

ಹನುಮಸಾಗರ: ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದ್ದು, ಪೌಷ್ಟಿಕಾಂಶಯುಕ್ತ ಸಿರಿಧಾನ್ಯ ಆಹಾರ ಸೇವಿಸಬೇಕು ಎಂದು ತಾಪಂ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ ಹೇಳಿದರು.
ಮುಗನೂರ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಾಲಾ ಹೂಳೆತ್ತುವ ಸ್ಥಳದಲ್ಲಿ ಮಂಗಳವಾರ ಆರೋಗ್ಯ ಅಮೃತ ಅಭಿಯಾನ ಯೋಜನೆಯಡಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ನರೇಗಾ ಯೋಜನೆಯಡಿ ಕೂಲಿಕಾರರಿಗೆ ಕೆಲಸ ನೀಡುವುದಲ್ಲದೇ, ಅವರ ಆರೋಗ್ಯ ಕಾಪಾಡುವುದು ನಮ್ಮ ಕರ್ತವ್ಯ. ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಕೂಲಿಕಾರರು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು. ಆರೋಗ್ಯ ಸಮಸ್ಯೆ ಬಗ್ಗೆ ನಿರ್ಲಕ್ಷೃವಹಿಸಬಾರದು ಎಂದು ಸಲಹೆ ನೀಡಿದರು.
ಗ್ರಾಮೀಣ ಭಾಗದಲ್ಲಿ ಗುಳೆ ಹೋಗುವುದನ್ನು ತಪ್ಪಿಸಲು ನರೇಗಾ ಯೋಜನೆ ಸಹಾಯಕವಾಗಿದೆ. ತಾಂತ್ರಿಕ ಸಹಾಯಕರು ನಿಮಗೆ ನೀಡಿದ ಅಳತೆಗನುಸಾರವಾಗಿ ಕೆಲಸ ಮಾಡಿದಾಗ ಪೂರ್ತಿ ಕೂಲಿ ಹಣ ದೊರೆಯಲಿದೆ. ಅರ್ಹರೆಲ್ಲರೂ ಯೋಜನೆಯ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಆರೋಗ್ಯ ಇಲಾಖೆ ಸಿಬ್ಬಂದಿ, ಕೂಲಿಕಾರರ ಬಿಪಿ, ಶುಗರ್, ಕೆಮ್ಮು, ನೆಗಡಿ, ಜ್ವರ ಸೇರಿ ವಿವಿಧ ಕಾಯಿಲೆಗಳ ತಪಾಸಣೆ ನಡೆಸಿ, ಮಾತ್ರೆಗಳನ್ನು ವಿತರಿಸಿದರು. ಪಿಡಿಒ ಬಸವರಾಜ, ತಾಪಂ ನರೇಗಾ ಸಿಬ್ಬಂದಿ ಚಂದ್ರಶೇಖರ ಹಿರೇಮರ, ಗ್ರಾಪಂ ಸಿಬ್ಬಂದಿಗಳಾದ ಸಂತೋಷ, ಹನಮಂತಪ್ಪ ಇತರರಿದ್ದರು.