

ಉಪ್ಪಿನಂಗಡಿ: ಉನ್ನತ ಶಿಕ್ಷಣ ಎನ್ನುವುದು ಅರ್ಹತೆ ಇದ್ದರೆ ಸಾಮಾನ್ಯ ವ್ಯಕ್ತಿಗೂ ಸುಲಲಿತವಾಗಿ ಲಭಿಸುವ ಈ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣದ ಬಳಿಕ ಐಎಎಸ್, ಐಪಿಎಸ್, ವೈದ್ಯಕೀಯ, ಇಂಜಿನಿಯರಿಂಗ್‌ನಂತಹ ಉನ್ನತ ಶಿಕ್ಷಣದತ್ತ ಗಮನಹರಿಸಬೇಕು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕರೆ ನೀಡಿದರು.
ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ 12 ವಿವೇಕ ತರಗತಿ ಕೊಠಡಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಲು ಒಳ್ಳೆಯ ಅವಕಾಶಗಳಿವೆ. ಪ್ರತಿದಿನ ಪತ್ರಿಕೆ ಓದುವ ಅಭ್ಯಾಸ ಮಾಡಿಕೊಂಡು ಜ್ಞಾನ ಭಂಡಾರ ಹೆಚ್ಚಿಸಿಕೊಳ್ಳಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿದರು. ಉಪ್ಪಿನಂಗಡಿ ಗ್ರಾಪಂ ಅಧ್ಯಕ್ಷೆ ಲಲಿತಾ, ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಕ್, ದೀನರ ಕನ್ಯಾಮಾತೆ ದೇವಾಲಯದ ಜೆರಾಲ್ಡ್ ಡಿ ಸೋಜಾ, ಮಾಲಿಕ್ ದೀನಾರ್ ಜುಮಾ ಮಸೀದಿಯ ಎಚ್. ಯೂಸುಫ್, ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ರೋಟರಿ ಕ್ಲಬ್ ಮಾಜಿ ಅಧ್ಯಕ ಡಾ. ರಾಜಾರಾಮ್, ಡಾ. ನಿರಂಜನ ರೈ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಜಿ. ಕೃಷ್ಣ ರಾವ್ ಅರ್ತಿಲ, ವೆಂಕಪ್ಪ ಪೂಜಾರಿ, ಯು.ಟಿ. ತೌಸೀಫ್, ಅನಿ ಮೆನೇಜಸ್, ಅಬ್ದುಲ್ ರಹಿಮಾನ್ ಯುನಿಕ್, ಯೂಸುಫ್ ಪೆದಮಲೆ, ಆದಂ ಕೊಪ್ಪಳ, ಕೆನ್ಯೂಟ್, ನಝೀರ್ ಮಠ, ಚಂದ್ರಶೇಖರ ಮಡಿವಾಳ, ಸಣ್ಣಣ್ಣ, ಅಬ್ದುಲ್ ರಶೀದ್ ಮಠ, ಲೋಕೇಶ್ ಬೆತ್ತೋಡಿ, ಗೋಪಾಲ ಹೆಗ್ಡೆ, ಉಮೇಶ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಅಜೀಜ್ ಬಸ್ತಿಕ್ಕಾರ್ ಸ್ವಾಗತಿಸಿ, ಪ್ರಾಚಾರ್ಯ ಇಬ್ರಾಹಿಂ ಎಂ. ವಂದಿಸಿದರು. ಉಪನ್ಯಾಸಕರಾದ ಝುಬೇರ್, ತನುಶ್ರೀ ಕಾರ‌್ಯಕ್ರಮ ನಿರೂಪಿಸಿದರು.
ದೇವಸ್ಥಾನದ ಜಾಗ ಬಿಟ್ಟುಕೊಡಿ
ಉಪ್ಪಿನಂಗಡಿಯನ್ನು ಕೂಡಲ ಸಂಗಮದ ರೀತಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು, ದೇವಸ್ಥಾನದ ಜಾಗದಲ್ಲಿರುವವರು ಅದನ್ನು ಭಕ್ತಿಯಿಂದಲೇ ದೇವಸ್ಥಾನಕ್ಕೆ ಬಿಟ್ಟುಕೊಟ್ಟು ಸಹಕರಿಸಬೇಕು ಎಂದು ಶಾಸಕ ಅಶೋಕ್ ರೈ ಮನವಿ ಮಾಡಿದರು. .