

ವಿಜಯವಾಣಿ ಸುದ್ದಿಜಾಲ ಕಡಬ
ಹಿಂದುಗಳು ಸಾಮಾಜಿಕ ಚಿಂತನೆ ಮೈಗೂಡಿಸಿಕೊಂಡಾಗ ರಾಷ್ಟ್ರ ನಿರ್ಮಾಣದೊಂದಿಗೆ ಧರ್ಮದ ಉಳಿವು ಸಾಧ್ಯ ಎಂದು ವಿಹಿಂಪ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ.ಪುರಾಣಿಕ್ ಹೇಳಿದರು.
ಕಡಬದ ಶ್ರೀ ಮಹಾಗಣಪತಿ ದೇವಸ್ಥಾನ ರಸ್ತೆಯಲ್ಲಿರುವ ಸೌರಭ ಟವರ್ಸ್‌ನಲ್ಲಿ ವಿಶ್ವ ಹಿಂದು ಪರಿಷತ್ ಕಡಬ ಪ್ರಖಂಡದ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಆಂಬುಲೆನ್ಸ್ ಸೇವೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ನಮ್ಮ ಧರ್ಮಕ್ಕೆ, ತತ್ವ, ಸಂಪ್ರದಾಯಗಳಿಗೆ ಧಕ್ಕೆಯುಂಟಾದಾಗ, ಸವಾಲುಗಳು ಎದುರಾದಾಗ ಅದನ್ನು ಸಮರ್ಥವಾಗಿ ಎದುರಿಸುವ ಕಾರ್ಯವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೇರಣೆಯಿಂದ ವಿಹಿಂಪ ಕಳೆದು 60 ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ. ಹಿಂದು ಧರ್ಮವನ್ನು ಕಾಡುತ್ತಿರುವ ಮತಾಂತರ ಪಿಡುಗು ಹಾಗೂ ಗೋಹತ್ಯೆಯಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ನಿರಂತರ ಹೋರಾಟ ಮಾಡುತ್ತಿರುವ ವಿಹಿಂಪ ಕಡಬ ಭಾಗದಲ್ಲಿ ಅತ್ಯಂತ ಪ್ರಬಲವಾಗಿ ಕೆಲಸ ಮಾಡುತ್ತಿದೆ ಎಂದರು.
ವಿಹಿಂಪ ಮಂಗಳೂರು ವಿಭಾಗದ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಆಂಬುಲೆನ್ಸ್ ಲೋಕಾರ್ಪಣೆ ಮಾಡಿದರು. ಕಡಬ ಪ್ರಖಂಡದ ಅಧ್ಯಕ್ಷ ರಾಧಕೃಷ್ಣ ಕೋಲ್ಪೆ ಅಧ್ಯಕ್ಷತೆ ವಹಿಸಿದ್ದರು.
ಮಾತೃಶಕ್ತಿ ಪ್ರಾಂತ ಸಂಯೋಜಕಿ ಸುರೇಖಾ ರಾಜ್, ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ.ಕೃಷ್ಣ ಪ್ರಸನ್ನ, ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಸೌರಭ ಟವರ್ಸ್ ಮಾಲೀಕ ಅರುಣ್‌ಕುಮಾರ್ ಜೆಡೆಮನೆ, ಸತ್ಯಶ್ರೀ ಮೆಡಿಕಲ್ಸ್‌ನ ಶ್ರೀಕಾಂತ್ ರಾವ್ ಅತಿಥಿಗಳಾಗಿ ಭಾಗವಹಿಸಿದ್ದರು. ವಿಹಿಂಪ ಕಡಬ ಪ್ರಖಂಡದ ಕಾರ್ಯದರ್ಶಿ ಜಯಂತ ಕಲ್ಲುಗುಡ್ಡೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಉಮೇಶ್ ಆಚಾರ್ಯ ಗೋಳಿಯಡ್ಕ ವಂದೇ ಮಾತರಂ ಹಾಡಿದರು. ಕಡಬ ಪ್ರಖಂಡ ದುರ್ಗಾವಾಹಿನಿ ಸಂಯೋಜಕಿ ದೇವಕಿ ಪೂವಳ ವಂದಿಸಿದರು. ವಿಹಿಂಪ ಕಡಬ ಪ್ರಖಂಡದ ಜತೆ ಕಾರ್ಯದರ್ಶಿ ಪ್ರಮೀಳಾ ಲೋಕೇಶ್ ನಿರೂಪಿಸಿದರು.
ಕಾರ್ಯಾಲಯಕ್ಕೆ ಕೊಠಡಿ ಒದಗಿಸಿದ ಸೌರಭ ಟವರ್ಸ್ ಮಾಲೀಕ ಅರುಣ್‌ಕುಮಾರ್ ಜೆಡೆಮನೆ ಹಾಗೂ ನೂತನವಾಗಿ ಲೋಕರ್ಪಣೆಯಾದ ಆಂಬುಲೆನ್ಸ್ ನಿರ್ವಾಹಕ ಶಿವರಾಜ್ ಕೊಡೆಂಕಿರಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಾಲಯದ ಕೆಲಸ ಸೇರಿದಂತೆ ವಿವಿಧ ರೀತಿಯಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಅಶ್ವಥ್ಥ, ನೆಲ್ಲಿಕಾಯಿ, ಬಿಲ್ವಪತ್ರೆ, ಶ್ರೀಗಂಧ, ಸಂಪಿಗೆ ಮುಂತಾದ ವಿವಿಧ ಜಾತಿಯ ಸಸಿಗಳನ್ನು ವಿತರಿಸಿದ್ದು ಗಮನ ಸೆಳೆಯಿತು.