ಕಂಪ್ಲಿಯಲ್ಲಿ ಅನಕೃ ವೃತ್ತ ನಿರ್ಮಾಣ ಯಾವಾಗ ?

8 KMP 01
ಕಂಪ್ಲಿ ಪ್ರಧಾನ ಅಂಚೆ ಕಚೇರಿ ಎದುರಿನಲ್ಲಿ ಕಾದಂಬರಿ ಸಾರ್ವಭೌಮ ಅನಕೃ ವೃತ್ತವಿದ್ದ ಸ್ಥಳ.
Published on

ಕಂಪ್ಲಿ: ಇತ್ತೀಚೆಗೆ ರಸ್ತೆ ವಿಸ್ತರಣೆ ನೆಪದಲ್ಲಿ ಕನ್ನಡದ ಕಾದಂಬರಿಕಾರ ಅನಕೃ (ಅರಕಲಗೂಡು ನರಸಿಂಗರಾಯ ಕೃಷ್ಣರಾಯ) ವೃತ್ತವನ್ನು ತೆರವುಗೊಳಿಸಲಾಗಿದ್ದು, ಪುನರ್ ರಚಿಸುವಂತೆ ಕನ್ನಡ ಪರ ಸಂಘಟನೆಗಳು ಒತ್ತಾಯಿಸಿದರೂ ಪುರಸಭೆ ಆಡಳಿತದ ಕಿವಿಗೆ ಬೀಳುತ್ತಿಲ್ಲ.
2010ರಲ್ಲಿ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ವಾಲ್ಮೀಕಿ ವೃತ್ತದವರೆಗೆ ರಸ್ತೆ ವಿಸ್ತರಣೆ ನೆಪದಲ್ಲಿ ವೃತ್ತವನ್ನು ತೆರವುಗೊಳಿಸಿದ್ದು, ಪುರಸಭೆ ಆಡಳಿತ ಇಂದಿಗೂ ವೃತ್ತವನ್ನು ನಿರ್ಮಿಸಿಲ್ಲ. ಕನ್ನಡ ಸಾರಸ್ವತ ಲೋಕದ ಕಾದಂಬರಿ ಸಾರ್ವಭೌಮ ಎಂದೆ ಖ್ಯಾತರಾದ ಅನಕೃ, ನಾಟಕಕಾರರು ಹಾಗೂ ವಿಮರ್ಶಕರಾಗಿದ್ದರು.

ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲು ಕನ್ನಡ ಹಿತರಕ್ಷಕ ಸಂಘ ಅನಕೃ ವೃತ್ತವನ್ನು ರಚಿಸುವಂತೆ ಒತ್ತಾಯಿಸಿತ್ತು. 1971ರಲ್ಲಿ ಪಟ್ಟಣ ಪಂಚಾಯಿತಿ ರಾಜ್ಯದಲ್ಲೇ ಅಪರೂಪವಾದ, ವಿಶಿಷ್ಟ ಶೈಲಿಯಲ್ಲಿ ಬೃಹತ್ ಅನಕೃ ವೃತ್ತವನ್ನು ನಿರ್ಮಿಸಿ ರಾಜ್ಯಮಟ್ಟದಲ್ಲಿ ಗಮನಸೆಳೆದಿತ್ತು.
ಕನ್ನಡ ಹಿತರಕ್ಷಕ ಸಂಘದ ಸಭೆ ಸಮಾರಂಭಗಳಿಗೆ ಆಗಮಿಸಿದ್ದ ಬೀಚಿ, ಕಯ್ಯರ ಕಿಞಣ್ಣರೈ, ಹಾ.ಮಾ.ನಾಯಕ, ಶಿವರಾಮ ಕಾರಂತ, ಡಾ.ಚಂದ್ರಶೇಖರ ಕಂಬಾರ, ಡಾ.ಎಂ.ಎಂ.ಕಲಬುರ್ಗಿ, ಶಂಭು ವಿ.ಬಳಿಗಾರ, ಮಲ್ಲೇಪುರಂ ಜಿ.ವೆಂಕಟೇಶ, ರಾಜಕಾರಣಿ ಎಂ.ಪಿ.ಪ್ರಕಾಶ, ಎಂ.ವೈ.ಘೋರ್ಪಡೆ ಸೇರಿ ಸಾರಸ್ವತ ಲೋಕದ ಗಣ್ಯರು, ರಾಜಕೀಯ ಧುರೀಣರು ಕಂಪ್ಲಿಯಲ್ಲಿನ ಅನಕೃ ವೃತ್ತವನ್ನು ಕಂಡು ಕಣ್ತುಂಬಿಕೊಂಡು ಸಾಹಿತಿಗೆ ನೀಡಿದ ಗೌರವವನ್ನು ಕೊಂಡಾಡಿದ್ದರು.

