ಆಟೋನಗರದಲ್ಲಿ ಅಸಲಿಯತ್ತು ಪರೀಕ್ಷೆ: ಫಲಾನುಭವಿಗಳ ಪಟ್ಟಿ ಪರಿಷ್ಕರಣೆ ಅಧಿಕಾರಿಗಳ ನಡೆಗೆ ಗರಂ

auto
ವಿವಾದಕ್ಕೆ ಕಾರಣವಾಗುತ್ತಿರುವ ಗಂಗಾವತಿ ಕೊಪ್ಪಳ ರಸ್ತೆಯ ಸನಂ.139ರಲ್ಲಿ ಆಟೋನಗರದ ನೋಟ.
Published on

ಗಂಗಾವತಿ: ಕುಶಲಕರ್ಮಿಗಳಿಗಾಗಿ 40 ವರ್ಷದ ಹಿಂದೆ ರೂಪಿಸಿದ ಆಟೋನಗರ ನಿವೇಶನ ಹಂಚಿಕೆ ಗೊಂದಲ ಶುರುವಾಗಿದ್ದು, ಮೂಲ ಸದಸ್ಯರನ್ನು ಒಕ್ಕಲೆಬ್ಬಿಸುವ ನಿರ್ಧಾರ ಕಾರ್ಮಿಕರನ್ನು ಚಿಂತೆಗೀಡು ಮಾಡಿದೆ. ಲಾನುಭವಿಗಳ ವೃತ್ತಿ ಅಸಲಿಯತ್ತು ಪರೀಕ್ಷೆಗೆ ನಗರಾಡಳಿತ ನಿರ್ಧರಿಸಿದೆ.


1984ರಲ್ಲಿ ಕೊಪ್ಪಳ ರಸ್ತೆ ಸ.ನಂ.139ರಲ್ಲಿ 5 ಎಕರೆ ಕೃಷಿ ಭೂಮಿ ಆಟೋನಗರಕ್ಕೆ ಮೀಸಲಿದ್ದು, ಕುಶಲಕರ್ಮಿಗಳ ಹಿತರಕ್ಷಣೆಗೆ ಎಕರೆಗೆ 80 ಸಾವಿರ ರೂ.ಗಳಂತೆ ಖರೀದಿಸಿತ್ತು. 124 ನಿವೇಶನ ರೂಪಿಸಿದ್ದರೂ, ಲೇಔಟ್ ಕಾಯ್ದೆ ಹಿನ್ನೆಲೆ 90 ನಿವೇಶನಕ್ಕೆ ಕಡಿತಗೊಂಡಿತ್ತು. ನಿವೇಶನಕ್ಕೆ 18 ಸಾವಿರ ರೂ.ಶುಲ್ಕ ಪಡೆದು ಪಟ್ಟಿ ತಯಾರಿಸಲಾಗಿತ್ತು.


ಫಲಾನುಭವಿಗಳಲ್ಲಿ ಹಣ ಭರಿಸಿದ ದಾಖಲೆಯಿದ್ದರೂ ಹಕ್ಕುಪತ್ರ ದೊರೆಯುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷೃ ಮತ್ತು ಜನಪ್ರತಿನಿಧಿಗಳ ಪ್ರತಿಷ್ಠೆಗೆ ಅಟೋನಗರ ಯೋಜನೆ ಮೂಲೆಗುಂಪಾಗಿದ್ದು, ಕೋರ್ಟ್ ಮೆಟ್ಟೆಲೇರಿದ್ದರೂ ಅಂತಿಮಗೊಳ್ಳುತ್ತಿಲ್ಲ. ಅಸಲಿಯತ್ತು ಪರೀಕ್ಷೆಯಾದರೆ ಬರೋಬ್ಬರಿ 30 ಲಾನುಭವಿಗಳಿಗೆ ನಿವೇಶನ ಕೈ ತಪ್ಪಲಿದೆ.


ಆಂಧ್ರದ ವಿಜಯವಾಡ ಹೊರತುಪಡಿಸಿದರೆ ಆಟೋನಗರ ಪರಿಕಲ್ಪನೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ರೂಪುಗೊಂಡಿತ್ತು. ಸಣ್ಣ ಮತ್ತು ಭಾರಿ ವಾಹನಗಳ ಮೆಕ್ಯಾನಿಕ್, ಟಿಂಕರಿಂಗ್, ಎಲೆಕ್ಟ್ರಿಷಿಯನ್, ಗ್ಯಾಸ್ ವೆಲ್ಡಿಂಗ್, ಪಂಕ್ಚರ್ (ವಾಲ್ಕನೈಜಿಂಗ್)ಕುಶಲಕರ್ಮಿಗಳಿಗಾಗಿ ಯೋಜನೆ ರೂಪಿಸಿತ್ತು. 600 ಚ.ಅಡಿಯಿಂದ 2400 ಚ.ಅಡಿವರೆಗೂ ನಿವೇಶನಗಳಿವೆ.


