

ವಿಜಯವಾಣಿ ಸುದ್ದಿಜಾಲ ಕಡಬ
ಕಾಣಿಯೂರು ಮುಖ್ಯರಸ್ತೆ ಸಮೀಪದ ಚರಂಡಿ ಅಸಮರ್ಪಕವಾಗಿದ್ದು, ಕಾಣಿಯೂರು ಎಸ್‌ಡಿಎಂಸಿ ಮತ್ತು ಗ್ರಾಪಂ ಜಂಟಿ ಸ್ಥಳ ಪರಿಶೀಲನೆ ನಡೆಸಿ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಪಂ ಸದಸ್ಯ ಗಣೇಶ್ ಉದನಡ್ಕ ಕಾಣಿಯೂರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದರು. ಎಸ್‌ಡಿಎಂಸಿ ಮತ್ತು ಗ್ರಾಪಂ ಜಂಟಿ ಸಭೆ ನಡೆಸಿ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.
ಕಾಣಿಯೂರು ಗ್ರಾಪಂ ಸಾಮಾನ್ಯ ಸಭೆ ಗ್ರಾಪಂ ಅಧ್ಯಕ್ಷ ವಿಶ್ವನಾಥ ಕೊಪ್ಪ ಅಧ್ಯಕ್ಷತೆಯಲ್ಲಿ ಗ್ರಾಪಂ ಸಭಾಂಗಣದಲ್ಲಿ ನಡೆಯಿತು. ಗ್ರಾಪಂ ಉಪಾಧ್ಯಕ್ಷೆ ಗಂಗಮ್ಮ ಗುಜ್ಜರ್ಮೆ, ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ಗಣೇಶ್ ಉದನಡ್ಕ, ತಾರಾನಾಥ ಇಡ್ಯಡ್ಕ, ಲೋಕಯ್ಯ ಪರವ ದೋಳ್ಪಾಡಿ, ಪ್ರವೀಣ್ ಚಂದ್ರ ರೈ ಕುಮೇರು, ವಸಂತ ಪೆರ್ಲೋಡಿ, ಸುಲೋಚನಾ ಮಿಯೋಳ್ಪೆ, ತೇಜಕುಮಾರಿ ಉದ್ಲಡ್ಡ, ಲಲಿತಾ ದರ್ಖಾಸು, ಕೀರ್ತಿಕುಮಾರಿ ಅಂಬುಲ, ಮೀರಾ ಕಳೆಂಜೋಡಿ, ಸುನಂದ ಅಬ್ಬಡ, ಅಂಬಾಕ್ಷಿ ಕೂರೇಲು ಉಪಸ್ಥಿತರಿದ್ದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಘು ಎನ್.ಬಿ ನಿರ್ವಹಿಸಿದರು. ಇಲಾಖೆಯ ಸುತ್ತೋಲೆ, ಸಾರ್ವಜನಿಕ ಅರ್ಜಿಯನ್ನು ಸಿಬ್ಬಂದಿ ತಿಮ್ಮಪ್ಪ ಗೌಡ ಬೀರುಕುಡಿಕೆ ಓದಿದರು. ಪಂಚಾಯಿತಿ ಸಿಬ್ಬಂದಿ ಚಿತ್ರಾ, ಕುಮಾರ್, ಶಶಿಕಲಾ, ರಕ್ಷಿತ್, ಪಾರ್ವತಿ, ಧನಂಜಯ್ ಸಹಕರಿಸಿದರು.
ನೀರಿನ ಸಮಸ್ಯೆ ಪರಿಹಾರಕ್ಕೆ ಸೂಚನೆ
ಗ್ರಾಪಂ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳು ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಸಿಬ್ಬಂದಿ ಸ್ಪಂದಿಸುವಂತೆ ಸದಸ್ಯರು ಸೂಚಿಸಿದರು. ರಾಜ್ಯಹೆದ್ದಾರಿ ಹಾದು ಹೋಗುವ ನಗರ, ಪಟ್ಟಣ, ಗ್ರಾಮಗಳ ಪರಿಮಿತಿ ಹಾಗೂ ಇತರ ಆಕ್ಷೇಪಿತ ಪ್ರದೇಶಗಳಿಗೆ ಅನ್ವಯಿಸುವಂತೆ ನಿಗದಿ ಪಡಿಸಿದ್ದ ಕಟ್ಟಡ ರೇಖೆಯನ್ನು ಜಿಲ್ಲಾ ಮುಖ್ಯರಸ್ತೆಗಳಿಗೂ ಅನ್ವಯಿಸಲು ಇಲಾಖೆಯಿಂದ ಬಂದ ಸುತ್ತೋಲೆಯನ್ನು ಪಿಡಿಒ ಸಭೆಯ ಗಮನಕ್ಕೆ ತಂದರು.