

ಬೆಂಗಳೂರು: ಭೂಮಿ ಅಗೆಯುವಾಗ ಚಿನ್ನ ದೊರೆತಿದ್ದು, ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ವ್ಯಕ್ತಿಯೊಬ್ಬರನ್ನು ಕರೆಸಿ ಅವರಿಂದ 2.75 ಲಕ್ಷ ದೋಚಿದ್ದ ಪ್ರಕರಣದಲ್ಲಿ ಆರೋಪಿಯೊಬ್ಬನಿಗೆ ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
ಬಳ್ಳಾರಿಯ ಹರಪನಹಳ್ಳಿ ತಾಲೂಕಿನ ತಿಮ್ಮಪ್ಪ ಜಗಳೂರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ಪೀಠ, ಅರ್ಜಿದಾರರ ವಿರುದ್ಧ ದರೋಡೆ, ಕೊಲೆಯತ್ನದಂಥ ಗಂಭೀರ ಆರೋಪಗಳಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.
ಚಿನ್ನದ ಆಸೆ ತೋರಿಸಿ ಸುಲಿಗೆ: 2020ರ ಡಿ.4ರಂದು ಚಂದ್ರಪ್ಪ ಎಂಬುವರು ಹಲವಾಗಲು ಪೊಲೀಸ್ ಠಾಣೆಗೆ ದೂರು ನೀಡಿ, ಮಂಜಪ್ಪ ಎಂಬುವನು ತಮ್ಮನ್ನು ಸಂಪರ್ಕಿಸಿ ಭೂಮಿ ಅಗೆಯುವಾಗ ಬಂಗಾರ ಸಿಕ್ಕಿದೆ. ಮಗಳ ಮದುವೆಗೆ ಹಣ ಹೊಂದಿಸಲು ಅದನ್ನು ಮಾರಾಟ ಮಾಡುತ್ತಿದ್ದೇವೆ ಎಂದು ತಿಳಿಸಿ ಚಿನ್ನದ ತುಂಡೊಂದನ್ನು ನೀಡಿದ್ದ. ಪರಿಶೀಲಿಸಿದಾಗ ಅದು ಅಸಲಿ ಚಿನ್ನವಾಗಿತ್ತು. ಒಟ್ಟು 250 ಗ್ರಾಂ ಚಿನ್ನವಿದ್ದು, 12 ಲಕ್ಷ ಕೊಟ್ಟರೆ ಅದನ್ನು ಕೊಡುವುದಾಗಿ ಹೇಳಿದ್ದರು. ಅಂತಿಮವಾಗಿ 2.75 ಲಕ್ಷ ರೂ. ಗೆ ಚಿನ್ನ ಮಾರಾಟ ಮಾಡಲು ಒಪ್ಪಿದ್ದರು. ಡಿ.3ರಂದು ನಿರ್ಜನ ಪ್ರದೇಶಕ್ಕೆ ಹಣದೊಂದಿಗೆ ಬರುವಂತೆ ಸೂಚಿಸಿದ್ದರು. ಸ್ಥಳ ತಲುಪುತ್ತಿದ್ದಂತೆ ಐದಾರು ಜನ ಸೇರಿ ಚಾಕುವಿನಿಂದ ಹಲ್ಲೆ ನಡೆಸಿ, 2.75 ಲಕ್ಷ ರೂ. ಹಾಗೂ ಮೊಬೈಲ್ ಫೋನ್ ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಿದ್ದರು.
ಜಾಮೀನು ಕೋರಿದ್ದ ಐದನೇ ಆರೋಪಿ: ದೂರಿನ ಆಧಾರದ ಮೇಲೆ ಮಂಜಪ್ಪ ಮತ್ತಿತರರನ್ನು ಬಂಧಿಸಿದ್ದ ಪೊಲೀಸರು ಅವರಿಂದ 2 ಲಕ್ಷ ರೂ., ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಆಯುಧವನ್ನು ವಶಪಡಿಸಿಕೊಂಡಿದ್ದರು. ತನಿಖೆ ಮುಂದುವರಿಸಿ ಅರ್ಜಿದಾರನನ್ನು 5ನೇ ಆರೋಪಿಯನ್ನಾಗಿ ಸೇರಿಸಿದ್ದರು. ಬಂಧನದ ಭೀತಿ ಎದುರಿಸುತ್ತಿದ್ದ ತಿಮ್ಮಪ್ಪ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿ, ಪ್ರಕರಣಕ್ಕೂ ತನಗೂ ಸಂಬಂಧವಿಲ್ಲ. ಯಾವುದೇ ಸಾಕ್ಷಾೃಧಾರ ಇಲ್ಲದಿದ್ದರೂ, ಅನಗತ್ಯವಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಆದ್ದರಿಂದ, ಜಾಮೀನು ನೀಡಬೇಕೆಂದು ಕೋರಿದ್ದನು.
ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರದ ಪರ ವಕೀಲರು, ಅರ್ಜಿದಾರನ ವಿರುದ್ಧ ಗಂಭೀರ ಆರೋಪಗಳಿವೆ. ದೂರುದಾರನೇ ಹಲ್ಲೆಗೊಳಗಾಗಿದ್ದು, ಆತನೂ ಸೇರಿ ಪ್ರಕರಣದ ಎಲ್ಲ ಸಾಕ್ಷಿಗಳು ಆರೋಪಿಗಳನ್ನು ಗುರುತಿಸಬೇಕಿದೆ. ಅದಕ್ಕಾಗಿ ಆರೋಪಿಯನ್ನು ವಶಕ್ಕೆ ಪಡೆಯಬೇಕಿದೆ. ಆದ್ದರಿಂದ, ಜಾಮೀನು ಮಂಜೂರು ಮಾಡದಂತೆ ಮನವಿ ಮಾಡಿದ್ದರು. ಈ ಮನವಿಯನ್ನು ಪರಿಗಣಿಸಿ ಹೈಕೋರ್ಟ್ ಅರ್ಜಿ ವಜಾಗೊಳಿಸಿದೆ.