ಬೇರೆ ರಾಜ್ಯಗಳಿಗೆ ಸ್ಥಳೀಯ ಕುಶಲಕರ್ಮಿಗಳ ತಂಡ ತೆರಳಿ ಅಲ್ಲಿನ ಆಟೋನಗರ ವೀಕ್ಷಿಸಿ, ಸ್ಥಳೀಯ ಯೋಜನೆ ರೂಪಿಸಿತ್ತು. 4 ದಶಕ ಕಳೆದರೂ ಕಾರ್ಮಿಕರಿಗೆ ನಿವೇಶನ ದಕ್ಕುತ್ತಿಲ್ಲ. ಅದರಲ್ಲಿ ಈಗಾಗಲೇ 10 ಲಾನುಭವಿಗಳು ಮೃತಪಟ್ಟಿದ್ದಾರೆ. ಹಕ್ಕುಪತ್ರಕ್ಕಾಗಿ ಲಾನುಭವಿಗಳು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಒಂದೇ ಕುಟುಂಬಕ್ಕೆ ಹಲವು ನಿವೇಶನ ವಿತರಿಸಿದ ಆರೋಪಗಳಿವೆ.

ವಿವಾದ ನಡುವೆಯೂ ಅನುದಾನ ಬಳಕೆ

ಹಕ್ಕುಪತ್ರದ ವಿವಾದವಿದ್ದರೂ ಆಟೋನಗರದಲ್ಲಿ ಸರ್ಕಾರದ ಅನುದಾನ ಬಳಕೆಯಾಗಿದೆ. ಚರಂಡಿ, ವಿದ್ಯುತ್ ಪರಿವರ್ತಕ ಮತ್ತು ವಿದ್ಯುತ್ ಕಂಬಗಳ ವ್ಯವಸ್ಥೆಯಿದೆ. ತಾತ್ಕಾಲಿಕ ವಿದ್ಯುತ್ ಸಂಪರ್ಕದೊಂದಿಗೆ ಗ್ಯಾರೇಜ್ ನಡೆಯುತ್ತಿವೆ. ಜನಪ್ರತಿನಿಧಿಗಳ ಪ್ರತಿಷ್ಠೆಗೆ ಹೊಸ 10 ಲಾನುಭವಿ ಸೃಷ್ಟಿಸಿದ್ದರೂ, ಕೋರ್ಟ್‌ನಿಂದ ರದ್ದಾಗಿವೆ.

ಕೆಲ ನಿವೇಶನಗಳ ಮೇಲೆ ಶಾಶ್ವತ ಇಂಜೆಕ್ಷನ್ ಆರ್ಡರ್ ಇದ್ದು, ಇತ್ಯರ್ಥವಾಗಿಲ್ಲ. ನಿರ್ವಹಣೆ ಕೊರತೆಯಿಂದ ಚರಂಡಿ ಮುಚ್ಚಿಹೋಗಿದ್ದು, ವಿದ್ಯುತ್ ಪರಿವರ್ತಕ ಕಳುವಾಗಿವೆ. ನಗರಸಭೆಯಿಂದಲೇ ಜಾಗ ಒತ್ತುವರಿಯಾಗಿದ್ದು, ಕುಡಿವ ನೀರಿನ ಮೇಲೆತ್ತರದ ಸಂಗ್ರಹ ತೊಟ್ಟಿ ನಿರ್ಮಿಸಲಾಗಿದೆ. 40 ವರ್ಷಗಳಲ್ಲಿ ನಗರಸಭೆಯ 17ಕ್ಕೂ ಹೆಚ್ಚು ಸಾಮಾನ್ಯಸಭೆಯಲ್ಲಿ ಚರ್ಚೆಯಾಗಿದ್ದು ವಿಶೇಷ.


ಅಸಲಿ ಮತ್ತು ನಕಲಿ ಕಾರ್ಮಿಕರ ಪತ್ತೆ!