ರಾಜ್ಯದ ಗಮನ ಸೆಳೆದಿದ್ದ ಅನಕೃ ವೃತ್ತವನ್ನು ಪುನರ್ ನಿರ್ಮಿಸುವಂತೆ, ಕನ್ನಡ ಪ್ರಗತಿಪರ ಸಂಘಟನೆಗಳ ಅಳಲನ್ನು ಪುರಸಭೆ ಆಡಳಿತ ಇಂದಿಗೂ ತನ್ನ ಕಿವಿಗೆ ಹಾಕಿಕೊಳ್ಳದೆ ಜಾಣ ಮೌನವಹಿಸಿದೆ. ಕಡೇ ಪಕ್ಷ ಅಂಚೆ ಕಚೇರಿ ನಾಮಫಲಕದ ಬಳಿ ಅನಕೃ ವೃತ್ತದ ನಾಮಫಲಕವನ್ನಾದರೂ ಹಾಕುವ ಸೌಜನ್ಯ ಪುರಸಭೆ ತೋರುತ್ತಿಲ್ಲ ಎಂದು ಪಟ್ಟಣಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುರಸಭೆ ಆಡಳಿತ ಪ್ರತಿವರ್ಷ ಬಜೆಟ್ ಪೂರ್ವ ಸಭೆಯಲ್ಲಿ ಅನಕೃ ವೃತ್ತ ರಚಿಸುವಂತೆ ಒತ್ತಾಯಿಸಿದ್ದರೂ ಪ್ರಯೋಜನವಾಗಿಲ್ಲ. ಅನಕೃ ವೃತ್ತ ತೆರವುಗೊಳಿಸುವಾಗ ಪುನರ್ ರಚಿಸುವ ವಾಗ್ದಾನ ಮಾಡಿದ್ದ ಪುರಸಭೆ ಆಡಳಿತ ಮರೆತಿದೆ.ಬೂದಗುಂಪಿ ಅಂಬಣ್ಣಕನ್ನಡ ಹಿತರಕ್ಷಕ ಸಂಘ ಕಂಪ್ಲಿ.

ಅನಕೃ ವೃತ್ತ ಕಂಪ್ಲಿ ಪಟ್ಟಣದ ಕಳಸ ಪ್ರಾಯದಂತಿದ್ದು ಸಾಹಿತಿಗಳಿಗೆ ನೀಡಿದ ವಿಶೇಷ ಗೌರವದ ಪ್ರತೀಕವಾಗಿತ್ತು. ಅನಕೃ ವೃತ್ತ ಪುನರ್ ನಿರ್ಮಿಸಲು ಸಭೆಯಲ್ಲಿ ವಿಷಯ ಮಂಡಿಸಿ ತಕ್ಕ ಕ್ರಮ ಕೈಗೊಳ್ಳಲಾಗುವುದು.ಶಾಂತಲಾ ವಿ.ವಿದ್ಯಾಧರಪುರಸಭೆ ಹಾಲಿ ಸದಸ್ಯೆ ಕಂಪ್ಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net