

ಬಾಗೇಪಲ್ಲಿ: ಅಪಘಾತಗಳಲ್ಲಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಗಾಯಾಳುಗಳನ್ನು ಹೊತ್ತುತರುವ ತುರ್ತುಸೇವೆಯ ಆಂಬುಲೆನ್ಸ್‌ಗಳಿಗೂ, ಪಾದಚಾರಿಗಳಿಗೂ ದಾರಿ ಬಿಡದೆ ಮುಖ್ಯರಸ್ತೆಯುದ್ದಕ್ಕೂ ಇಷ್ಟಬಂದಂತೆ ತಳ್ಳುಗಾಡಿ, ವಾಹನಗಳನ್ನು ನಿಲುಗಡೆ ಮಾಡುತ್ತಿರುವ ಆಟೋಚಾಲಕರು ಹಾಗೂ ಬೀದಿಬದಿ ವ್ಯಾಪಾರಸ್ಥರ ದುರ್ನಡತೆಗೆ ಪೊಲೀಸ್ ಮತ್ತು ಪುರಸಭೆ ಅಧಿಕಾರಿಗಳು ಬ್ರೇಕ್ ಹಾಕಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಡಿವಿಜಿ ಮುಖ್ಯರಸ್ತೆ 100 ಅಡಿ ವಿಸ್ತೀರ್ಣ ಹೊಂದಿದ್ದರೂ ವಾಹನ ಸವಾರರಿಗೆ ನಿತ್ಯ ಟ್ರಾಫಿಕ್ ಕಿರಿಕಿರಿ ತಪ್ಪಿದ್ದಲ್ಲ. ಪಾದಚಾರಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವ ಬೀದಿಬದಿ ವ್ಯಾಪಾರಿಗಳು ಶಾಶ್ವತವಾಗಿ ಪೆಟ್ಟಿಗೆ ನಿರ್ಮಿಸಿಕೊಂಡು ಸಾರ್ವಜನಿಕ ರಸ್ತೆ ಸ್ವಂತ ಎನ್ನುವಂತೆ ನಡುರಸ್ತೆಗೆ ಬಂದು ವ್ಯಾಪಾರ ನಡೆಸುತ್ತಿದ್ದರೂ ುಟ್‌ಪಾತ್ ತೆರವು ಕಾರ್ಯಾಚರಣೆ ನಡೆಸಬೇಕಾಗಿರುವ ಪುರಸಭೆ ಮತ್ತು ಪೊಲೀಸ್ ಅಧಿಕಾರಿಗಳು ಮೌನಕ್ಕೆ ಜಾರಿದ್ದಾರೆ.
ಪಟ್ಟಣದ ಮುಖ್ಯರಸ್ತೆಯ ಅರ್ಧಭಾಗವನ್ನು ಬೀದಿ ವ್ಯಾಪಾರಿಗಳು ಅತಿಕ್ರಮಿಸಿ ವ್ಯಾಪಾರ ನಡೆಸುತ್ತಿದ್ದರೆ, ಉಳಿದ ಜಾಗ ಆಟೋಚಾಲಕರು, ಕಾರು ಮತ್ತು ದ್ವಿಚಕ್ರ ಸವಾರರು ಆಕ್ರಮಿಸಿಕೊಂಡು ಇಷ್ಟಬಂದಂತೆ ವಾಹನ ನಿಲ್ಲಿಸಿ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದರೂ ಕೇಳುವವರೇ ಇಲ್ಲದಂತಾಗಿದೆ.
ನೋ ಪಾರ್ಕಿಂಗ್ ಬೋರ್ಡ್‌ಗೆ ಡೋಂಟ್‌ಕೇರ್
ಬಾಗೇಪಲ್ಲಿಯ ಸಾರ್ವಜನಿಕ ಆಸ್ಪತ್ರೆಯ ತುರ್ತುಚಿಕಿತ್ಸೆ ಘಟಕ ಪ್ರವೇಶ ದ್ವಾರದ ಮುಂಭಾಗದಲ್ಲಿ ನೋ ಪಾರ್ಕಿಂಗ್ ಬೋರ್ಡ್ ಅಳವಡಿಸಿದ್ದರೂ ಯಾರೋಬ್ಬರೂ ಸಂಚಾರ ನಿಯಮ ಪಾಲಿಸದೆ ಆಸ್ಪತ್ರೆ ಪ್ರವೇಶ ದ್ವಾರದಲ್ಲಿ ರೋಗಿಗಳನ್ನು ಹೊತ್ತೊಯ್ಯುವ
ಆಂಬುಲೆನ್ಸ್‌ಗೂ ದಾರಿ ಇಲ್ಲದಂತೆ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸಿರುತ್ತಾರೆ, ಇದರಿಂದ ಆಂಬುಲೆನ್ಸ್ ಚಾಲಕರ ಕಷ್ಟ ಹೇಳತೀರದಾಗಿದೆ.
