ಪ್ರಕೃತಿ ಬಳಸಿಕೊಂಡು ಆರೋಗ್ಯ ವೃದ್ಧಿಸಿಕೊಳ್ಳಿ

15-kkr1(3-24
Published on

ಕಿಕ್ಕೇರಿ: ನಮ್ಮ ಪ್ರಕೃತಿಯೇ ಆರೋಗ್ಯದ ತಾಣವಾಗಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಂಡರೆ ಸಾಕು ಎಂದು ಆಯುಷ್ ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ತಿಳಿಸಿದರು.


ಇಲ್ಲಿನ ಕೆಪಿಎಸ್ ಪ್ರೌಢಶಾಲೆಯಲ್ಲಿ ಸರ್ಕಾರಿ ಆಯುಷ್ಮಾನ್ ಆರೋಗ್ಯ ಮಂದಿರ ವತಿಯಿಂದ ಐಇಸಿ ತರಬೇತಿ ಮತ್ತು ಆರೋಗ್ಯ ಕಾರ್ಯಕ್ರಮದಡಿ ಶುಕ್ರವಾರ ಏರ್ಪಡಿಸಿದ್ದ ಆಯುಷ್ ಪರಿಚಯ ಮತ್ತು ಆರೋಗ್ಯ ಸಲಹಾ ಕೈಪಿಡಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಆರೋಗ್ಯ ಸಲಹಾ ಕೈಪಿಡಿ ನೀಡಿ ಮಾತನಾಡಿದರು.


ದೈನಂದಿನ ಕಾರ್ಯದ ಮೇಲೆ ನಮ್ಮ ಆರೋಗ್ಯ ಬಿಂಬಿತವಾಗಿದೆ. ಅಡ್ಡಪರಿಣಾಮವಿಲ್ಲದ ಆಯುಷ್ ಚಿಕಿತ್ಸೆ ಬಳಸಿಕೊಳ್ಳಿ. ಬೇಗ ಏಳಿ, ಬೇಗ ಮಲಗಿ, ಮಿತವಾಗಿ ಋತುವಿಗೆ ತಕ್ಕ ಆಹಾರ ಸೇವಿಸಿ ಬಹುತೇಕ ರೋಗಗಳಿಗೆ ಕಡಿವಾಣ ಹಾಕಬಹುದು ಎಂದರು.


ಟಿವಿ, ಮೊಬೈಲ್ ವೀಕ್ಷಣೆಯೊಂದಿಗೆ ಮಾತನಾಡುತ್ತ ಆಹಾರ ಸೇವಿಸದಿರಿ. ಹಳಸಿದ, ಬಿಸಿ ಮಾಡಿದ ಆಹಾರ, ಪ್ರಿಡ್ಜ್‌ನಲ್ಲಿ ಶೇಖರಿಸಿದ ಆಹಾರ ಪದಾರ್ಥದಿಂದ ದೂರವಿರಿ. ಮಸಾಲೆ, ಎಣ್ಣೆ ಖರಿದ ಆಹಾರಕ್ಕೆ ಕಡಿವಾಣ ಇರಲಿ ಎಂದು ತಿಳಿಸಿದರು.


ಪರೀಕ್ಷೆ ಸಮಯದಲ್ಲಿ ಮರೆವು, ಭಯದ ಆತಂಕ ಸಹಜ. ಕಲಿತಷ್ಟು ಸ್ಪಷ್ಟವಾಗಿ ಬರೆಯಲು ಸಕಾರಾತ್ಮಕ ಯೋಚನೆ ರೂಢಿಸಿಕೊಳ್ಳಿ. ಯೋಗ, ಧ್ಯಾನ, ಪ್ರಾಣಾಯಮಕ್ಕೆ ಸ್ವಲ್ಪ ವೇಳೆ ಬಳಸಿಕೊಳ್ಳಿ. ಒಂದೆಲಗ, ಬೆಟ್ಟದ ನೆಲ್ಲಿಯನ್ನು ಬಳಸಿ, ಜ್ಞಾಪಕಶಕ್ತಿಗೆ ಸಹಕಾರಿಯಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಆರೋಗ್ಯ ಟಿಫ್ಸ್ ತಿಳಿಸಿಕೊಟ್ಟರು.


ಮಕ್ಕಳು ಹತ್ತು ಹಲವು ಸಮಸ್ಯೆಗಳನ್ನು ವೈದ್ಯರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಂಡರು. ಮಕ್ಕಳಿಗೆ ಯೋಗಾಭ್ಯಾಸದ ಪ್ರಾತ್ಯಕ್ಷಿಕೆ ನೀಡಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣೇಗೌಡ, ಸದಸ್ಯ ದಿನೇಶ್‌ಬಾಬು, ಚಂದ್ರಶೇಖರ್, ಡಾ.ನಾಗವೇಣಿ, ಶಿಕ್ಷಕ ಎಸ್.ಎಂ.ಬಸವರಾಜು, ಬಿ.ಎಂ.ಪರಶಿವಮೂರ್ತಿ, ಕೃಷ್ಣಪ್ಪ, ಸುರೇಶ್, ಗಿರೀಶ್, ಲೀಲಾವತಿ, ರಾಗಿಣಿ, ರಮ್ಯಾ, ಪ್ರಸನ್ನ, ದೀಪಕ್, ಚಂದ್ರೇಗೌಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net