನೆ ಹಾಗೂ ಉನ್ನತ ಹಾಗೂ ಗುಣಮಟ್ಟದ ಶಿಕ್ಷಣ ಪಡೆಯಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಸೌಲಭ್ಯಗಳ ಮಾಹಿತಿ ನೀಡಲು ನಾಲ್ವರು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿದೆ. ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವುದರ ಕುರಿತು ಪುರುಷೋತ್ತಮ ಅಂಚನ್, ಸರ್ಕಾರಿ ಶಾಲಾ ಸೌಲಭ್ಯಗಳು ಹಾಗೂ ಇಲಾಖೆಗಳ ಬಗ್ಗೆ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ವಾರಿಜ, ಉನ್ನತ ಶಿಕ್ಷಣ ಸಾಧನೆಗೆ ಹಲವು ದಾರಿ ಕುರಿತು ಶಿಕ್ಷಕ ಕುಶಾಲಪ್ಪ ಗೌಡ, ಡಿಜಿಟಲ್ ಮಾಧ್ಯಮ ಮತ್ತು ಶಿಕ್ಷಣ ಕುರಿತು ಮಂಗಳೂರು ಶಿಕ್ಷಕಿ ದೀಕ್ಷಾ ಪ್ರಸಾದ್ ಸಂಪನ್ಮೂಲತಿಳಿಸಲಿದ್ದಾರೆ ಎಂದರು.

ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್‌ನ ಕೆ.ಮೋಹನ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಹರೀಶ್ ಪೂಂಜ, ಪುರುಷೋತ್ತಮ್ ಅಂಚನ್, ಡಾ.ಅಶ್ವಿನಿ ಶೆಟ್ಟಿ, ಮುಗೇರಡ್ಕದ ಆಡಳಿತ ಮೊಕ್ತೇಸರ ರಾಮಣ್ಣ ಗೌಡ, ಪದ್ಮುಂಜ ಸಹಕಾರ ಸಂಘದ ಅಧ್ಯಕ್ಷ ರಕ್ಷಿತ್ ಪಣೇಕ್ಕರ್, ಮುಖ್ಯ ಶಿಕ್ಷಕ ಸತ್ಯಶಂಕರ ಭಟ್, ಬಂದಾರು ಗ್ರಾ.ಪಂ ಅಧ್ಯಕ್ಷ ದಿನೇಶ್ ಗೌಡ, ಬ್ಯಾಂಕ್ ಉದ್ಯೋಗಿ ಪುರಂದರ ಪಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿ ಸುಧಾಕರ ನಾಯಿಮಾರ್, ಟ್ರಸ್ಟ್ ಕಾರ್ಯದರ್ಶಿ ಮನೋಹರ ಗೌಡ ಅಂತರ, ಕೋಶಾಧಿಕಾರಿ ಪುರಂದರ ನಾಯಿಮಾರ್, ಸಂಚಾಲಕ ಭರತೇಶ್ ಜಾಲ್ನಡೆ ಉಪಸ್ಥಿತರಿದ್ದರು.

70 ವರ್ಷದ ವಿದ್ಯಾಸಂಸ್ಥೆ

ಟ್ರಸ್ಟಿ ಸುಧಾಕರ ನಾಯಿಮಾರ್ ಮಾತನಾಡಿ, 70 ವರ್ಷಗಳ ಮೊಗ್ರು ಮುಗೇರಡ್ಕ ಶಾಲೆಯನ್ನು ಅಭಿವೃದ್ಧಿಪಡಿಸಿ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಟ್ರಸ್ಟ್ ರಚನೆ ಮಾಡಲಾಗಿದೆ. ವಿದ್ಯಾಭಿಮಾನಿಗಳ, ದಾನಿಗಳ ಸಹಕಾರದೊಂದಿಗೆ ಸರ್ಕಾರಿ ಶಾಲೆಗೆ ಮೂಲಸೌಕರ್ಯ ಒದಗಿಸಿ ಆಧುನಿಕ ಪದ್ಧತಿಯ ಶಿಕ್ಷಣ, ಸಾಮಗ್ರಿ ಹಾಗೂ ಗ್ರಾಮೀಣ ಪ್ರತಿಭೆಗಳಿಗೆ ಆಂಗ್ಲ ಭಾಷೆಯ ಶಿಕ್ಷಣ ಒದಗಿಸುವುದು ಉದ್ದೇಶವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net