

ಚನ್ನರಾಯಪಟ್ಟಣ: ಕನ್ನಡ ಭಾಷೆಗೆ ಐದು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದ್ದು, ಸಿಂಧು ನಾಗರಿಕತೆಯ ಕುರುಹುಗಳಿಂದ ಸಾಕ್ಷೀಕರಿಸಬಹುದು. ಭಾಷೆಯನ್ನೆ ಬಳಸದೆ ಬರೀ ಅಂಕಿಗಳಿಂದಲೇ ಸಾಹಿತ್ಯ ಸೃಷ್ಟಿಸುವ ಶಕ್ತಿ ನಮ್ಮ ಕನ್ನಡದ ವಿದ್ವಾಂಸರಿಗೆ ಇತ್ತು ಎಂದು ಸಾಹಿತಿ ಡಾ.ಸೋಮೇಶ್ವರ ಹೇಳಿದರು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ದೆಹಲಿಯ ಶ್ರೀ ಸತ್ಯಸಾಯಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪ್ರಥಮ ಹೊರನಾಡು ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಇಂದಿನ ಮಕ್ಕಳಿಗೆ ಕನ್ನಡ ಭಾಷೆಯ ಇತಿಹಾಸ, ಸಾಂಸ್ಕೃತಿಕ ಹಿರಿಮೆ, ಸಾಹಿತ್ಯ ಸಮೃದ್ಧಿಯ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ಮಕ್ಕಳು ಮೊಬೈಲ್ ಗೀಳಿಗೆ ಬಲಿಯಾಗುತ್ತಿದ್ದು, ಪಾಲಕರು ಈ ಬಗ್ಗೆ ಎಚ್ಚರ ವಹಿಸಬೇಕು. ಇಂದಿನ ತಾಂತ್ರಿಕ ವ್ಯವಸ್ಥೆಯಲ್ಲಿ ವ್ಯಾಸಂಗಕ್ಕೆ ಮೊಬೈಲ್ ಅವಶ್ಯಕತೆ ಇರುವುದರಿಂದ ಒಂದು ನಿರ್ದಿಷ್ಟ ಅವಧಿಯಲ್ಲಿ ಮಕ್ಕಳಿಗೆ ಮೊಬೈಲ್ ನೀಡಿ, ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.
ಉದ್ಘಾಟನಾ ಸಮಾರಂಭ ಅಧ್ಯಕ್ಷತೆ ವಹಿಸಿದ್ದ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡಿ, ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಮೂಡಿಸಲು ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ ಶ್ರಮಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ, ಪರಿಷತ್ತಿಗೆ ಸರ್ಕಾರದಿಂದ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.
ಮಕ್ಕಳ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಗಳು ಮಕ್ಕಳಿಗೆ ಮಾತ್ರ ಸೀಮಿತವಾಗಬೇಕು. ಸಮ್ಮೇಳನಾಧ್ಯಕ್ಷರು, ಉದಯೋನ್ಮುಖ ಬಾಲ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿದಾಗ ಮಾತ್ರ ಈ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದರು.
ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ಭಾಷೆ, ಸಾಹಿತ್ಯ, ಸಂಸ್ಕೃತಿ ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಯಾವುದೇ ಸರ್ಕಾರವಾಗಲಿ ಇಂತಹ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕು. ಕನ್ನಡ ಭಾಷೆ ಹಾಗೂ ಸಾಹಿತ್ಯವನ್ನು ಹೊರ ರಾಜ್ಯಗಳಲ್ಲಿ ನೆಲೆಸಿರುವ ಕನ್ನಡಿಗರಿಗೆ ತಲುಪಿಸಲು, ಜಾಗೃತಿ ಮೂಡಿಸಲು ಮಕ್ಕಳ ಸಾಹಿತ್ಯ ಪರಿಷತ್ತು ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಿರುವ ಸಮ್ಮೇಳನ ಬಹಳ ಉಪಯುಕ್ತವಾಗಿದೆ. ಹೊರ ರಾಜ್ಯಗಳಲ್ಲಿ ನೆಲೆಸಿರುವ ಕನ್ನಡಿಗರು ರಾಷ್ಟ್ರದ ವಿವಿಧ ಭಾಗಗಳಿಂದ ಆಗಮಿಸಿ ಕನ್ನಡದ ಬೆಸುಗೆ ಬೆಸೆಯುವಲ್ಲಿ ಕಾರಣರಾಗಿದ್ದು, ದೆಹಲಿಯ ಕರ್ನಾಟಕ ಸಂಘದ ಕಾರ್ಯ ಶ್ಲಾಘನೀಯ ಎಂದರು.
