

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಡೆಂಘೆ ಮಾರಕವಾಗಿ ಪರಿಣಮಿಸುತ್ತಿದೆ. ಮನೆ ಸುತ್ತಮುತ್ತ, ಶಾಲಾ ಪರಿಸರದಲ್ಲಿ ನೀರು ನಿಲ್ಲದಂತೆ ಕ್ರಮವಹಿಸಿ, ರೋಗದಿಂದ ದೂರ ಇರಬೇಕು. ಡೆಂಘೆಗೆ ನಿರ್ದಿಷ್ಟ ಚಿಕಿತ್ಸೆಯೆಂಬುವುದಿಲ್ಲ, ಆರೋಗ್ಯ ಕಾಪಾಡಿಕೊಳ್ಳಿ ಎಂದು ತಹಸೀಲ್ದಾರ್ ಎಸ್.ಎ.ಪುರಂದರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕುಡಿಬೈಲು ಕುಚ್ಚೂರು ಶಾಂತಿನಿಕೇತನ ಯುವವೃಂದ ನೇತೃತ್ವದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರ, ಕುಚ್ಚೂರು ಹೆರ್ಗ ವಿಠಲಶೆಟ್ಟಿ ಪ್ರೌಢಶಾಲೆ ಸಹಕಾರದೊಂದಿಗೆ ಸೋಮವಾರ ಡೆಂಘೆ, ಮಲೇರಿಯಾ ಸಾಂಕ್ರಾಮಿಕ ರೋಗಗಳ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಸಂತೋಷ್ ಕುಮಾರ್ ಮಾತನಾಡಿ, ಜ್ವರ ಬಂದಾಗ ಕಡೆಗಣಿಸಬಾರದು. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಸೇವೆಗಳು ದೊರೆಯುತ್ತವೆ. ಡೆಂಘೆ ಹಾಗೂ ಮಲೇರಿಯಾವನ್ನು ಕಡೆಗಣಿಸಿದರೆ ಸಾವು ಬರಬಹುದು ಎಂದರು. ಶಾಂತಿನಿಕೇತನ ಅಧ್ಯಕ್ಷ ದೀಕ್ಷಿತ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಸುರೇಶ್ ದೇವಾಡಿಗ, ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಪವಿತ್ರಾ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.