ಆಂಜನೇಯಸ್ವಾಮಿ ದೇಗುಲ ಉದ್ಘಾಟನೆ

20 HRS 01
Published on

ಹಿರೀಸಾವೆ: ಹೋಬಳಿಯ ಹೊನ್ನಮಾರನಹಳ್ಳಿ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಶ್ರೀಆಂಜನೇಯಸ್ವಾಮಿ ದೇಗುಲದ ಉದ್ಘಾಟನಾ ಕಾರ್ಯಕ್ರಮ ಭಾನುವಾರ ವಿಜೃಂಭಣೆಯಿಂದ ನೆರವೇರಿತು.


ದೇಗುಲಕ್ಕೆ ಹಸಿರು ಚಪ್ಪರ, ಬಾಳೆಕಂದು ಕಟ್ಟಿ ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ವಿವಿಧ ಬಗೆಯ ಪುಷ್ಪ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಮುಂಜಾನೆಯೇ ಭಕ್ತರು ಜಮಾಯಿಸಿದ್ದು ಪೂಜಾ ಕೈಂಕರ್ಯಗಳು ಪ್ರಾರಂಭಗೊಂಡವು.


ಬೆಳಗ್ಗೆ ಧ್ವಜಕಂಭಾರಾಧನೆ, ದೇವಸ್ಥಾನದ ಮುಂಭಾಗ ಇರುವ ಅರಳಿಕಟ್ಟೆಯ ಸುತ್ತ ನಿರ್ಮಿಸಿದ್ದ ನಾಲ್ಕು ಯಜ್ಞ ಕುಂಡಗಳಲ್ಲಿ ನಿತ್ಯ, ಪರಿವಾರ, ಮೂರ್ತಿ, ದುಸ್ವಪ್ನ ಹೋಮಗಳು ಜರುಗಿದವು. 11.30ರಲ್ಲಿ ಭಕ್ತರ ಸಮ್ಮುಖದಲ್ಲಿ ಮಹಾಪೂರ್ಣಾಹುತಿ ಜರುಗಿತು.


ಶುಭ ವೃಷಭ ಲಗ್ನದಲ್ಲಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಮಹಾಕುಂಭಾಭಿಷೇಕ, ಮಹಾ ಮಂಗಳಾರತಿ ಬೆಳಗಿಸಿದ ಬಳಿಕ ಅನ್ನದಾಸೋಹ ನಡೆಯಿತು.
ಶಾಸಕ ಸಿ.ಎನ್.ಬಾಲಕೃಷ್ಣ, ಮಾಜಿ ಎಂಎಲ್‌ಸಿ ಎಂ.ಎ.ಗೋಪಾಲಸ್ವಾಮಿ, ಬಿಬಿಎಂಪಿ ನಿವೃತ್ತ ಮಖ್ಯ ಅಭಿಯಂತರ ಎಚ್.ಸಿ.ಅನಂತಸ್ವಾಮಿ, ಬಿಜಿಪಿ ಮುಖಂಡ ಆನಂದ್, ಕಾಂಗ್ರೆಸ್ ಮುಖಂಡ ರಾಮಚಂದ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ್, ಸದಸ್ಯ ದಿನೇಶ್ ಸೇರಿದಂತೆ ಹಲವು ಜನಪ್ರತಿನಿಧಿಗಳು, ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net