ಸಾರಿಗೆಯಲ್ಲಿ ಸ್ತ್ರೀಯರ ಉಚಿತ ಪ್ರಯಾಣ ಆರಂಭ

NAGANDRA
ಬಳ್ಳಾರಿ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿದ ಸಚಿವ ಬಿ.ನಾಗೇಂದ್ರ ಬಸ್ ಕಂಡಕ್ಟರ್ ಆಗಿ ಹೆಣ್ಣುಮಕ್ಕಳಿಗೆ ಟಿಕೆಟ್ ನೀಡಿದರು.
Published on

ಬಳ್ಳಾರಿ: ರಾಜ್ಯಾದ್ಯಂತ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ ಜಾರಿಗೊಳಿಸಿದ್ದು, ಇಡೀ ದೇಶವೇ ಕರ್ನಾಟಕದತ್ತ ನೋಡುವಂತಾಗಿದೆ ಎಂದು ಪರಿಶಿಷ್ಟ ಪಂಗಡ ಕಲ್ಯಾಣ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಬಿ.ನಾಗೇಂದ್ರ ಹೇಳಿದರು.

ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಕೆಕೆಆರ್‌ಟಿಸಿಯಿಂದ ಭಾನುವಾರ ಏರ್ಪಡಿಸಿದ್ದ ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ನಾನು ಉಸ್ತುವಾರಿ ಸಚಿವ ಆದ ನಂತರ ಮೊದಲ ಬಾರಿಗೆ ಶಕ್ತಿ ಯೋಜನೆಗೆ ಚಾಲನೆ ನೀಡಿದ್ದು, ನನ್ನ ರಾಜಕೀಯ ಬದುಕಿನ ಅತ್ಯಂತ ಮಹತ್ವದ ಕಾರ್ಯಕ್ರಮ. ಇಂತಹ ಒಂದು ಕಾರ್ಯಕ್ರಮ ಜಾರಿಗೆ ತಂದ ಸರ್ಕಾರಕ್ಕೆ ಧನ್ಯವಾದ ಹೇಳುವೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದಾಗ ಈ ಕಾರ್ಯಕ್ರಮದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು. ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆ ಸೂಚಿಸಿದರೆಂದು ತಿಳಿಸಿದರು.

ಮಹಿಳೆಯರಿಗೆ ಪ್ರಯಾಣ ಉಚಿತ ಆಗಿರುವುದರಿಂದ ಪುರುಷರ ಹಣವೂ ಉಳಿತಾಯ ಆಗಲಿದೆ. ಯೋಜನೆಯನ್ನು ಮಹಿಳೆಯರು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ರಾಜ್ಯದ ಮಹಿಳೆಯರಿಗೆ ನಿಜವಾದ ಹಬ್ಬ. ಮಹಿಳೆಯರು ನಿತ್ಯದ ಕೆಲಸಗಳ ನಡುವೆ ಸಾರಿಗೆ ವೆಚ್ಚ ಭರಿಸುವುದು ಕಷ್ಟವಾಗಿತ್ತು. ಈ ಯೋಜನೆ ಮಹಿಳೆಯರಿಗೆ ತುಂಬ ಸಹಕಾರಿಯಾಗಲಿದೆ. ವ್ಯಾಪಾರ-ವಹಿವಾಟು ನಡೆಸುವ ಗ್ರಾಮೀಣ ಭಾಗದ ಮಹಿಳೆಯರಿಗೆ ಸಾಕಷ್ಟು ಅನುಕೂಲ ಆಗಲಿದೆ ಎಂದರು.

ಬಳ್ಳಾರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು, ಅದರಲ್ಲೂ ಅಧಿಕಾರಿಗಳು ಈ ಹಿಂದೆ ಹೇಗೆ ಕೆಲಸ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಇನ್ಮುಂದೆ ನನಗೆ ಸಹಕಾರ ನೀಡಬೇಕು ಎಂದರು.

