ಅಸಮರ್ಪಕ ಸೇವೆಯಿಂದ ಬೇಸತ್ತ ಜನ: 108 ಆಂಬುಲೆನ್ಸ್‌ಗೆ ಸಾರ್ವಜನಿಕರ ಪರದಾಟ

hospital
ಅರಕೇರಾ ಸಮುದಾಯ ಆರೋಗ್ಯ ಕೇಂದ್ರ ಹೊರನೋಟ.
Published on

ಮಹಾಂತೇಶ ಹಿರೇಮಠ ಅರಕೇರಾ
ತುರ್ತು ಸಂದರ್ಭದಲ್ಲಿ ನೆರವಾಗಬೇಕಾದ 108 ಆಂಬುಲೆನ್ಸ್ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯ ಸಾರ್ವಜನಿಕರಿಗೆ ಸಮರ್ಪಕವಾಗಿ ಸಿಗುತ್ತಿಲ್ಲ. ಇದರಿಂದ ಸರ್ಕಾರದ ನಿರೀಕ್ಷಿತ ಉದ್ದೇಶ ಬುಡಮೇಲಾಗಿದೆ.

ಗ್ರೀನ್ ಹೆಲ್ತ್ ಸರ್ವಿಸ್ ಏಜೆನ್ಸಿ ತಂತ್ರಗಾರಿಕೆಯಿಂದ ಸಮಸ್ಯೆ ಉದ್ಭವ

ದಿನದ 24 ಗಂಟೆಯೂ ಸಿಗಬೇಕಾದ 108 ಆಂಬುಲೆನ್ಸ್ ಸೇವೆ ವಾರದಲ್ಲಿ ಮೂರ‌್ನಾಲ್ಕು ದಿನ ಸ್ಥಗಿತಗೊಳ್ಳುತ್ತಿದೆ. ಆಂಬುಲೆನ್ಸ್‌ಗೆ ಯಾವುದೇ ತಾಂತ್ರಿಕ ತೊಂದರೆ ಇಲ್ಲದಿದ್ದರೂ ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಲಾಗುತ್ತದೆ. ಈ ಸಮಸ್ಯೆ ಆರೇಳು ತಿಂಗಳಿನಿಂದ ಉದ್ಭವಗೊಂಡಿದೆ. ಸಿಬ್ಬಂದಿ ಇಲ್ಲವೇ, ತಾಂತ್ರಿಕ ತೊಂದರೆ ಸೇರಿ ಯಾವುದೇ ಸಮಸ್ಯೆ ಹೇಳಿ 108 ಆಂಬುಲೆನ್ಸ್ ಸೇವೆ ನಿಲ್ಲಿಸಬಾರದು ಎಂದು ಸರ್ಕಾರ ಹೇಳುತ್ತದೆ. ಪರ್ಯಾಯ ವ್ಯವಸ್ಥೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದು ಆರೋಗ್ಯ ಇಲಾಖೆಯ ಜವಾಬ್ದಾರಿಯಾಗಿದೆ. ಆದರೆ 108 ಆಂಬುಲೆನ್ಸ್ ನಿರ್ವಹಣೆ ಜವಾಬ್ದಾರಿ ಹೊತ್ತ ಗ್ರೀನ್ ಹೆಲ್ತ್ ಸರ್ವಿಸ್ ಏಜೆನ್ಸಿ ತಂತ್ರಗಾರಿಕೆ ಅನುಸರಿಸುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಏಜೆನ್ಸಿಗೆ ಈ ಸಮಸ್ಯೆ ಬಗ್ಗೆ ಮಾಹಿತಿ ಇದ್ದರೂ ಯಾವುದೇ ಕ್ರಮಕೈಗೊಂಡಿಲ್ಲ