ಆಟೋನಗರದ ಹದ್ದುಬಸ್ತ್ ಮತ್ತು ನಿವೇಶನ ಸರ್ವೇ ಕಾರ್ಯ ನಗರಸಭೆ ಕೈಗೆತ್ತಿಕೊಂಡಿದ್ದು, ಅಸಲಿ ಮತ್ತು ನಕಲಿ ಕಾರ್ಮಿಕರನ್ನು ಪತ್ತೆ ಹಚ್ಚಲು ಯೋಜನೆ ರೂಪಿಸಿದೆ. ನಿವೇಶನ ಪಡೆದುಕೊಂಡವರನ್ನೂ ಫಿಲ್ಟರ್ ಮಾಡಲಾಗುತ್ತಿದ್ದು, ವೃತ್ತಿ ಬಗ್ಗೆ ಗೊಂದಲವಿದ್ದರೆ ರದ್ದಪಡಿಸಲು ನಿರ್ಧರಿಸಿದೆ. ಕೆಲವರು ತಮಗೆ ಅನುಕೂಲಕ್ಕೆ ತಕ್ಕಂತೆ ನಿವೇಶನ ಪಡೆದುಕೊಂಡಿದ್ದು, ಅದನ್ನು ಪರಿಶೀಲಿಸಲು ನಿರ್ಧರಿಸಲಾಗಿದೆ. ಈ ಹಿಂದೆ ನಿವೇಶನ ಪಡೆದವರೂ, ಇಂದು ವೃತ್ತಿಯಲ್ಲಿಲ್ಲ. ಅಂತಹವರನ್ನು ಕೈಬಿಟ್ಟು, ಹೊಸ ಕಾರ್ಮಿಕರಿಗೆ ವಿತರಿಸುವ ಬಗ್ಗೆ ಚಿಂತನೆ ನಡೆದಿದೆ. ಅಧಿಕಾರಿಗಳ ನಿರ್ಧಾರ, ಹಳೇ ಲಾನುಭವಿಗಳನ್ನು ಗೊಂದಲಕ್ಕೀಡು ಮಾಡಿದೆ. ಪರ ಮತ್ತು ವಿರೋಧದ ಮಾತುಗಳು ಶುರುವಾಗಿವೆ.

ಆಟೋನಗರ ಯೋಜನೆ ಮೂಲ ಲಾನುಭವಿಗಳನ್ನು ಒಕ್ಕಲೆಬ್ಬಿಸಲು ನಗರಸಭೆ ಅಧಿಕಾರಿಗಳು ಯೋಚಿಸಿದ್ದು, ಯಾವುದೇ ಕಾರಣಕ್ಕೂ ಅವಕಾಶ ನೀಡಲ್ಲ. ಕಾರ್ಮಿಕರನ್ನು ಹೀನಾಯ ರೀತಿಯಲ್ಲಿ ನೋಡುವ ಪೌರಾಯುಕ್ತ ವಿರುದ್ಧ ಪ್ರತಿಭಟನೆಗಿಳಿಯಲಾಗುವುದು.ಜೆ.ಭಾರದ್ವಾಜ್,ಫಲಾನುಭವಿ ಹಾಗೂ ಕಾರ್ಮಿಕ ಮುಖಂಡ ತಂದೆಯವರ ಕಾಲದಿಂದಲೂ ಮೆಕ್ಯಾನಿಕ್ ವೃತ್ತಿಯಲ್ಲಿದ್ದು, ನಗರ ಪ್ರದೇಶದಲ್ಲಿ ವಿಶಾಲ ಜಾಗ ಸಿಗಲ್ಲ. ದುಡ್ಡು ಕೊಟ್ಟು ಪಡೆದ ನಿವೇಶನಕ್ಕೆ ಹಕ್ಕುಪತ್ರ ದೊರೆಯುತ್ತಿಲ್ಲ. ಮತ್ತೊಮ್ಮೆ ಅಧಿಕಾರಿಗಳು ಗೊಂದಲ ಸೃಷ್ಟಿಸಲೆತ್ನಿಸುವುದು ಸರಿಯಲ್ಲ.ವಿಜಯ ದೊರೈರಾಜು,ಸಂಚಾಲಕ, ಆಟೋನಗರ ಮೂಲ ಸದಸ್ಯರ ಹಿತರಕ್ಷಣಾ ವೇದಿಕೆ ಬಹುದಿನದ ಬೇಡಿಕೆ ಆಟೋನಗರ ವಿವಾದ ಇತ್ಯರ್ಥಕ್ಕೆ ಈಗಾಗಲೇ ಯೋಜನೆ ರೂಪಿಸಿದ್ದು, ಪುನರ್ ಸರ್ವೇ ಕೈಗೊಳ್ಳುವ ಮೂಲಕ ಅರ್ಹರಿಗೆ ನಿವೇಶನದ ಹಕ್ಕುಪತ್ರ ನೀಡಲಾಗುವುದು. ಹಳೇ ಪಟ್ಟಿಯನ್ನು ಪರಾಮರ್ಶಿಸಲಾಗುವುದು.ಆರ್. ವಿರೂಪಾಕ್ಷಮೂರ್ತಿ,ಪೌರಾಯುಕ್ತ, ನಗರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net