ಗ್ಯಾರಂಟಿ ಯೋಜನೆ ಸಮರ್ಪಕ ಅನುಷ್ಟಾನಗೊಳಿಸಿ; ಎಸ್.ಆರ್.ಪಾಟೀಲ ಸೂಚನೆ

S R PATIL MEETING GARANTEE SCHEAM
ವಿಜಯಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪಂಚ ಗ್ಯಾರಂಟಿ ಯೋಜನೆ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಸಿಇಒ ರಿಷಿ ಆನಂದ ಇದ್ದಾರೆ.
Published on

ವಿಜಯಪುರ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕ ಅನುಷ್ಟಾನಗೊಳಿಸುವ ಮೂಲಕ ಯಾವುದೇ ಅರ್ಹಫಲಾನುಭವಿಗಳು ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಪಂಚ ಗ್ಯಾರಂಟಿ ಯೋಜನೆ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷಗಳನ್ನು ಪೂರೈಸಿದೆ. ಅಧಿಕಾರ ವಹಿಸಿಕೊಂಡ ಒಂದು ವರ್ಷದಲ್ಲಿಯೇ ಪಂಚ ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿಗೊಳಿಸಿ, ಜನರಿಗೆ ಅನುಕೂಲ ಕಲ್ಪಿಸಲು ಯೋಜನೆಗಳನ್ನು ರೂಪಿಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಪಂಚ ಗ್ಯಾರಂಟಿ ಯೋಜನೆಯಡಿ 3177.78 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಈ ಯೋಜನೆಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ತಲುಪುವಂತಾಗಬೇಕು. ಈ ಕುರಿತು ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಪ್ರಚಾರ ಫಲಕಗಳನ್ನು ಅಳವಡಿಸಬೇಕು. ಕಟ್ಟ ಕಡೆಯ ಅರ್ಹ ಫಲಾನುಭವಿಗಳಿಗೆ ಯೋಜನೆ ಲಾಭ ದೊರಕಿಸಬೇಕು. ಪಂಚಾಯಿತಿ ಮಟ್ಟಗಳಲ್ಲಿ ಶಿಬಿರಗಳನ್ನು ಆಯೋಜಿಸಿ ಯೋಜನೆಗಳ ಲಾಭ ದೊರಕಿಸಲು ಕ್ರಮ ವಹಿಸಬೇಕು ಎಂದರು.

ಗೃಹ ಜ್ಯೊತಿ ಯೋಜನೆಯಡಿ ಪ್ರತಿ ಫಲಾನುಭವಿಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಗೃಹ ಲಕ್ಷ್ಮಿ ಯೋಜನೆಯಡಿ ಪಡೆದ ಹಣದಿಂದ ತಮ್ಮ ಬದುಕಿನಲ್ಲಿ ಆದ ಬದಲಾವಣೆಗಳ ಕುರಿತ ಫಲಾನುಭವಿಗಳ ಯಶೋಗಾಥೆ ಪ್ರಕಟಿಸುವ ಮೂಲಕ ಯೋಜನೆಗಳ ಮಾಹಿತಿ ಪ್ರತಿಯೊಬ್ಬರಿಗೂ ತಲುಪಿಸಲು ವ್ಯಾಪಕವಾಗಿ ಪ್ರಚಾರ ಕೈಗೊಳ್ಳುವಂತೆ ಅವರು ಸೂಚಿಸಿದರು.

ಶಕ್ತಿ ಯೋಜನೆಯಡಿ ಮೇ 2025ರ ಅಂತ್ಯದವರೆಗೆ 13.18 ಕೋಟಿ ಮಹಿಳೆಯರು ಪ್ರಯಾಣ ಬೆಳೆಸಿದ್ದು, ಒಟ್ಟು 426 ಕೋಟಿ ರೂ. ವೆಚ್ಚ ಮಾಡಲಾಗಿದೆ. ಪ್ರತಿ ಬಸ್ ನಿಲ್ದಾಣಗಳಲ್ಲಿ ಸಿಸಿಟಿವಿ, ಶೌಚಗೃಹ, ಶುದ್ಧ ಕುಡಿಯುವ ನೀರು, ಮಹಿಳೆಯರಿಗೆ ವಿಶ್ರಾಂತಿ ಕೊಠಡಿಗಳ ಸೌಲಭ್ಯ ಸೇರಿದಂತೆ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಅವರು ತಿಳಿಸಿದರು.

