375 ಗ್ರಾಮದಲ್ಲಿ ಕುಡಿಯಲು ಯೋಗ್ಯವಲ್ಲದ ನೀರು!

Water Supply
Published on

* ಜಿಲ್ಲೆಯ 375 ಭಾಗಗಳಲ್ಲಿ ಸಂಗ್ರಹಿಸಿದ ಮಾದರಿ ಪರೀಕ್ಷೆಯಿಂದ ಆತಂಕಕಾರಿ ಅಂಶ ಬಯಲು

* ರೋಗ ಹರಡಲು ಪ್ರಮುಖ ಕಾರಣ

ಗಂಗಾಧರ್ ಬೈರಾಪಟ್ಟಣ ರಾಮನಗರ

ಜಿಲ್ಲೆಯ 375 ಕಡೆ ಸಂಗ್ರಹಿಸಿದ್ದ ಕುಡಿಯುವ ನೀರನ್ನು ಪರೀಕ್ಷೆಗೆ ಒಳಪಡಿಸಿದ್ದು, ಕುಡಿಯಲು ಯೋಗ್ಯವಾಗಿಲ್ಲ ಎನ್ನುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.

ಕಲುಷಿತ ನೀರು ಸೇವನೆಯಿಂದ ತುಮಕೂರು ಜಿಲ್ಲೆಯಲ್ಲಿ 6ಕ್ಕೂ ಹೆಚ್ಚು ಮಂದಿ ಮೃತಪಟ್ಟ ಘಟನೆ ನಂತರ ಎಚ್ಚೆತ್ತ ಸರ್ಕಾರ, ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆ ಮಾಡಿ, ಕಾಲರಾದಂತಹ ಪ್ರಕರಣಗಳು ಹೆಚ್ಚದಂತೆ ಕ್ರಮವಹಿಸಲು ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗವೂ ಸೇರಿ ಜಿಲ್ಲೆಯ ಬಹುತೇಕ ಕೊಳವೆಬಾವಿ ಮತ್ತು ನೀರು ಪೂರೈಕೆ ಘಟಕಗಳ ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಈಗ ವರದಿ ಕೈಸೇರಿದ್ದು, 375 ಮಾದರಿಗಳು ಕುಡಿಯಲು ಯೋಗ್ಯವಾಗಿಲ್ಲ.

ಐದು ಸಾವಿರಕ್ಕೂ ಹೆಚ್ಚು

ಕಾಲರಾ ಹರಡಲು ಕಲುಷಿತ ನೀರೇ ಪ್ರಮುಖ ಕಾರಣ. ಈ ಹಿನ್ನೆಲೆಯಲ್ಲಿ ಪ್ರತಿ ಗ್ರಾಮದ ಓವರ್‌ಹೆಡ್ ಟ್ಯಾಂಕ್‌ಗಳು, ಸಾರ್ವಜನಿಕ ಕೊಳಾಯಿಗಳು, ಕೊಳವೆಬಾವಿಗಳು ಸೇರಿ ನೀರು ಪೂರೈಕೆ ಮಾಧ್ಯಮಗಳಿಂದ ನೀರನ್ನು ಸಂಗ್ರಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 5240 ಕಡೆಗಳಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಲು ಸೂಚನೆ ನೀಡಲಾಗಿತ್ತು. ಇದಕ್ಕಾಗಿ ಈಗಾಗಲೇ ಆರೋಗ್ಯ ಇಲಾಖೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಜಂಟಿಯಾಗಿ ನೀರಿನ ಮಾದರಿಯನ್ನು ಸಂಗ್ರಹಿಸಿತ್ತು.

ಇವುಗಳನ್ನು ಪ್ರಾಯೋಗಾಲಯಕ್ಕೆ ಕಳುಹಿಸಲಾಗಿದ್ದು, ಇದರಲ್ಲಿ 2837 ಮಾದರಿಗಳ ಪರೀಕ್ಷಾ ವರದಿ ಆರೋಗ್ಯ ಇಲಾಖೆ ಕೈ ಸೇರಿದೆ. ಇವುಗಳಲ್ಲಿ ಚನ್ನಪಟ್ಟಣ ತಾಲೂಕಿನ 35, ಹಾರೋಹಳ್ಳಿ ತಾಲೂಕಿನ 26, ಕನಕಪುರ ತಾಲೂಕಿನ 34 ಮಾಗಡಿಯ 155 ಮತ್ತು ರಾಮನಗರ ತಾಲೂಕಿನ 75 ಮಾದರಿಗಳು ಕಲುಷಿತಗೊಂಡಿವೆ. ಇದರೊಂದಿಗೆ ಮಾಗಡಿ ತಾಲೂಕಿನಲ್ಲಿ ಹೆಚ್ಚಿನ ಮಾದರಿಗಳು ಕಲುಷಿತಗೊಂಡಿರುವುದು ಆತಂಕ ಹೆಚ್ಚುವಂತೆ ಮಾಡಿದೆ. ಉಳಿದ ಮಾದರಿಗಳ ಪರೀಕ್ಷಾ ವರದಿ ಇನ್ನೂ ಬರಬೇಕಿದೆ.

