

ಮಂಚೇನಹಳ್ಳಿ: ಪಟ್ಟಣ ಸಮೀಪದ ಸರ್ವೇ ನಂ.188ರ ಗೋಮಾಳ ಜಮೀನಿನಲ್ಲಿ ಗಣಿಗಾರಿಕೆಗೆ ಅಕ್ರಮವಾಗಿ ರಸ್ತೆ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿ ಸುತ್ತಲಿನ ಗ್ರಾಮಸ್ಥರು ಸೋಮವಾರ ಮಂಚೇನಹಳ್ಳಿಯಲ್ಲಿ ಪ್ರತಿಭಟಿಸಿದರು.
ಆರಂಭದಲ್ಲಿ ಮಂಚೇನಹಳ್ಳಿ ಮಹೇಶ್ವರಿ ಸರ್ಕಲ್ನಿಂದ ಗಣೇಶ ದೇವಸ್ಥಾನದವರೆಗೂ ಘೋಷಣೆ ಕೂಗುತ್ತ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಈ ವೇಳೆ ವಕೀಲ ಲಕ್ಷ್ಮಿ ನಾರಾಯಣ್ ಮಾತನಾಡಿ, ರಸ್ತೆ ಮಾಡುತ್ತಿರುವುದು ಸಾರ್ವಜನಿಕರಿಗಾಗಿ, ರೈತರಿಗಾಗಿ ಎಂದು ಹೇಳುತ್ತಾರೆ. ಆದರೆ, ಬಳಸುವುದು ಮಾತ್ರ ಗಣಿಗಾರಿಕೆಗಾಗಿ. ಇದು ರೈತರಿಗೆ, ಸಾರ್ವಜನಿಕರಿಗೆ ಉಪಯುಕ್ತವಾಗಲಿ ಎಂಬ ಉದ್ದೇಶದಿಂದ ನಿರ್ಮಿಸುತ್ತಿರುವ ರಸ್ತೆಯಲ್ಲ. ಗಣಿಗಾರಿಕೆ ಹಿತಾಸಕ್ತಿ ಈಡೇರಿಸಿಕೊಳ್ಳುವ ದಾರಿಯಾಗಿದೆ. ಇಲ್ಲಿನ ಎಷ್ಟೋ ಹೊಲಗಳಿಗೆ ಹೋಗಲು ಹಲವು ವರ್ಷಗಳಿಂದ ದಾರಿಯೇ ಇಲ್ಲ. ಆದರೆ, ರಾತ್ರೋರಾತ್ರಿ ಗಣಿಗಾರಿಕೆಗೆ ಮಾತ್ರ ರಸ್ತೆ ತಯಾರಾಗುತ್ತಿದೆ. ಮೇಲಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪರಿಶೀಲಿಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಜಿಪಂ ಪಿ.ಎನ್.ಪ್ರಕಾಶ್, ಬಿಜೆಪಿ ಮುಖಂಡರಾದ ನಾರಾಯಣಸ್ವಾಮಿ, ಜಿ.ವಿ.ರಾಜಶೇಖರ್, ಬಾಲಕೃಷ್ಣ, ಗ್ರಾಪಂ ಅಧ್ಯಕ್ಷ ನರಸಿಂಹ ರೆಡ್ಡಿ, ಕಾಂಗ್ರೆಸ್ ಮುಖಂಡರಾದ ಮಾರುತಿ, ಪ್ರಿಯಾಂಕಾ, ರವಿ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
"ಅಕ್ರಮವಾಗಿ ದಾರಿ ಮಾಡುತ್ತಿಲ್ಲ. ಮೂರ‌್ನಾಲ್ಕು ವರ್ಷದ ಹಿಂದೆಯೇ ಅನುಮತಿ ಪಡೆಯಲಾಗಿದೆ. ಜಿಲ್ಲಾಧಿಕಾರಿ, ತಹಸೀಲ್ದಾರ್ ಪರಿಶೀಲಿಸಿ, ಸರ್ವೇ ಆದ ನಂತರವೇ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಎಲ್ಲವೂ ಕಾನೂನು ಪ್ರಕಾರ ಸರಿಯಾಗಿಯೇ ಇದೆ. ಆದರೆ, ಕೆಲವರು ನಮ್ಮ ಬಳಿ ಸೈಟ್, ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಅದಕ್ಕೆ ಒಪ್ಪದಿದ್ದರಿಂದ ವಿನಾಕಾರಣ ಗಲಾಟೆ ಮಾಡುತ್ತಿದ್ದಾರೆ. ಒಂದು ವೇಳೆ ಅಕ್ರಮವಾಗಿ ರಸ್ತೆ ನಿರ್ಮಿಸುತ್ತಿದ್ದರೆ, ಅಧಿಕಾರಿಗಳೇ ಪರಿಶೀಲಿಸಿ, ಸ್ಪಷ್ಟೀಕರಿಸಲಿ." - ಸಕಲೇಶ, ಗಣಿ ಮಾಲೀಕ