

ಚಿಂತಾಮಣಿ: ನಗರದ ಕೆನರಾಬ್ಯಾಂಕ್ ರಸ್ತೆಗೆ ಹೊಂದಿಕೊಂಡಿರುವ ಹಳೇ ಕಟ್ಟಿಗೆ ಸಂತೆಯ ಬಳಿ ಇರುವ ಮೀನಿನ ಮಾರುಕಟ್ಟೆ ಬಳಿ ವ್ಯಕ್ತಿ ಅನುಮಾನಾಸ್ಪದವಾಗಿ ಗುರುವಾರ ರಾತ್ರಿ ಮೃತಪಟ್ಟಿದ್ದಾನೆ. ಶುಕ್ರವಾರ ಬೆಳಗ್ಗೆ ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತ ವ್ಯಕ್ತಿಯನ್ನು ತಿಪ್ಪಣ್ಣ (38) ಎಂದು ಗುರುತಿಸಲಾಗಿದೆ. ಈತ ವಿಧಾನಸೌಧ ಬಳಿ ಪೋಸ್ಟ್ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಮೂಲತಃ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ರಾಜಕುಂಟ್ಲಹಳ್ಳಿಯವನು. ಹಾಳಿ ಚಿಂತಾಮಣಿಯ ಗಾಂಧಿನಗರ ಬಡಾವಣೆಯಲ್ಲಿ ವಾಸಿಸುತ್ತಿದ್ದಾನೆ. ಗುರುವಾರ ರಾತ್ರಿ ಬೆಂಗಳೂರಿನಿಂದ ಬಂದಿದ್ದ ತಿಪ್ಪಣ್ಣ ಶವವಾಗಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಮೀಪದ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದ್ದು, ಮೃತ ಮೀನಿನ ಮಾರುಕಟ್ಟೆ ಬಳಿಗೆ ನಡೆದುಕೊಂಡು ಬಂದು ಬಿದ್ದಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್‌ಪಿ ಪಿ. ಮುರಳೀಧರ್, ಪಿಎಸ್‌ಐ ವಿಜಿಕುಮಾರ್ ಹಾಗೂ ಅಪರಾಧ ದಳ ಸಿಬ್ಬಂದಿ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲಿಸಿತು.