ಇಂದಿರಾ ಕ್ಯಾಂಟೀನ್ ಕಾಯಕಲ್ಪ ನಿರೀಕ್ಷೆ

INDIRA CANTEEN
Published on

ಪ್ರಕಾಶ್ ಮಂಜೇಶ್ವರ ಮಂಗಳೂರು

ದಿನಂಪ್ರತಿ ಒಂದು ಹೊತ್ತು 500 ಮಂದಿಯಂತೆ ಮೂರು ಹೊತ್ತು ಒಟ್ಟು 1500 ಮಂದಿಗೆ ವಿಶೇಷ ರಿಯಾಯಿತಿಯಲ್ಲಿ ಬೆಳಗ್ಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯೂಟ ಒದಗಿಸುವ ಇಂದಿರಾ ಕ್ಯಾಂಟೀನ್‌ಗಳು ಕಳೆದ ಕೆಲವು ವರ್ಷಗಳಲ್ಲಿ ತೀವ್ರ ಸೊರಗಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು ಐದು ಇಂದಿರಾ ಕ್ಯಾಂಟೀನ್‌ಗಳಿದ್ದು, ಪ್ರತಿ ಕ್ಯಾಂಟೀನ್‌ಗೆ ಒಂದು ಹೊತ್ತು 150- 200 ಮಂದಿ ಗ್ರಾಹಕರು ಮಾತ್ರ ಭೇಟಿ ನೀಡುತ್ತಿದ್ದಾರೆ.

ಗರಿಷ್ಠ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು, ಹೊರ ರಾಜ್ಯ ಹಾಗೂ ಜಿಲ್ಲೆಗಳ ಇತರ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಇರುವ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಐದು ರೂಪಾಯಿಗೆ ಒಂದು ಪ್ಲೇಟ್ ತಿಂಡಿ ಮತ್ತು 10 ರೂಪಾಯಿಗೆ ಒಂದು ಊಟ ಸಿಗುವ ಇಂದಿರಾ ಕ್ಯಾಂಟೀನ್ ಹೆಚ್ಚು ಮಂದಿ ಫಲಾನುಭವಿಗಳನ್ನು ಸೆಳೆಯುವಲ್ಲಿ ಯಾಕೆ ವಿಫಲವಾಯಿತು ಎನ್ನುವ ಚರ್ಚೆ ಸರ್ಕಾರದ ಮಟ್ಟದಲ್ಲಿ ನಡೆಯಲೇ ಇಲ್ಲ.

ಜನಸಾಮಾನ್ಯರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ತಮಿಳುನಾಡಿನಲ್ಲಿ ಇದ್ದ ‘ಅಮ್ಮ ಕ್ಯಾಂಟೀನ್’ ಮಾದರಿ 2017ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕರ್ನಾಟಕದಲ್ಲಿ ಆರಂಭಗೊಂಡ ಇಂದಿರಾ ಕ್ಯಾಂಟೀನ್‌ಗೆ ಆರಂಭಿಕ ಹಂತದಲ್ಲಿ ಜನರಿಂದ ಉತ್ತಮ ಸ್ಪಂದನೆ ಇತ್ತು. ಆದರೆ ನಂತರದ ದಿನಗಳಲ್ಲಿ ಈ ಬಗ್ಗೆ ಸರ್ಕಾರದ ಲಕ್ಷೃ ಕಡಿಮೆಯಾಗುತ್ತಾ ಹೋಯಿತು.

ಪ್ರತಿ ಹೊತ್ತು ತಲಾ 500 ಮಂದಿ ಫಲಾನುಭವಿಗಳು ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಸುಳ್ಳು ಲೆಕ್ಕ ತೋರಿಸಿ ಗುತ್ತಿಗೆದಾರರು ವಂಚನೆ ನಡೆಸುತ್ತಿದ್ದಾರೆ ಎನ್ನುವ ಆರೋಪವೂ ಕೆಲವು ಬಾರಿ ಕೇಳಿಬಂತು. ಕ್ಯಾಂಟೀನ್‌ನಲ್ಲಿ ದಿನಂಪ್ರತಿ ಎಷ್ಟು ಮಂದಿ ಆಹಾರ ಸೇವಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಲು ಸಮರ್ಪಕ ಮಾನದಂಡ ಇಲ್ಲದಿರುವುದು ಇಂತಹ ಸಂಶಯ ಸೃಷ್ಟಿಯಾಗಲು ಕಾರಣ.

ಮಾಜಿ ಪ್ರಧಾನಿ, ಕಾಂಗ್ರೆಸ್ ನಾಯಕಿ ಇಂದಿರಾ ಗಾಂಧಿ ಹೆಸರಿನಲ್ಲಿ ಯೋಜನೆ ಇರುವುದು ಮತ್ತು 2018ರ ಬಳಿಕ ಇತರ ರಾಜಕೀಯ ಪಕ್ಷಗಳು ಸರ್ಕಾರದ ಭಾಗವಾಗಿರುವುದು ಕೂಡ ಈ ಯೋಜನೆ ಹೆಚ್ಚಿನ ಗಮನ ಸೆಳೆಯದಿರಲು ಕಾರಣ. ಈ ಉದ್ದೇಶದಿಂದಲೇ ಕ್ಯಾಂಟೀನ್ ಹೆಸರು ಬದಲಾಯಿಸುವ ಪ್ರಯತ್ನ ಕೂಡ ನಡೆಯಿತು. ಯೋಜನೆಗೆ ಹಣ ಬಿಡುಗಡೆಯಲ್ಲೂ ಸಮಸ್ಯೆಯಾಯಿತು.

