

ಚಿಕ್ಕಬಳ್ಳಾಪುರ: ಜಿಲ್ಲೆಯ ಬಹುದಿನಗಳ ಬೇಡಿಕೆಯಾದ ಸರ್ಕಾರಿ ವೈದ್ಯಕೀಯ ಹೈಟೆಕ್ ಪ್ರಯೋಗಾಲಯ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್ ಬುಧವಾರ ಚಾಲನೆ ನೀಡಿದ್ದು 10 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ನರ ಸೇವೆಗೆ ಲೋಕಾರ್ಪಣೆಗೊಳಿಸುವ ಗುರಿ ಹೊಂದಲಾಗಿದೆ.
ಸಚಿವರ ಶಿಾರಸಿನಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಯೋಗಾಲಯ ನಿರ್ಮಾಣಕ್ಕೆ 8.20 ಕೋಟಿ ರೂ. ಅನುದಾನ ನೀಡಿದೆ. ಇಲ್ಲಿನ ಜಿಲ್ಲಾಸ್ಪತ್ರೆ ಆವರಣದಲ್ಲಿ ರೇಡಿಯಾಲಜಿ ವಿಭಾಗದ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ ಎಂಆರ್‌ಐ, ಸಿ.ಟಿ. ಸ್ಕಾೃನ್, ಎಕ್ಸ್‌ರೇ, ಎಕೋ, ಟಿಎಂಟಿ ಹಾಗೂ ಎಲ್ಲ ರೀತಿಯ ರಕ್ತ ಪರೀಕ್ಷೆ ಸೇರಿ ಅತ್ಯಾಧುನಿಕ ಸೌಲಭ್ಯಗಳು ಇರುತ್ತವೆ.
ಶಾಸಕ ಪ್ರದೀಪ್ ಈಶ್ವರ್ ಅಯ್ಯರ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕುಮಾರ್, ಸರ್ಕಾರಿ ವೈದ್ಯಕೀಯ ಕಾಲೇಜಿನ ಡೀನ್ ಡಾ. ಮಂಜುನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ಮಂಜುಳಾ ದೇವಿ, ನಿವಾಸಿ ವೈದ್ಯಾಧಿಕಾರಿ ಡಾ ರಮೇಶ್ ಮತ್ತಿತರರು ಇದ್ದರು.
ಸಂಸದರ ವಿರುದ್ಧ ಮತ್ತೆ ಕಿಡಿ
ಸಚಿವ ಡಾ ಎಂ.ಸಿ.ಸುಧಾಕರ್ ಪರೋಕ್ಷವಾಗಿ ಸಂಸದ ಡಾ. ಕೆ.ಸುಧಾಕರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಹಿಂದೆ ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಜಿಲ್ಲೆಗೆ ಸರ್ಕಾರಿ ಎಂಆರ್‌ಐ ಸ್ಕಾೃನಿಂಗ್ ಕೇಂದ್ರ ಪ್ರಾರಂಭಿಸಲು ಅವರಿಗೆ ಏಕೆ ಸಾಧ್ಯವಾಗಲಿಲ್ಲ. ಅವೈಜ್ಞಾನಿಕವಾಗಿ ನಗರದಿಂದ ತುಂಬಾ ದೂರ ಇರುವ ಜಾಗದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಿಸಲಾಗಿದೆ. ನರ ಹಿತದಷ್ಟಿಗಿಂತಲೂ ವೈಯಕ್ತಿಕ ಹಿತಾಸಕ್ತಿಗೆ ಆದ್ಯತೆ ನೀಡಿರುವುದು ಸರಿಯೇ? ಎಂದು ಪ್ರಶ್ನಿಸಿದರು.
ಕೈಗಾರಿಕಾಭಿವೃದ್ಧಿ ಪ್ರದೇಶಕ್ಕೆ ಮಂಚೇನಹಳ್ಳಿಯಲ್ಲಿ ಕೇವಲ ಮಾತಿನಲ್ಲಿ ಜಾಗ ಗುರುತಿಸಿರುವುದು, ಕನ್ನಡ ಕಲಾಭವನವನ್ನು ನಿರ್ಲಕ್ಷಿಸಿದ್ದು ವೈದ್ಯಕೀಯ ಕಾಲೇಜಿನ ಕಾಮಗಾರಿ ವೆಚ್ಚವನ್ನು ಅನುಮೋದನೆ ಇಲ್ಲದೇ ಹೆಚ್ಚಿಸಿ, ಇದೀಗ ರಾಜಕೀಯ ಹೇಳಿಕೆಗಳನ್ನು ನೀಡುತ್ತಿರುವುದು ಶೋಭೆ ತರುವುದಿಲ್ಲ. ಜನಪ್ರತಿನಿಧಿಗೆ ದೂರದೃಷ್ಟಿ, ಜನರ ಹಿತ ಕಾಪಾಡುವ ಭಾವನೆ ಇರಬೇಕು ಎಂದರು.