

ಚಿಕ್ಕಬಳ್ಳಾಪುರ: ವಿಶೇಷ ದಿನಗಳಲ್ಲಿ ಸಾರ್ವಜನಿಕರು ಸಸಿ ನೆಟ್ಟು ಪೋಷಣೆ ಮಾಡುವ ವಿನೂತನ ಕಾರ್ಯಕ್ಕೆ ಚಿಕ್ಕಬಳ್ಳಾಪುರ ನಗರಸಭೆ ಮುಂದಡಿ ಇಟ್ಟಿದ್ದು, ಇದಕ್ಕೆಂದೇ ‘ನೆನಪಿನ ವನ’ ನಿರ್ಮಾಣಕ್ಕೆ ಜಾಗವನ್ನೂ ಮೀಸಲಿರಿಸಿದೆ.
ಹೌದು! ಹುಟ್ಟುಹಬ್ಬ, ವಿವಾಹ ಸೇರಿ ಇತರ ವಿಶೇಷ ದಿನಗಳಂದು ಸಸಿ ನೆಡಬೇಕು. ಅದು ಚೆನ್ನಾಗಿ ಬೆಳೆದು ಸಂಭ್ರಮದ ಸಂಕೇತವಾಗಿ ಇರಬೇಕು. ಹೀಗೆ ನೆನಪಿನಲ್ಲಿ ಉಳಿಯುವಂತೆ ಜನರಿಂದಲೇ ವನ ನಿರ್ಮಾಣಕ್ಕೆ ನಗರಸಭೆ ಶ್ರೀಕಾರ ಬರೆದಿದೆ.
ಸರ್ಕಾರ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಯಿಂದ ಬಡಾವಣೆ ಅಭಿವೃದ್ಧಿಪಡಿಸಿ, ಜನರಿಗೆ ಹಂಚಿಕೆಯಾಗಿರುವ ಐಡಿಎಸ್‌ಎಂಟಿ ಲೇಔಟ್‌ನಲ್ಲಿ ಒಂದು ಎಕರೆ ಜಾಗ ಗುರುತಿಸಲಾಗಿದೆ. ಇಲ್ಲಿ ಗಿಡ ನೆಡಲು ಅಗತ್ಯ ಸಿದ್ಧತೆ ಮಾಡುತ್ತಿದ್ದು, ಸದ್ಯ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಆದಷ್ಟು ಬೇಗ ಈ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ.
ನೆನಪಿನ ವನ ಅಭಿವೃದ್ಧಿ: ಈಗಾಗಲೇ ಮೈಸೂರು, ಮಂಡ್ಯ, ಬೆಂಗಳೂರಿನ ವಿವಿಧೆಡೆ ನೆನಪಿನ ವನಗಳಿವೆ. ಹುಟ್ಟುಹಬ್ಬ, ಮದುವೆ ದಿನ ಸೇರಿ ಇತರ ವಿಶೇಷ ದಿನದ ನೆನಪಿನಲ್ಲಿ ವನದಲ್ಲಿ ಸಸಿಗಳನ್ನು ನೆಡಲು ಅವಕಾಶ ನೀಡಲಾಗುತ್ತದೆ. ಹಾಗೆಯೇ ಸ್ಥಳೀಯ ಆಡಳಿತ ಸಂಸ್ಥೆಗಳಿಂದ ಕಾಲಕಾಲಕ್ಕೆ ನೀರು, ಗೊಬ್ಬರ ಹಾಕಿ, ಗಿಡಗಳನ್ನು ಪೋಷಿಸಲಾಗುತ್ತದೆ. ಈ ರೀತಿಯ ಸಾಮೂಹಿಕ ಕೆಲಸದಿಂದ ಆಕರ್ಷಕ ಉದ್ಯಾನ ನಿರ್ಮಾಣವಾಗಿ ಜನರಿಗೂ ಅನುಕೂಲವಾಗುತ್ತಿದೆ. ಇದೇ ರೀತಿಯಲ್ಲಿ ಚಿಕ್ಕಬಳ್ಳಾಪುರದಲ್ಲೂ ವಿಶೇಷ ವನ ನಿರ್ಮಾಣವಾಗಲಿದೆ.
ವಿವಿಧೆಡೆ ಜಾಗ ಗುರುತು
ಮೊದಲ ಹಂತವಾಗಿ ಐಡಿಎಸ್‌ಎಂಟಿ ಬಡಾವಣೆಯಲ್ಲಿ ನೆನಪಿನ ವನ ತಲೆ ಎತ್ತುತ್ತಿದ್ದು, ನಗರದ ವಿವಿಧೆಡೆ ಇಂತಹ ವನಗಳನ್ನು ನಿರ್ಮಿಸಲು ಜಾಗ ಗುರುತಿಸಲಾಗುತ್ತಿದೆ.
