ಹಾಸನ: ತಾಲೂಕಿನ ಸಾಲಗಾಮೆ ಹೋಬಳಿ ಬೊಮ್ಮೇನಹಳ್ಳಿ ಗ್ರಾಮದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸಮುದಾಯ ಭವನ ಹಾಗೂ 25 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಅಂಗನವಾಡಿ ಕಟ್ಟಡವನ್ನು ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಶುಕ್ರವಾರ ಉದ್ಘಾಟಿಸಿದರು.
ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಕಟ್ಟಡ ಉದ್ಘಾಟನೆ ಮಾಡಿದ ಶಾಸಕರನ್ನು ಗ್ರಾಮದ ಮಹಿಳೆಯರು ಆರತಿ ಎತ್ತಿ ಸ್ವಾಗತಿಸಿದರೆ, ಮುಖಂಡರು ಅವರನ್ನು ಅದ್ದೂರಿಯಾಗಿ ಬರಮಾಡಿಕೊಂಡು ಸನ್ಮಾನಿಸಿದರು.
ಬಳಿಕ ಮಾತನಾಡಿದ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್, ಗ್ರಾಮದ ಜನರಿಗೆ ಶುಭ ಸಮಾರಂಭಗಳಿಗೆ ಸಮುದಾಯಭವನ ಬೇಕು ಎಂಬ ಬಹು ದಿನಗಳ ಬೇಡಿಕೆ ಈಡೇರಿದೆ. ಗ್ರಾಮಸ್ಥರು ಇದರ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು.
ಗ್ರಾಮದ ಮಕ್ಕಳಿಗೆ ಅಂಗನವಾಡಿ ಅವಶ್ಯಕತೆ ಮನಗಂಡು ಕಟ್ಟಡ ನಿರ್ಮಿಸಿ ಉದ್ಘಾಟನೆ ಮಾಡಲಾಗಿದೆ. ಮಕ್ಕಳಿಗೆ ಅಂಗನವಾಡಿ ಮೂಲಕವೇ ಗುಣಮಟ್ಟದ ಶಿಕ್ಷಣ ಆರಂಭಿಸುವಂತೆ ಮನವಿ ಮಾಡಿದರು.