ಕಿಕ್ಕೇರಿ: ಜೀರ್ಣೋದ್ಧಾರಗೊಂಡಿರುವ ಹೋಬಳಿಯ ಕಡಹೆಮ್ಮಿಗೆ ಗ್ರಾಮದ ಗ್ರಾಮದೇವತೆ ಲಕ್ಷ್ಮೀದೇವಿ ಅಮ್ಮನವರ ದೇಗುಲ ಉದ್ಘಾಟನಾ ಸಮಾರಂಭ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಎಚ್.ಎಲ್. ಕುಟುಂಬ ಹಾಗೂ ಗ್ರಾಮಸ್ಥರು, ಭಕ್ತರ ಸಹಕಾರದಲ್ಲಿ ದೇವಿಯ ದೇಗುಲ ಪುನರುತ್ಥಾನ, ವಿಮಾನ ಗೋಪುರ, ದೇಗುಲ ಶಿಖರ ಪ್ರತಿಷ್ಠಾಪನೆ, ಕಲಶಾಭಿಷೇಕ ನಡೆದು ಭಕ್ತರು ಪುಳಕಿತರಾದರು.
ನಾಲ್ಕೈದು ದಿನಗಳ ಕಾಲ ನಡೆದ ಧಾರ್ಮಿಕ ಪೂಜಾ ವಿಧಾನಗಳಲ್ಲಿ ನಿತ್ಯದೇವಿಗೆ ಅಭಿಷೇಕ, ಹೋಮ ಹವನಾದಿಗಳು ನಡೆದವು. ಆಲಯ ಪರಿಗ್ರಹ, ಸಾಮೂಹಿಕ ದೇವತಾ ಪ್ರಾರ್ಥನೆ, ರಾಕ್ಷೋಗ್ನ ಹೋಮ, ವಾಸ್ತು ಪೂಜೆ, ಹೋಮ, ಬಲಿ ಪೂಜೆ, ಪುಣ್ಯಾಹ್ನ ಪಂಚಗವ್ಯ, ಅಷ್ಟದ್ರವ್ಯ ಮಹಾ ಗಣಪತಿ, ನವಗ್ರಹ, ಆದಿವಾಸ, ಶಿರಸ್ತತ್ಯ, ಶಾಂತಿ ಹೋಮ, ಆಂಜನೇಯಸ್ವಾಮಿ, ಲಕ್ಷ್ಮೀದೇವಿ ಬಿಂಬ ಪೂಜೆ, ಯತಿವರ್ಯರಿಗೆ ಗೌರವ ಪುರಸ್ಕಾರ, ಮಹಾಮಂಗಳಾರತಿ, ಗಂಧ ಪ್ರಸಾದ ವಿನಿಯೋಗ ನಡೆಯಿತು.
ಸಮೀಪದ ಹೇಮಾವತಿ ನದಿಯಿಂದ ಮಂಗಳವಾದ್ಯದೊಂದಿಗೆ ಮಹಿಳೆಯರು ಕುಂಬ ಕಳಶದ ಮೆರವಣಿಗೆಯೊಂದಿಗೆ ದೇವಿಯ ಗುಡಿಯವರೆಗೆ ಶ್ರದ್ಧಾಭಕ್ತಿಯಿಂದ ಸಾಗಿದರು. ದೇವಿಗೆ ಸಹಸ್ರ ಕಲಶಾಭಿಷೇಕವನ್ನು ಅರ್ಚಕರು ನೆರವೇರಿಸಿದರು. ವಿವಿಧ ಪರಿಮಳ ಪುಷ್ಪ, ವಸ್ತ್ರ, ಆಭರಣಗಳಿಂದ ದೇವಿ ಶೃಂಗರಿಸಿ ಪೂಜಿಸಲಾಯಿತು. ಭಕ್ತರಿಗೆ ಸಾಮೂಹಿಕ ಅನ್ನ ದಾಸೋಹ ಏರ್ಪಡಿಸಲಾಗಿತ್ತು. ದಾನಿ ಎಚ್.ಎಲ್. ಕುಟುಂಬ ಸೇರಿದಂತೆ ಗ್ರಾಮಸ್ಥರು, ವಿವಿಧ ಮುಖಂಡರು ಭಾಗಿಯಾಗಿದ್ದರು.