ಹಸಿರೀಕರಣ ಜಾಗೃತಿಗೆ ಸಹಕಾರಿ
ಒಂದೆಡೆ ಅಭಿವೃದ್ಧಿ ಹೆಸರಿನಲ್ಲಿ ವೃಕ್ಷ ಸಂಪತ್ತನ್ನು ನಾಶಪಡಿಸಲಾಗುತ್ತಿದೆ. ವಸತಿ ಪ್ರದೇಶಗಳ ಹೆಚ್ಚಳದಿಂದ ಕ್ರಾಂಕೀಟ್ ನಾಡು ವಿಸ್ತಾರಗೊಳ್ಳುತ್ತಿದೆ. ಮತ್ತೊಂದೆಡೆ ರಸ್ತೆಬದಿ, ಪ್ರಮುಖ ವೃತ್ತ, ಕಚೇರಿ ಮುಂಭಾಗ ಸೇರಿ ಎಲ್ಲೆಂದರಲ್ಲಿ ಅವೈಜ್ಞಾನಿಕವಾಗಿ ಗಿಡ ನೆಡುತ್ತಿದ್ದು, ಇವು ಬೆಳೆಯುವ ಹಂತದಲ್ಲಿಯೇ ರಸ್ತೆ ವಿಸ್ತರಣೆ ಮತ್ತು ಕಟ್ಟಡ ನಿರ್ಮಾಣದ ಮತ್ತಿತರ ಕಾರಣಗಳಿಂದಾಗಿ ಜೀವ ಕಳೆದುಕೊಳ್ಳುತ್ತಿವೆ. ಇದರಿಂದ ಗಿಡಮರ ರಕ್ಷಿಸುವ ಕಾರ್ಯದಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ. ಆದರೆ, ಒಂದೆಡೆ ದೊಡ್ಡ ಪ್ರಮಾಣದಲ್ಲಿ ನಿರ್ದಿಷ್ಟ ಜಾಗ ಗುರುತಿಸಿ, ಸಸಿ ನೆಡುವ ಹಾಗೂ ಬೆಳೆಸುವ ಕೆಲಸದಿಂದ ಆಕರ್ಷಕ ಉದ್ಯಾನಗಳು, ಇವುಗಳಿಂದ ಒಳ್ಳೆಯ ವಾತಾವರಣ ನಿರ್ಮಾಣವಾಗುತ್ತದೆ. ಅದರಲ್ಲೂ ವಿಶೇಷ ದಿನದ ನೆನಪಿನಲ್ಲಿ ಜನರು ಸಹ ಗಿಡ ನೆಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರಿಂದ, ಉದ್ಯಾನದಲ್ಲಿ ಸಮಯವನ್ನು ಕಳೆಯುವುದರಿಂದ ಖುಷಿಯಾಗುತ್ತದೆ. ಒಳ್ಳೆಯ ಗಾಳಿಯಲ್ಲಿ ಮಾಡುವ ವಿಶ್ರಾಂತಿ ಇಲ್ಲವೇ ವಾಕಿಂಗ್‌ನಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ. ವ್ಯಾಪಕ ಹಸಿರೀಕರಣಕ್ಕೂ ಇದು ಸಹಕಾರಿಯಾಗುತ್ತದೆ.
ನಗರಸಭೆ ಸರ್ವಾನುಮತದ ತೀರ್ಮಾನ
ಇತ್ತೀಚೆಗೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷ ಜೆ.ನಾಗರಾಜ್ ನೆನಪಿನ ವನ ನಿರ್ಮಾಣದ ಯೋಜನೆಯ ಬಗ್ಗೆ ಪ್ರಸ್ತಾಪಿಸಿದ್ದರು. ಇದಕ್ಕೆ ಸರ್ವಾನುಮತದ ಸಮ್ಮತಿ ವ್ಯಕ್ತವಾಗಿದ್ದು ಈಗ ಅನುಷ್ಠಾನಕ್ಕೆ ಚಾಲನೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ನಗರಸಭೆ ಅಧ್ಯಕ್ಷ ಎ.ಗಜೇಂದ್ರ, ಉಪಾಧ್ಯಕ್ಷ ಜೆ.ನಾಗರಾಜ್ ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದಾರೆ.
"ವಿಶೇಷ ದಿನದ ನೆನಪಿನಲ್ಲಿ ಸಾರ್ವಜನಿಕರು ಒಂದು ಕಡೆ ಗಿಡಗಳನ್ನು ನೆಡುವಂತಹುದೇ ನೆನಪಿನ ವನ. ಇದಕ್ಕೆ ಸರ್ವಾನುಮತ ತೀರ್ಮಾನ ಕೈಗೊಂಡು ನಗರದ ಐಡಿಎಸ್‌ಎಂಟಿ ಬಡಾವಣೆಯಲ್ಲಿ ಜಾಗ ಗುರುತಿಸಲಾಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಕಡೆ ನೆನಪಿನ ವನಗಳನ್ನು ನಿರ್ಮಿಸುವ ಯೋಜನೆ ಹೊಂದಲಾಗಿದೆ." - ಜೆ.ನಾಗರಾಜ್, ನಗರಸಭೆ ಉಪಾಧ್ಯಕ್ಷ, ಚಿಕ್ಕಬಳ್ಳಾಪುರ