ಪ್ರಸ್ತುತ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಟೇಟ್‌ಬ್ಯಾಂಕ್, ಕೊಟ್ಟಾರ - ಉರ್ವಸ್ಟೋರ್, ಕಾವೂರು, ಪಂಪ್‌ವೆಲ್ ಮತ್ತು ಸುರತ್ಕಲ್‌ನಲ್ಲಿ ಒಟ್ಟು 5 ಇಂದಿರಾ ಕ್ಯಾಂಟೀನ್‌ಗಳಿವೆ. ಈ ಕ್ಯಾಂಟೀನ್‌ಗಳ ವೆಚ್ಚದ ಶೇ.70 ಮಹಾನಗರ ಪಾಲಿಕೆ ಮತ್ತು ಶೇ.30 ಭಾಗ ಕಾರ್ಮಿಕ ಇಲಾಖೆ ಭರಿಸುತ್ತಿದೆ. ಪಾಲಿಕೆ ವ್ಯಾಪ್ತಿಯ ಕ್ಯಾಂಟೀನ್‌ಗಳ ನಿರ್ವಹಣೆಯ ವೆಚ್ಚ ಮಾಸಿಕ ಒಟ್ಟು ಸರಾಸರಿ ಒಂಭತ್ತು ಲಕ್ಷ ರೂ. ಪಾವತಿಸಲಾಗುತ್ತಿದೆ. ವಲಸೆ ಕಾರ್ಮಿಕರು, ಆಟೊ ಚಾಲಕರು, ವಿದ್ಯಾರ್ಥಿಗಳು ಮಾತ್ರವಲ್ಲದೆ ಸರ್ಕಾರಿ ಆಸ್ಪತ್ರೆಗಳಲ್ಲಿ ದುಡಿಯುವ ಸಾಮಾನ್ಯ ವರ್ಗದ ನೌಕರರು ಕೂಡ ಇಂದಿರಾ ಕ್ಯಾಂಟೀನ್ ಗ್ರಾಹಕರ ಪಟ್ಟಿಯಲ್ಲಿ ಸೇರಿದ್ದಾರೆ.

ಸುಧಾರಣೆ ಹೇಗೆ?

ಬಹುತೇಕ ಎಲ್ಲರೂ ತಿಂಡಿ ಜತೆ ಚಹಾ ಕುಡಿಯುವ ಅಭ್ಯಾಸ ಹೊಂದಿದ್ದಾರೆ. ಆದರೆ ಇಂದಿರಾ ಕ್ಯಾಂಟೀನ್‌ನಲ್ಲಿ ಚಹಾ, ಕಾಫಿ ಇರುವುದಿಲ್ಲ. ಲಭ್ಯ ಸಂಪನ್ಮೂಲದಲ್ಲೇ ಊಟ, ಸಾಂಬಾರು ಜತೆಗೆ ಚಟ್ನಿ, ಪಲ್ಯ ಮುಂತಾದ ಉಪ ಭಕ್ಷೃಗಳನ್ನು ಕೊಡಬಹುದು. ನಗರದಲ್ಲಿರುವ ಗೂಡಂಗಡಿಗಳಲ್ಲಿ ಸಣ್ಣ ದರದಲ್ಲಿ ಲಭ್ಯವಾಗುವ ಗಂಜಿ ಊಟಕ್ಕೆ ಭಾರಿ ಬೇಡಿಕೆ ಇರುವುದನ್ನು ನೋಡಬಹುದು. ಬಹುಶಃ ಈ ಗಂಜಿ ಊಟಕ್ಕೆ ತಗಲುವ ವೆಚ್ಚ ಇಂದಿರಾ ಕ್ಯಾಂಟೀನ್‌ನ ಗುತ್ತಿಗೆದಾರರಿಗೆ ಸರ್ಕಾರ ಕೊಡುವ ವೆಚ್ಚಕ್ಕಿಂತ ಕಡಿಮೆ ಇರಬಹುದು. ಪ್ರಸ್ತುತ ಕ್ಯಾಂಟೀನ್‌ನಲ್ಲಿ ಪುಳಿಯೋಗರೆ, ಖಾರಾಬಾತ್, ಪೊಂಗಲ್‌ನಂತಹ ತಿಂಡಿಗಳು ಸಿಗುತ್ತವೆ. ಇದನ್ನು ಸ್ಥಳೀಯರ ಆಶ್ಯಕತೆಗಳಿಗೆ ತಕ್ಕಂತೆ ಬದಲಾಯಿಸಬೇಕು. ಕರಾವಳಿಯ ಜನರು ಇಡ್ಲಿ- ಸಾಂಬಾರು, ದೋಸೆಯಂತಹ ತಿಂಡಿಗಳನ್ನು ಸಾಮಾನ್ಯವಾಗಿ ಇಷ್ಟಪಡುತ್ತಾರೆ.

ಜನಸಾಮ್ಯಾರು ಮತ್ತು ಮಧ್ಯಮ ವರ್ಗದ ಜನರ ಆವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದೆ. ಇದು ಹೆಚ್ಚಿನ ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ವ್ಯವಸ್ಥೆಯಲ್ಲಿ ಇರುವ ಲೋಪದೋಷಗಳನ್ನು ಸರಿಪಡಿಸಲಾಗುವುದು. ಸರ್ಕಾರ ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದು.- ಯು.ಟಿ.ಖಾದರ್ ಸ್ಪೀಕರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net