ರಾಜ್ಯಸಭೆ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್ ಮಾತನಾಡಿ, ನಾವು ಭರವಸೆಗಳನ್ನು ನೀಡಿದ್ದೆವು, ಜನರು ನಮಗೆ ಬಹುಮತ ನೀಡಿದ್ದಾರೆ. ಜಿಲ್ಲೆಯ ಐದು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆದ್ದಿದೆ. ನಾವು ನೀಡಿದ ಭರವಸೆಗಳನ್ನು ಜಾರಿಗೆ ತರುವ ಸಮಯ ಇದು. ಕಾಂಗ್ರೆಸ್ ಮೊದಲಿನಿಂದಲೂ ಬಡವರು, ದುರ್ಬಲರ ಪರ ಇರುವ ಪಕ್ಷ, ಈ ಹಿನ್ನೆಲೆಯಲ್ಲಿ ಇಂದು ಶಕ್ತಿ ಯೋಜನೆಯಂತಹ ಕಾರ್ಯಕ್ರಮ ಜಾರಿಗೆ ತರಲು ಸಾಧ್ಯ ಆಗಿದೆ. ಡಿಎಂಎಫ್ ನಿಧಿಯಿಂದ ಬಳ್ಳಾರಿಗೆ 6 ಹೊಸ ಬಸ್ ತರಲಾಗಿದೆ. ಕೆಕೆಆರ್‌ಡಿಬಿ ನಿಧಿಯಿಂದ 60 ಬಸ್‌ಗಳು ಬಳ್ಳಾರಿಗಾಗಿ ಬರಲಿವೆ. ನಾಯಕ ರಾಹುಲ್ ಗಾಂಧಿ ಭರವಸೆ ನೀಡಿರುವಂತೆ ಬಳ್ಳಾರಿಯನ್ನು ಜೀನ್ಸ್ ರಾಜಧಾನಿ ಆಗಿ ರೂಪಿಸಲಾಗುವುದು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಕೊಟ್ಟ ಮಾತು ತಪ್ಪುವುದಿಲ್ಲ ಎಂದರು.ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಎಎಸ್ಪಿ ನಟರಾಜ್, ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಎಂ.ದೇವರಾಜು, ವಿಭಾಗೀಯ ಸಂಚಲನಾಧಿಕಾರಿ ಬಿ.ಚಾಮರಾಜ ಇತರರಿದ್ದರು.

**
ಕಮಲ ಚಿಹ್ನೆ ಕಂಡು ಗರಂ

ಬಳ್ಳಾರಿ ನಗರದ ಕೇಂದ್ರ ಬಸ್‌ನಿಲ್ದಾಣದಲ್ಲಿ ಭಾನುವಾರ ಶಕ್ತಿ ಯೋಜನೆಗೆ ಚಾಲನೆ ನೀಡಲು ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಸಾರಿಗೆ ಬಸ್ ಮೇಲೆ ಕಮಲದ ಚಿಹ್ನೆ ಕಂಡು ಅಧಿಕಾರಿಗಳ ವಿರುದ್ಧ ಗರಂ ಆದರು. ಬಸ್‌ನ ನಾಮಫಲಕ ಜಾಗದಲ್ಲಿ ಬಿಜೆಪಿ ಚಿಹ್ನೆ ಅಂಟಿಸಿದ್ದನ್ನು ಕಂಡು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಂತರ ಕಮಲ ಚಿಹ್ನೆ ಚಿತ್ರದ ಕಾಗದವನ್ನು ಸಿಬ್ಬಂದಿ ಕಿತ್ತು ಹಾಕಿದರು.

ಕಂಡಕ್ಟರ್ ಆದ ಮಿನಿಸ್ಟರ್

ಸಚಿವ ಬಿ.ನಾಗೇಂದ್ರ ಅವರು ಕೆಲ ಕ್ಷಣಗಳ ಕಾಲ ಕಂಡಕ್ಟರ್ ಆದರು. ಶಕ್ತಿ ಯೋಜನೆಗೆ ಚಾಲನೆ ನೀಡಿದ ನಂತರ ಅವರು ಸಾರಿಗೆ ಬಸ್‌ಗೆ ತೆರಳಿ ಉಚಿತವಾಗಿ ಪ್ರಯಾಣಿಸುವ ಹೆಣ್ಣುಮಕ್ಕಳಿಗೆ ಸ್ವತಃ ಟಿಕೆಟ್ ನೀಡಿದರು. ಮೊದಲ ದಿನವೇ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net