ಯುವ ನಿಧಿ ಯೋಜನೆಯಿಂದ ಹಲವು ನಿರುದ್ಯೋಗಿಗಳಿಗೆ ಸಹಕಾರಿಯಾಗಿದೆ. ಯುವಕರಿಗೆ ತರಬೇತಿ ಮತ್ತು ಉದ್ಯೋಗ ಮೇಳಗಳನ್ನು ಆಯೋಜಿಸಬೇಕು. ನಿರುದ್ಯೋಗಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲು ಆಸಕ್ತಿ ತೋರುವಂತೆ ಕ್ರಮವಹಿಸಬೇಕು ಎಂದರು.

ಜಿಪಂ ಸಿಇಒ ರಿಷಿ ಆನಂದ ಮಾತನಾಡಿ, ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯತ್‌ನಲ್ಲಿ ಹಾಗೂ ಎಲ್ಲ ಸರ್ಕಾರಿ ಕಚೇರಿಗಳಲ್ಲಿ, ಪಡಿತರ ಅಂಗಡಿಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಚಾರ ಫಲಕಗಳನ್ನು ಅಳವಡಿಸಬೇಕು. ಮುಂದಿನ ಸಭೆಯೊಳಗಾಗಿ ಪ್ರಚಾರ ಫಲಕ ಅಳವಡಿಸಿರುವ ಮಾಹಿತಿ ಒದಗಿಸಬೇಕು ಎಂದರು.

ಪಂಚ ಗ್ಯಾರಂಟಿ ಯೋಜನೆ ಅನುಷ್ಟಾನದಲ್ಲಿ ವಿಜಯಪುರ ಜಿಲ್ಲೆ ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ತಿಕೋಟಾ ತಾಲೂಕು ಗೃಹಲಕ್ಷ್ಮಿ ಯೋಜನೆ ಅನುಷ್ಟಾನದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಯೋಜನೆಯಿಂದ ಹೊರಗುಳಿದ ಫಲಾನುಭವಿಗಳನ್ನು ಗುರುತಿಸಿ ಅರ್ಹ ಫಲಾನುಭವಿಗಳಿಗೆ ಯೋಜನೆ ವ್ಯಾಪ್ತಿಗೊಳಪಡಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಇಲಿಯಾಸ ಬೋರಾಮಣಿ, ಉಪಾಧ್ಯಕ್ಷ ಹೊನ್ನಮಲ್ಲ ಸಾರವಾಡ, ಸುಂದರಪಾಲ ರಾಠೋಡ, ನಬಿಲಾಲ ನಾಯ್ಕೋಡಿ, ಆನಂದ ಜಾಧವ, ಮಹಾದೇವಿ ಗೋಕಾಕ, ಸದಸ್ಯರಾದ ಆರತಿ ನಾವಿ, ಸಾಹೇಬಗೌಡ ಬಿರಾದಾರ, ಮಲ್ಲಪ್ಪ ದಳವಾಯಿ, ಗುರುಪಾದಗೌಡ ದಾಶ್ಯಾಳ, ಶ್ರೀಶೈಲ ಕವಲಗಿ, ರವಿದಾಸ ಜಾಧವ, ಮೈಬೂಬಸಾಬ ನಾಯ್ಕಡಿ, ಸಂತೋಷ ಗಣಾಚಾರಿ, ಶಂಕರಗೌಡ ಹಿರೇಗೌಡರ, ಚಂದ್ರಶೇಖರ ಹಳೆಮನಿ, ರಾಜಶೇಖರ ಅವಜಿ, ಪ್ರಶಾಂತ ಕಾಳೆ, ಸಂಗನಗೌಡ ದೇಸಾಯಿ, ಶರಣಬಸಪ್ಪ ಚೌರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net