

ಬೇಲೂರು: ಲಯನ್ಸ್ ಸಂಸ್ಥೆಯ ಟ್ರಸ್ಟ್‌ನಿಂದ ನಿರ್ಮಿಸಿರುವ ಕಟ್ಟಡವನ್ನು ಅ.13ರಂದು ಉದ್ಘಾಟಿಸಲಾಗುವುದು ಎಂದು ಲಯನ್ಸ್ ಸಂಸ್ಥೆ ಟ್ರಸ್ಟ್ ಅಧ್ಯಕ್ಷ ಪ್ರಭಾಕರ್ ಹೇಳಿದರು.
ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಲಯನ್ಸ್ ಸಂಸ್ಥೆ 13 ವರ್ಷಗಳಿಂದ ಆರೋಗ್ಯ ಶಿಬಿರ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತ ಸಮಾಜಮುಖಿ ಕೆಲಸ ಮಾಡುತ್ತಿದೆ. ಆದರೆ ನಮ್ಮ ಸಂಸ್ಥೆಗೆ ಸ್ವಂತ ಕಟ್ಟಡ ಇಲ್ಲದ ಕಾರಣ ಮೂರು ವರ್ಷಗಳ ಹಿಂದೆ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದ್ದೆವು. ಆದರೆ ಈಗ ಕಾಮಗಾರಿ ಮುಗಿದಿದ್ದು ಕಟ್ಟಡವನ್ನು ಭಾನುವಾರ ಉದ್ಘಾಟಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮಕ್ಕೆ ಶಾಸಕ ಎಚ್.ಕೆ.ಸುರೇಶ್, ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಸೇರಿದಂತೆ ಲಯನ್ಸ್ ಸಂಸ್ಥೆ ಗಣ್ಯರು, ಪದಾಧಿಕಾರಿಗಳು ಭಾಗವಹಿಸಲಿದ್ದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸ ಬೇಕೆಂದು ಕೋರಿದರು.
ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ಚಂದ್ರಮೌಳಿ ಮಾತನಾಡಿ, ಬೇಲೂರಿನಲ್ಲಿ ನಮ್ಮ ಸಂಸ್ಥೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಆರೋಗ್ಯಕ್ಕೆ ಸಂಬಂಧಿಸಿದ ಶಿಬಿರ, ರಕ್ತದೊತ್ತಡ, ಮಧುಮೇಹ ತಪಾಸಣೆ ನಡೆಸಿದ್ದೇವೆ. ಆದರೆ ನಮಗೆ ಸ್ಥಳಾವಕಾಶದ ಕೊರತೆ ಇದ್ದುದರಿಂದ ನಮ್ಮದೇ ಆದ ಸ್ವಂತ ಕಟ್ಟಡ ಕಟ್ಟಬೇಕೆಂಬ ನಿಟ್ಟಿನಲ್ಲಿ ಚಿಂತಿಸಿ ಟ್ರಸ್ಟ್ ತೆರೆದು ತಾಲೂಕಿನ ಗಣ್ಯರ ಮತ್ತು ಸಂಸ್ಥೆಯ ಪದಾಧಿಕಾರಿಗಳ ಸಹಕಾರದೊಂದಿಗೆ ಕಟ್ಟಡ ನಿರ್ಮಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದರು.
ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಮುಕ್ತಾರ್ ಅಹಮದ್, ವಲಯಾಧ್ಯಕ್ಷ ಅಬ್ದುಲ್ ಲತೀಫ್, ಟ್ರಸ್ಟಿಗಳಾದ ಪ್ರಶಾಂತ್, ವೈ.ಬಿ.ಸುರೇಶ್‌ಗೌಡ ಇದ್ದರು.