ಸುರಕ್ಷತೆ ಮುಖ್ಯ

ಒಂದೆಡೆ ಕಾಲರಾ ಭಯ ಇದ್ದರೆ ಮತ್ತೊಂದೆಡೆ ಡೆಂಘೆ ಪ್ರಕರಣ ಹೆಚ್ಚುತ್ತಿವೆ. ಇದಕ್ಕೆ ಕಾರಣ ನೈರ್ಮಲ್ಯದ ಕೊರತೆ. ಬಹುತೇಕ ಕಡೆಗಳಲ್ಲಿ ಓವರ್‌ಹೆಡ್ ಟ್ಯಾಂಕ್‌ಗಳ ಬಳಿ ಕಳೆ ಬೆಳೆದುಕೊಳ್ಳುವ ಜತೆಗೆ ಮೋರಿ ನೀರು ಅಲ್ಲಿಯೇ ಸಂಗ್ರಹವಾಗುವ ವ್ಯವಸ್ಥೆ ಇದೆ. ಅಲ್ಲದೆ, ಕೆಲವು ಕಡೆಗಳಲ್ಲಿ ನೀರು ಪೂರೈಕೆ ಪೈಪ್‌ಗಳ ಬಳಿಯೇ ಒಳಚರಂಡಿಗಳು ಇವೆ.

ಇಂತಹ ಕಡೆಗಳಲ್ಲಿ ಸಾರ್ವಜನಿಕರು ಅಧಿಕಾರಿಗಳಿಗೆ ಮಾಹಿತಿ ನೀಡುವ ಜತೆಗೆ ಗ್ರಾಮಸ್ಥರೂ ಜನರ ಆರೋಗ್ಯದ ದೃಷ್ಟಿಯಿಂದ ಕೊಳಚೆಯನ್ನು ತೆರವುಗೊಳಿಸಿ, ಕಲುಷಿತ ಕುಡಿಯುವ ನೀರಿನೊಂದಿಗೆ ಸೇರದಂತೆ ನೋಡಿಕೊಳ್ಳಬೇಕಿದೆ. ಈಗಾಗಲೇ ಜಿಲ್ಲೆಯಲ್ಲಿ ಒಟ್ಟು 62 ಡೆಂಘೆ ಪ್ರಕರಣಗಳು ದೃಢಪಟ್ಟಿದ್ದು, ಇಬ್ಬರು ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಎಚ್ಚರವಹಿಸಿ

ಮಳೆಗಾಲವಾಗಿರುವುದರಿಂದ ನೀರು ಕಲುಷಿತಗೊಳ್ಳುವ ಜತೆಗೆ ನಿಂತಿರುವ ನೀರಿನಲ್ಲಿ ಡೆಂಘೆ ಸೇರಿ ಇತರ ಸಾಂಕ್ರಾಮಿಕ ಹರಡುವ ಸೊಳ್ಳೆಗಳ ಉತ್ಪತ್ತಿಯೂ ಹೆಚ್ಚುತ್ತಿದೆ. ಎಲ್ಲೆಡೆ ಕಲುಷಿತ ನೀರು ಸೇವನೆ ಹಾಗೂ ಸೊಳ್ಳೆಗಳ ಹಾವಳಿಯಿಂದ ಪ್ರಾಣ ಹಾನಿಯೂ ಆಗಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆವಹಿಸುವ ಅಗತ್ಯವಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕುದಿಸಿ ಆರಿಸಿದ ನೀರಿನ ಬಳಕೆ, ಬಿಸಿಯಾದ ಆಹಾರ ಸೇವನೆ, ಸಾಧ್ಯವಾದಷ್ಟೂ ಶುದ್ಧ ಕುಡಿಯುವ ನೀರಿನ ಬಳಕೆ ಮಾಡುವ ಹವ್ಯಾಸವನ್ನು ರೂಡಿಸಿಕೊಳ್ಳುವಂತೆ ಮನವಿ ಮಾಡಿದೆ. ಅಲ್ಲದೆ, ರಸ್ತೆ ಬದಿ ತಿಂಡಿಗಳನ್ನು ತಿನ್ನುವ ಮುನ್ನಾ ಎಚ್ಚರಿಕೆವಹಿಸಬೇಕು, ಮನೆಯ ಬಳಿ ನೀರು ಪೂರೈಕೆ ಆಗುವ ಪೈಪ್‌ಲೈನ್ ಬಳಿ ಕಲುಷಿತ ಮತ್ತು ಕೊಳಚೆ ನೀರು ಸೇರದಂತೆ ಎಚ್ಚರಿಕೆವಹಿಸಬೇಕು. ನೀರು ಸಂಗ್ರಹಿಸುವ ತೊಟ್ಟಿ ಸೇರಿದಂತೆ ಇತರ ವಸ್ತುಗಳನ್ನು ಆಗ್ಗಾಗ್ಗೆ ಸ್ವಚ್ಛಗೊಳಿಸುವ ಮೂಲಕ ಡೆಂಘೆ ಹರಡದಂತೆ ಕ್ರಮವಹಿಸಬೇಕಿದೆ.

ಡೆಂಘೆ ಮತ್ತು ಕಾಲರದಂತಹ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು. ಇದಕ್ಕಾಗಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಆರೋಗ್ಯ ಇಲಾಖೆ ಕಾಲ ಕಾಲಕ್ಕೆ ನೀಡುವ ನಿರ್ದೇಶನ ಪಾಲಿಸಬೇಕು. ಡಾ.ಬಿ.ಎಸ್.ನಿರಂಜನ್, ಡಿಎಚ್‌ಒ ರಾಮನಗರ

ಕಲುಷಿತ ನೀರಿನ ತಾಲೂಕುವಾರು ವರದಿ

ತಾಲೂಕು ಸಂಗ್ರಹ ಕಲುಷಿತ

ಚನ್ನಪಟ್ಟಣ 542 35

ಹಾರೋಹಳ್ಳಿ 241 26

ಕನಕಪುರ 731 34

ಮಾಗಡಿ 708 155

ರಾಮನಗರ 615 75

ಒಟ್ಟು 2837 375

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net