ಆಟೋನಿಲ್ದಾಣ ಸ್ಥಳಾಂತರ ಸೂಕ್ತ
ಪೊಲೀಸ್ ಮತ್ತು ಪುರಸಭೆ ಅಧಿಕಾರಗಳ ಮೌಖಿಕ ಆದೇಶದಂತೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಬಳಿಯೇ ಆಟೋ ನಿಲ್ದಾಣಕ್ಕೆ ಸ್ಥಳ ಮೀಸಲಿಟ್ಟಿರುವುದರಿಂದ ರಸ್ತೆಬದಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿರುವ ಆಟೋಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿ ಬಹುತೇಕ ಚಾಲಕರು ಮೊಬೈಲ್ ರೀಲ್ಸ್ ಹಾಗೂ ಗೇಮ್‌ಗಳಲ್ಲಿ ನಿರತರಾಗಿರುತ್ತಾರೆ. ಮೊಬೈಲ್ ರೀಲ್ಸ್ ವೀಕ್ಷಣೆಯಲ್ಲಿ ಮಗ್ನರಾಗಿರುವ ಆಟೋಚಾಲಕರನ್ನು ಯಾರೊಬ್ಬರೂ ಪ್ರಶ್ನಿಸುವಂತಿಲ್ಲ. ಹಳೇ ಎಸ್‌ಬಿಎಂ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಜತೆಗೆ ಸಾರ್ವಜನಿಕ ಆಸ್ಪತ್ರೆ ತುರ್ತು ವಿಭಾಗ ಪ್ರವೇಶ ದ್ವಾರದ ಎದುರು ಮುಖ್ಯರಸ್ತೆ ತಿರುವಿನಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಆಸ್ಪತ್ರೆ ಎದುರು ಸಂಪೂರ್ಣ ಟ್ರಾಫಿಕ್ ಜಾಮ್ ಆಗುವುದರ ಜತೆಗೆ ಅಪಘಾತಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ ಆಟೋ ನಿಲ್ದಾಣವನ್ನು ಮತ್ತೊಂದು ಕಡೆಗೆ ಸ್ಥಳಾಂತರಿಸುವುದು ಸೂಕ್ತ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಪಟ್ಟಣದ ಮುಖ್ಯರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ ಬಗ್ಗೆ ಪೊಲೀಸರೊಂದಿಗೆ ಚರ್ಚಿಸಲಾಗಿದೆ, ಸ್ವಯಂಪ್ರೇರಿತರಾಗಿ ಒತ್ತುವರಿ ತೆರವುಗೊಳಿಸುವಂತೆ ಬೀದಿಬದಿ ವ್ಯಾಪಾರಿಗಳಿಗೆ ಕರಪತ್ರ ಹಂಚಿ ಅರಿವು, ಎಚ್ಚರಿಕೆ ನೀಡಲಾಗಿದೆ. ಎಚ್ಚೆತ್ತುಕೊಳ್ಳದಿದ್ದರೆ ಕಾರ್ಯಾಚರಣೆ ನಡೆಸಿ ಒತ್ತುವರಿ ತೆರವುಗೊಳಿಸಲಾಗುವುದು." - ಎಂ.ಶ್ರೀನಿವಾಸ್ ಪುರಸಭೆ ಮುಖ್ಯಾಧಿಕಾರಿ ಬಾಗೇಪಲ್ಲಿ "ಬಾಗೇಪಲ್ಲಿಯ ಮುಖ್ಯರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವ ಅಂಗಡಿಗಳ ತೆರವು ಕಾರ್ಯಾಚರಣೆ ಸಮಯ ನಿಗದಿಪಡಿಸುವಂತೆ ಪತ್ರ ಬಂದಿದೆ. ಪುರಸಭೆ ಅಧಿಕಾರಿಗಳು ದಿನಾಂಕ ನಿಗದಿಪಡಿಸಿದರೆ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆಗೆ ಬಂದೋಬಸ್ತ್ ಕಲ್ಪಿಸಲಾಗುವುದು. ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರ ವಿರುದ್ಧವೂ ಕಾನೂನು ಕ್ರಮ ಜರುಗಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು." - ಪ್ರಶಾಂತ್ ಆರ್.ವರ್ಣಿ ಪೊಲೀಸ್ ವೃತ್ತ ನಿರೀಕ್ಷಕ ಬಾಗೇಪಲ್ಲಿ "ಒಂದೊಂದು ಅಂಗಡಿಗೆ 40ರಿಂದ 50 ಸಾವಿರದವರೆಗೆ ಬಾಡಿಗೆ ಕಟ್ಟುತ್ತಿದ್ದೇವೆ. ಅಂಗಡಿ ಮುಂಭಾಗದ ನಡುರಸ್ತೆಯಲ್ಲಿ ತಳ್ಳುವ ಗಾಡಿ, ಸರಕು ಸಾಗಣೆ ಆಟೋಗಳನ್ನು ನಿಲ್ಲಿಸಿ ವ್ಯಾಪಾರ ಮಾಡುತ್ತಾರೆ. ಓಡಾಡಲು ಸ್ವಲ್ಪ ದಾರಿ ಬಿಟ್ಟು ಪಕ್ಕಕ್ಕೆ ನಿಲ್ಲಿಸಿಕೊಳ್ಳಿ ಎಂದರೆ ಕೆಲವು ಸಂಘಟನೆಗಳ ಮುಖಂಡರು ಬಂದು ಅಂಗಡಿ ಮಾಲೀಕರ ಮೇಲೆ ದರ್ಪ ತೋರುತ್ತಾರೆ. ಬಹುತೇಕ ಬೀದಿಬದಿ ವ್ಯಾಪಾರಿಗಳು ಸಂಘಟನೆಗಳ ಮುಖಂಡರಿಗೆ ತಿಂಗಳ ಮಾಮೂಲಿಯಾಗಿ ಹಣ ಕೊಟ್ಟು ಪೋಷಿಸಿ ನಮ್ಮ ಮೇಲೆ ಗೂಂಡಾಗಿರಿ ಮಾಡಿಸುತ್ತಿರುವುದು ನೋವಿನ ತಂದಿದೆ." - ಹೆಸರು ಹೇಳಲು ಇಚ್ಛಿಸದ ಅಂಗಡಿ ಮಾಲೀಕ, ಬಾಗೇಪಲ್ಲಿ