ತಿಂಗಳಿಗೆ 10-15 ದಿನ 108 ಆಂಬುಲೆನ್ಸ್ ಸೇವೆ ಸ್ಥಗಿತಗೊಳ್ಳುತ್ತಿದ್ದು, ವಾರಕ್ಕೆ ಮೂರ‌್ನಾಲ್ಕು ದಿನ ಹೊರತುಪಡಿಸಿ ಜನರಿಗೆ ಸೌಲಭ್ಯ ಸಿಗುತ್ತಿದೆ. ಇಬ್ಬರು ಸ್ಟಾಫ್‌ನರ್ಸ್, ಇಬ್ಬರು ಚಾಲಕರು ಸಧ್ಯ ಕರ್ತವ್ಯ ನಿರ್ವಹಿಸುತ್ತಿದ್ದು, ಹೆಚ್ಚುವರಿ ಸಿಬ್ಬಂದಿ ನೇಮಿಸದೇ ಇರುವುದರಿಂದ ಸಮಸ್ಯೆ ಎದುರಾಗಿದೆ. ಈಗಿರುವ ಸಿಬ್ಬಂದಿ ತಮ್ಮ ಕರ್ತವ್ಯದ ದಿನಗಳಲ್ಲಿ ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ. ಹೆಚ್ಚುವರಿ ಡ್ಯೂಟಿ ಮಾಡಲು ತಯಾರಿದ್ದರೂ, ಓಟಿ (ಓವರ್ ಟೈಮ್) ಡ್ಯೂಟಿ ಸಂಬಳ ನೀಡಲು ಏಜೆನ್ಸಿ ನಿರಾಕರಿಸುತ್ತಿರುವ ಕಾರಣ ಮೂರ‌್ನಾಲ್ಕು ದಿನ ಸ್ಥಗಿತಗೊಳ್ಳುತ್ತಿದೆ. ಆರೋಗ್ಯ ಅಧಿಕಾರಿಗಳಿಗೆ, ಏಜೆನ್ಸಿಗೆ ಈ ಸಮಸ್ಯೆ ಬಗ್ಗೆ ಮಾಹಿತಿ ಇದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಜಿಲ್ಲೆಯ ಅನೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಇದೇ ಪರಿಸ್ಥಿತಿ ಇದೆ. ಅಧಿಕಾರಿಗಳು ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕೆ ಎಂದು ಸಾರ್ವಜನಿಕರ ಒತ್ತಾಸೆಯಾಗಿದೆ.

ಸೇವೆ ಸಿಗದೆ ಸಾವು…!

108 ಆಂಬುಲೆನ್ಸ್ ನಿರ್ವಹಣೆ ಮಾಡಬೇಕಾದ ಏಜೆನ್ಸಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನಸಾಮಾನ್ಯರು ತೊಂದರೆಗೆ ಸಿಲುಕುತ್ತಿದ್ದಾರೆ. ಸೌಲಭ್ಯ ವಂಚಿತರು ಖಾಸಾಗಿ ವಾಹನಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಸಮುದಾಯ ಕೇಂದ್ರದ ವ್ಯಾಪ್ತಿಯಲ್ಲಿ ಇತ್ತೀಚೆಗೆ ಆದ ಎರಡ್ಮೂರು ರಸ್ತೆ ಅಪಘಾತಗಳಲ್ಲಿ 108 ಆಂಬುಲೆನ್ಸ್ ಸೌಲಭ್ಯ ಸಿಗದ ಕಾರಣ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಗಲಗ ರಸ್ತೆಯಲ್ಲಿ ಮೂರು ಸಾವು, ಕೊತ್ತದೊಡ್ಡಿಯಲ್ಲಿ ವಯೋವೃದ್ಧೆ ಸಾವಿಗೀಡಾಗಿದ್ದು, ತುರ್ತು ಪರಿಸ್ಥಿತಿ ಬಂದೊದಗಿದಾಗ ಟಾಟಾ ಎಸ್, ಟಂಟಂಗಳಲ್ಲಿ ಆಸ್ಪತ್ರೆಗೆ ದಾಖಲಿಸಿದ ಉದಾಹರಣೆಗಳಿವೆ. ಆದರೆ ಆರೋಗ್ಯ ಇಲಾಖೆ ಎಲ್ಲವೂ ಸರಿ ಇದೆ ಎನ್ನುವ ರೀತಿಯಲ್ಲಿ ನಿರ್ವಹಣೆ ಮಾಡುತ್ತಿದೆ.

ಅರಕೇರಾ ಆಸ್ಪತ್ರೆಯಲ್ಲಿ ನಿಂತಿರುವ ಆಂಬುಲೆನ್ಸ್.
ಅರಕೇರಾ ಆಸ್ಪತ್ರೆಯಲ್ಲಿ ನಿಂತಿರುವ ಆಂಬುಲೆನ್ಸ್.

