ರೋಟರಿಯಿಂದ ಜನೋಪಯೋಗಿ ಕಾರ್ಯ

rotary
ಬೈಂದೂರು ರೋಟರಿ ಕ್ಲಬ್ ವತಿಯಿಂದ ನಿರ್ಮಿಸಲಾದ ನೂತನ ರೈಲು ಪ್ರಯಾಣಿಕರ ತಂಗುದಾಣವನ್ನು ದೇವ್‌ಆನಂದ್ ಲೋಕಾರ್ಪಣೆಗೊಳಿಸಿದರು
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಸಮುದಾಯದ ಸೇವೆಯಲ್ಲಿ ರೋಟರಿ ಸದಾ ಮುಂಚೂಣಿಯಲ್ಲಿದ್ದು, ಸಾರ್ವಜನಿಕರಿಗೆ ಉಪಯೋಗವಾಗುವಂತಹ ಹತ್ತಾರು ಯೋಜನೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತದೆ. ಇಂತಹ ಯೋಜನೆಗಳು ಧೀರ್ಘಾವಧಿಗೆ ಜನರ ಮನಸ್ಸಿನಲ್ಲಿ ಉಳಿಯುತ್ತದೆ ಎಂದು ರೋಟರಿ ಜಿಲ್ಲಾ ಗವರ್ನರ್ ಸಿಎ ದೇವ್‌ಆನಂದ್ ಹೇಳಿದರು.

ಬೈಂದೂರು ರೋಟರಿ ಕ್ಲಬ್ ವತಿಯಿಂದ ಮೂಕಾಂಬಿಕಾ ರೋಡ್ ರೈಲ್ವೆ ನಿಲ್ದಾಣದಲ್ಲಿ 2024-25ನೇ ಸಾಲಿನ ರೋಟರಿ ಸಾರ್ವಜನಿಕ ಸೇವೆ ಯೋಜನೆಯಡಿ ನಿರ್ಮಿಸಲಾದ ನೂತನ ರೈಲು ಪ್ರಯಾಣಿಕರ ತಂಗುದಾಣವನ್ನು ಮಂಗಳವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ರೋಟರಿ ಅಧ್ಯಕ್ಷ ಮೋಹನ್ ರೇವಣ್ಕರ್ ಮಾತನಾಡಿ, ಬೈಂದೂರು ರೈಲ್ವೆ ನಿಲ್ದಾಣದ ಮೂಲಕ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ತೆರಳುತ್ತಾರೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ತೆರಳುವ ಭಕ್ತರು ಈ ರೈಲು ಮಾರ್ಗ ಅವಲಂಭಿಸಿದ್ದಾರೆ. ರೈಲ್ವೆ ಯಾತ್ರಿಸಂಘದಿಂದ ಮನವಿ ಬಂದ ಹಿನ್ನೆಲೆಯಲ್ಲಿ ದಾನಿಗಳ ನೆರವಿನಿಂದ ಸುಸಜ್ಜಿತ ರೈಲ್ವೆ ನಿಲ್ದಾಣ ನಿರ್ಮಿಸಲಾಗಿದೆ ಎಂದರು.

ಸಹಾಯಕ ಗವರ್ನರ್ ಡಾ.ಬಿ.ರಾಜೇಂದ್ರ ಶೆಟ್ಟಿ, ರಾಷ್ಟ್ರೀಯ ರೈಲ್ವೆ ಬಳಕೆದಾರರ ಸಲಹಾ ಮಂಡಳಿ ಮಾಜಿ ಸದಸ್ಯ ಕುಂಜಾಲು ವೆಂಕಟೇಶ ಕಿಣಿ, ಟೆಂಪೋ ರಿಕ್ಷಾ ಟ್ಯಾಕ್ಸಿ ಚಾಲಕ ಮಾಲಕರ ಸಂಘದ ಅಧ್ಯಕ್ಷ ಸುರೇಶ್ ಬಟ್ವಾಡಿ, ವಲಯ ಸೇನಾನಿ ಪ್ರದೀಪ್ ಡಿ.ಕೆ. ಇದ್ದರು. ರೂಪಾ ರೇವಣ್ಕರ್ ಪ್ರಾರ್ಥಿಸಿದರು. ಕಾರ್ಯದರ್ಶಿ ಸುನಿಲ್ ಎಚ್. ಜಿ. ವಂದಿಸಿದರು. ಸುಧಾಕರ ಪಿ. ಬೈಂದೂರು ನಿರೂಪಸಿದರು.

ಮಾಹಿತಿ ಫಲಕ ಉದ್ಘಾಟನೆ

ಕೊಂಕಣ್ ರೈಲ್ವೆಯ ಸೀನಿಯರ್ ರೀಜನಲ್ ಟ್ರಾಫಿಕ್ ಮ್ಯಾನೇಜರ್ ದಿಲೀಪ್ ಡಿ. ಭಟ್ ರೋಟರಿ ಮಾಹಿತಿ ಫಲಕ ಉದ್ಘಾಟಿಸಿದರು. ರೋಟರಿ ನೀಡಿದ್ದ 3 ಬೆಂಚುಗಳನ್ನು ಮೂಕಾಂಬಿಕಾ ರೈಲ್ವೆಯಾತ್ರಿ ಸಂಘದ ಅಧ್ಯಕ್ಷ ಜಯಾನಂದ ಹೋಬಳಿದಾರ್ ಲೋಕಾರ್ಪಣೆಗೊಳಿಸಿದರು. ಬಳಿಕ ರೈಲು ತಂಗುದಾಣ ನಿರ್ಮಾಣಕ್ಕೆ ದೇಣಿಗೆ ನೀಡಿದ ಸುಮತಿ ಸುಬ್ರಾಯ ರೇವಣ್ಕರ್ ಶಿರೂರು ಹಾಗೂ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net