

ಬೆಟಗೇರಿ: ಪ್ರತಿಯೊಬ್ಬ ಮನುಷ್ಯನು ಸದ್ಗುಣ ಬೆಳೆಸಿಕೊಳ್ಳಬೇಕು. ತಮ್ಮ ಗಳಿಕೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ಸತ್ಕಾರ್ಯಗಳಿಗೆ ದಾನ ಮಾಡಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಇಂಚಲ ಸಾಧು&ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.
ಗ್ರಾಮದ ಗಜಾನನ ವೇದಿಕೆಯಲ್ಲಿ ಬುಧವಾರ ಸತ್ಸಂಗ ಸಮ್ಮೇಳನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸುಜ್ಞಾನದ ಬೆಳಕು ನೀಡುವ ಶಕ್ತಿ ಸದ್ಗುರುವಿಗೆ ಇದೆ. ಸದ್ಗುರುವಿನ ಕಪೆಗೆ ಪಾತ್ರರಾಗಬೇಕಾದರೆ ಒಳ್ಳೆಯ ಕಾರ್ಯಕ್ಕೆ ದಾನ, ಧರ್ಮ ಮಾಡಬೇಕು ಎಂದರು.
ಗದಗ ಮಹಿಳಾ ಅಧ್ಯಾತ್ಮ ವಿದ್ಯಾಶ್ರಮ ಡಾ.ನೀಲಮ್ಮಾತಾಯಿ, ಪೂರ್ಣಾನಂದ ಭಾರತಿ ಸ್ವಾಮೀಜಿ, ಮಲ್ಲಾಪುರ (ಕೆ.ಎನ್.) ಚಿದಾನಂದ ಸ್ವಾಮೀಜಿ, ಹುಣಶ್ಯಾಳ (ಪಿ.ಜಿ.)ಯ ನಿಜಗುಣ ದೇವರು, ತೊಂಡಿಕಟ್ಟಿ ಅಭಿನವ ವೆಂಕಟೇಶ್ವರ ಮಹಾರಾಜರು, ಕುಳ್ಳೂರ ಬಸವಾನಂದ ಭಾರತಿ ಸ್ವಾಮೀಜಿ, ಶೇಗುಣಶಿ ಡಾ.ಮಹಾಂತಪ್ರಭು ಸ್ವಾಮೀಜಿ, ಹಡಗಿನಾಳ ಮಲ್ಲೇಶ ಶರಣರು, ಗದಗ ಶರಣೆ ಮೆತ್ರಾ ತಾಯಿ ಪ್ರವಚನ ನೀಡಿದರು. ಕರಿಕಟ್ಟಿ ಗುರುನಾಥ ಶಾಸ್ತ್ರೀಗಳಿಂದ ಕೀರ್ತನೆ ಜರುಗಿತು. ಮಲ್ಲನಗೌಡ ಶಿವಲಿಂಗಪ್ಪಗೋಳ, ಸಿದ್ಧಾರೂಢ ಮಠಪತಿ ಅವರಿಂದ ಸಂಗೀತ ಸೇವೆ ಜರುಗಿತು.
ಗ್ರಾಪಂ ಮಾಜಿ ಅಧ್ಯ ಬಸವಂತ ಕೋಣಿ ಮತ್ತು ಸಹೋದರರಿಂದ ಮಹಾಪ್ರಸಾದ ಸೇವೆ ನಡೆಯಿತು. ಈಶ್ವರ ಭಜನಾ ಮಂಡಳಿ ವತಿಯಿಂದ ಸಕಲ ಶ್ರೀಗಳಿಗೆ ಸತ್ಕಾರ ಜರುಗಿತು. ಬಸವರಾಜ ಪಣದಿ ಕಾರ್ಯಕ್ರಮ ನಿರೂಪಿಸಿದರು.