ನಿಂತಲ್ಲೇ ನಿಲ್ಲುವ ಆಂಬುಲೆನ್ಸ್

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ 108 ಆಂಬುಲೆನ್ಸ್ ತಾಂತ್ರಿಕ ದೋಷದಿಂದ ಆಗಾಗ್ಗೆ ಕೈಕೊಡುತ್ತಿರುತ್ತದೆ. ವಾಹನ ನಿರ್ವಹಣೆ ಕೊರತೆ, ಆಯಿಲ್ ಬದಲಾವಣೆ, ಟೈಯರ್ ಬದಲಾವಣೆ ಸೇರಿ ಇನ್ನಿತರ ಕಾರಣಗಳಿಂದ ಕೆಲವೊಮ್ಮೆ ದುರಸ್ಥಿ ಹಂತಕ್ಕೆ ತಲುಪುತ್ತದೆ. ಆ ವೇಳೆ ರಾಯಚೂರಿನ ಗ್ಯಾರೆಜ್ ಒಂದರಲ್ಲಿ ಮಾತ್ರ ರಿಪೇರಿ ಮಾಡಿಸಬೇಕಿದೆ. ನಿರ್ವಹಣೆಗೆ ಅನುದಾನ ಕೊರತೆ ಸೇರಿ ಇನ್ನಿತರ ಕಾರಣಗಳಿಂದ ನಿಲ್ಲುವುದರಿಂದ ಜನಸಾಮಾನ್ಯರಿಗೆ ಸೌಲಭ್ಯಕ್ಕೆ ದೊರೆಯುತ್ತಿಲ್ಲ.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜನರ ಸೇವೆಗೆ 108 ಆಂಬುಲೆನ್ಸ್ ಸನ್ನದ್ಧರಾಗಿರಬೇಕು. ನಿರ್ವಹಣೆ ಮಾಡಬೇಕಾದ ಏಜೆನ್ಸಿ ಜನಸಾಮಾನ್ಯರಿಗೆ ಸಮರ್ಪಕ ಸೇವೆ ನೀಡಬೇಕು. ದಿನದ 24 ಗಂಟೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ತುರ್ತು ಸೇವೆ ಒದಗಿಸಲು ಏಜೆನ್ಸಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು.ಡಾ.ಸುರೇಂದ್ರ ಬಾಬು,ಡಿಎಚ್‌ಒ ರಾಯಚೂರು

ಮೇ16 ರಂದು ಗಲಗ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೂರು ಜನರಿಗೆ ಗಂಭೀರ ಗಾಯಗಳಾಗಿದ್ದವು. ಈ ಸಂಬಂಧ 108 ಸಹಾಯವಾಣಿಗೆ ಕರೆ ಮಾಡಿದ್ದಾಗ, ದೇವದುರ್ಗದಲ್ಲಿರುವ ಆಂಬುಲೆನ್ಸ್ ಕಳುಹಿಸಿಕೊಡುವುದಾಗಿ ಹೇಳಿದ್ದರು. ಆದರೆ ಆಂಬುಲೆನ್ಸ್ ಘಟನಾ ಸ್ಥಳಕ್ಕೆ ಬರಲಿಲ್ಲ. ಇದರಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟರು. ಇನ್ನುಳಿದವರನ್ನು ಬೈಕ್ ಮೇಲೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಂಬುಲೆನ್ಸ್ ಬಾರದ ಕಾರಣ ಮೂವರನ್ನು ಬದುಕುಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದ ಏಜೆನ್ಸಿ ವಿರುದ್ಧ ಮೇಲಾಧಿಕಾರಿಗಳಿಗೆ ದೂರು ನೀಡಿದ್ದೇನೆ. ಆದರೂ ವಾರದಲ್ಲಿ ಮೂರ‌್ನಾಲ್ಕು ದಿನ 108 ಆಂಬುಲೆನ್ಸ್ ಸೇವೆ ಸ್ಥಗಿತಗೊಳ್ಳುವುದು ಸಾಮಾನ್ಯವಾಗಿದೆ. ಏಜೆನ್ಸಿ ವಿರುದ್ಧ ಮೇಲಾಧಿಕಾರಿಗಳು ಇವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಹಾಜಿಮಸ್ತಾನ್ ಬಿ.ಗಣೇಕಲ್,ತಾಲೂಕು ಅಧ್ಯಕ್ಷ ರೈತ ಸಂಘ, ದೇವದುರ್ಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net