ಕಳಪೆ ಚಿನ್ನ ಮಾರಾಟ ಜಾಲ ಪತ್ತೆ, ಸಿಸಿಬಿಯಿಂದ 1.4 ಕೆಜಿ ಚಿನ್ನ, 98 ಸಾವಿರ ರೂ. ಜಪ್ತಿ

Gold
Published on

ಬೆಂಗಳೂರು: ನಗರ್ತಪೇಟೆಯ ಕೆಂಪಣ್ಣ ಲೇನ್‌ನಲ್ಲಿ 4ನೇ ಮಹಡಿಯಲ್ಲಿರುವ ಅಂಗಡಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಚಿನ್ನಾಭರಣ ಮಾರಾಟ ಯತ್ನಿಸಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಚಿನ್ನಾಭರಣ ವ್ಯಾಪಾರಿಗಳಾದ ನಿಖಿಲ್, ಗೌರವ್, ಸಮೀರ್ ಮತ್ತು ಗೌರವ್ ಬಂಧಿತರು.

ಆರೋಪಿಗಳಿಂದ 1.4 ಕೆಜಿ ಚಿನ್ನ ಹಾಗೂ 98 ಸಾವಿರ ರೂ. ಜಪ್ತಿ ಮಾಡಲಾಗಿದೆ. ಚಿನ್ನವನ್ನು ಕರಗಿಸಿ ಬಿಸ್ಕೆಟ್‌ಗಳನ್ನಾಗಿ ಪರಿವರ್ತಿಸಿ ಚಿನ್ನದ ಮೇಲೆ ಶುದ್ಧತೆ ಬಗ್ಗೆ ನಕಲಿ ಸೀಲು ಹಾಕಿ ಮಾರುತ್ತಿದ್ದರು. ನಿಗದಿತ ಪ್ರಮಾಣಕ್ಕಿಂತ ಕಡಿಮೆ ಚಿನ್ನದ ಅಂಶ ಇರುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಾರಾಷ್ಟ್ರ ಮೂಲದ ಆರೋಪಿಗಳು, ಹಲವು ವರ್ಷಗಳಿಂದ ನಗರ್ತಪೇಟೆಯಲ್ಲಿ ಚಿನ್ನಾಭರಣ ಮಳಿಗೆ ಹೊಂದಿದ್ದಾರೆ. ಸಗಟು ರೂಪದಲ್ಲಿ ಚಿನ್ನವನ್ನು ಮಾರುತ್ತಿದ್ದರು. ಸಣ್ಣಪುಟ್ಟ ವ್ಯಾಪಾರಿಗಳಿಗೆ ಪರಿಶುದ್ಧವಾದ ಚಿನ್ನದ ಗಟ್ಟಿ ಎಂದು ಸುಳ್ಳು ಹೇಳಿ ವಂಚನೆ ಮಾಡುತ್ತಿದ್ದರು. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇಲೆ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net