ಹೊರನಾಡ ಕನ್ನಡಿಗರಿಗೆ ನಮ್ಮ ಭಾಷೆಯ ಬಗ್ಗೆ ಪ್ರೀತಿ, ಅಭಿಮಾನ ಮೂಡಿಸುವ ಕೆಲಸ ಇಂತಹ ಕಾರ್ಯಕ್ರಮಗಳಿಂದ ಆಗುತ್ತಿದೆ. ಅಮೆರಿಕದ ಅಕ್ಕ ಸಮ್ಮೇಳನದಂತೆ ಈ ಮಕ್ಕಳ ಸಾಹಿತ್ಯ ಸಮ್ಮೇಳನವು ಮಕ್ಕಳಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ಜಾನಪದವನ್ನು ತಿಳಿಸಿಕೊಡುವ ಕೆಲಸ ಮಾಡಿದಾಗ ಭಾಷೆ ಉಳಿಯುತ್ತದೆ ಎಂದು ತಿಳಿಸಿದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಮಕ್ಕಳ ಸಾಹಿತ್ಯ ಪರಿಷತ್ತಿಗೆ ಸರ್ಕಾರದಿಂದ ಅನುದಾನ ನೀಡಿ ಕನ್ನಡದ ಬೇರನ್ನು ಗಟ್ಟಿಗೊಳಿಸಲು ಅನುಕೂಲ ಮಾಡಿಕೊಡಬೇಕು. ಮಕ್ಕಳ ಸಾಹಿತ್ಯ ಪರಿಷತ್ತು ದಶಮಾನೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಸರ್ಕಾರದ ನೆರವು ಬೇಕಾಗಿದೆ. ಈ ನಿಟ್ಟಿನಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಮುಖ್ಯಮಂತ್ರಿಗಳ ಬಳಿ ಚರ್ಚಿಸಬೇಕು ಎಂದು ಕೋರಿದರು.
ವಿದ್ಯಾರ್ಥಿಗಳು ಪುಸ್ತಕ ಅಭಿರುಚಿ ಜತೆಗೆ ಪರಿಸರ ಅಭಿರುಚಿ ಬೆಳೆಸಿಕೊಳ್ಳಬೇಕು. ಸಾಹಿತ್ಯದ ಬೇರುಗಳನ್ನು ಗಟ್ಟಿಗೊಳಿಸುವ ವೇದಿಕೆ ಇದಾಗಿದ್ದು ಮಕ್ಕಳ ಸಾಹಿತ್ಯ ಪರಿಷತ್ತಿನ ಮೂಲಕ ಕನ್ನಡ ಉಳಿಯುವಿಕೆಯನ್ನು ಕಾಣಬಹುದು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ರಾಜ್ಯ ಪರಿಷತ್ ಅಧ್ಯಕ್ಷ ಸಿ.ಎನ್.ಅಶೋಕ್, ಕೇಂದ್ರ ಸಮಿತಿ ಸಂಚಾಲಕ ಸಿ.ಎಸ್.ಅರುಣ್, ದೆಹಲಿ ಘಟಕದ ಅಧ್ಯಕ್ಷ ಅರವಿಂದ ಬಿಜೈ, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ಎಂ ನಾಗರಾಜ್, ನಿಕಟಪೂರ್ವ ಅಧ್ಯಕ್ಷ ವಸಂತಶೆಟ್ಟಿ ಬೆಳ್ಳಾರೆ ಇದ್ದರು.