

ಬೆಂಗಳೂರು: ರಮೇಶ್ ಜಾರಕಿಹೊಳಿ ಅವರದು ಎನ್ನಲಾದ ಅಶ್ಲೀಲ ಸಿಡಿ ಪ್ರಕರಣದ ಕುರಿತಂತೆ 'ಸಂತ್ರಸ್ತ' ಯುವತಿ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಹೇಳಿಕೆ ನೀಡಿದ್ದು, ''ಪ್ರಕರಣದಲ್ಲಿ ನನ್ನ ಬಲಿಪಶು ಮಾಡಲಾಗಿದ್ದು, ಗೃಹ ಸಚಿವರು ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕು'' ಎಂದು ಮನವಿ ಮಾಡಿಕೊಂಡಿದ್ದಾಳೆ.
ಅಜ್ಞಾತ ಸ್ಥಳದಿಂದ 34 ಸೆಕೆಂಡ್ನ ವಿಡಿಯೋ ಮಾಡಿ ಹರಿ ಬಿಟ್ಟಿರುವ ಯುವತಿ, ''ರಮೇಶ್ ಜಾರಕಿಹೊಳಿ ಅವರು ನನಗೆ ಕೆಲಸ ಕೊಡಿಸುವುದಾಗಿ ನಂಬಿಸಿ, ನನ್ನನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಇದರಿಂದ ನನ್ನ ಮಾನ ಮರ್ಯಾದೆ ಊರು ತುಂಬಾ ಹರಾಜಾಗಿದೆ. ನನ್ನ ಮನೆ ಹತ್ತಿರ ಬಂದು ಯಾರೋರೊ ಏನೇನೋ ಹೇಳಿದ್ದಾರೆ. ನನ್ನ ತಂದೆ ತಾಯಿ ಹಾಗೂ ನಾನು ಮೂರ್ನಾಲ್ಕು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇವೆ. ಆ ಅಶ್ಲೀಲ ವಿಡಿಯೋ ಹೇಗೆ ಮಾಡಿದಾರೋ ನನಗೆ ಗೊತ್ತಿಲ್ಲ. ದಯವಿಟ್ಟು ನನಗೆ ರಕ್ಷಣೆ ನೀಡಬೇಕು'' ಎಂದು ಯುವತಿ ವಿಡಿಯೋದಲ್ಲಿ ಹೇಳಿದ್ದಾಳೆ.
ಇದೇ ಮೊದಲ ಬಾರಿಗೆ ಯುವತಿಯೇ ಮುಂದೆ ಬಂದು ಸಾರ್ವಜನಿಕವಾಗಿ ಹೇಳಿಕೆ ನೀಡಿರುವುದು ರಮೇಶ್ ಜಾರಕಿಹೊಳಿ ಸಿಡಿ ಕೇಸ್ಗೆ ಸ್ಪೋಟಕ ತಿರುವು ಸಿಕ್ಕಿದೆ. ಇನ್ನು ಇಂದಷ್ಟೇ ರಮೇಶ್ ಜಾರಕಿಹೊಳಿ ಅವರು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಸಿಡಿ ಕೇಸ್ ಕುರಿತಂತೆ ದೂರು ನೀಡಿದ್ದರು.